
ದೇರಳಕಟ್ಟೆ : ಯಕ್ಷಗಾನದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ನಾಯಕತ್ವದ ಗುಣವನ್ನೂ ಸಹ ಹೆಚ್ಚಿಸಲು ಸಹಕಾರಿಯಾಗುವುದು ಎಂದು ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಗುರುರಾಜ್ ಭಟ್ ಕೈರಂಗಳ ಅಭಿಪ್ರಾಯಪಟ್ಟರು.
ಯಕ್ಷರಂಗ ಯಕ್ಷಗಾನ ತರಬೇತಿ ಕೇಂದ್ರ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಕಾರದಲ್ಲಿ ದೇರಳಕಟ್ಟೆಯ ಶ್ರೀ ಅಯ್ಯಪ್ಪ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಉಚಿತ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯಕ್ಷಗಾನದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಯು ಮುಂದೆ ತನ್ನ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು, ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯುತ ವರ್ತನೆ ವಿಕಸಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಯಕ್ಷಗಾನವು ಉತ್ತಮ ಪಾಠಶಾಲೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅನ್ನಸಂತರ್ಪಣಾ ಸಮಿತಿ ಸಂಚಾಲಕ ಶರತ್ ರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕೃಷ್ಣಪ್ಪ ಕಿನ್ಯ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಸಂಚಾಲಕ ರೋಹಿತ್ ಬಗಂಬಿಲ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪುರಸ್ಕೃತ, ರಾಮ ಸಾಲ್ಯಾನ್ ಮಂಗಲ್ಪಾಡಿ ಯಕ್ಷಗುರುಗಳಾಗಿ ಹಾಗೂ ಸಹಯಕ್ಷಗುರುಗಳಾಗಿ ಶ್ರೀಧರ್ ಬಲ್ಲಾಳ್ ಚಿಪ್ಪಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
ಪಶುಪತಿ ಆಚಾರ್ಯ ಜೆಪ್ಪಿನಮೊಗರು ಸ್ವಾಗತಿಸಿದರು. ಕಿಶೋರಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಶಾಂತ್ ದೇರಳಕಟ್ಟೆ ನಿರೂಪಿಸಿದರು. ಸುರೇಶ್ ಮಂಜನಾಡಿ ವಂದಿಸಿದರು.
