Site icon Ullalavani

ಪುತ್ತೂರು ಪ್ರಕರಣದಲ್ಲಿ ಅನಾಥವಾದ ಮಗು: ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರೇ ಇಲ್ಲ !

ಪುತ್ತೂರಿನ ಬಿಜೆಪಿ ಮುಖಂಡ, ವಾಸ್ತು ತಜ್ಞ ಹಾಗೂ ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರ ಕೃತ್ಯವು ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ತನ್ನ ಸಹಪಾಠಿಯಾಗಿದ್ದ ಯುವತಿಯನ್ನು ಮದುವೆಯಾಗುವ ಭರವಸೆ ನೀಡಿ, ವಂಚಿಸಿ, ಅತ್ಯಾಚಾರವೆಸಗಿ, ಆಕೆಯನ್ನು ಬಸುರಿಯಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡಿರುವ ಆರೋಪದಡಿ ಕೃಷ್ಣ ಜೆ. ರಾವ್ ಕಂಬಿಗಳ ಹಿಂದೆ ಇದ್ದಾನೆ. ಆದರೆ ಮಗುವಿನ ಜನನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರೇ ಇಲ್ಲದೇ ಅನಾಥ ಎಂಬಂತೆ ಬಿಂಬಿಸಿದೆ.

ಘಟನೆಯು ಕೇವಲ ಒಂದು ಕಾನೂನು ಪ್ರಕರಣವಾಗಿ ಮಾತ್ರ ಉಳಿಯದೆ, ಸಂಸ್ಕೃತಿ, ಸಂಸ್ಕಾರ, ಶಿಕ್ಷಣ, ಮತ್ತು ಸಾಮಾಜಿಕ ನ್ಯಾಯದ ಕೊರತೆಯನ್ನು ಪ್ರಶ್ನಿಸುವಂತಹ ಗಂಭೀರ ವಿಷಯವಾಗಿ ಎದ್ದು ಕಾಣುತ್ತಿದೆ.
ಕೃಷ್ಣ ಜೆ. ರಾವ್ ಅವರ ತಂದೆ ಜಗನ್ನಿವಾಸ ರಾವ್ ಒಬ್ಬ ಧಾರ್ಮಿಕ ವಾಸ್ತು ತಜ್ಞ, ಸಾಮಾಜಿಕ ಕಾರ್ಯಕರ್ತ, ಮತ್ತು ರಾಜಕೀಯ ಮುಖಂಡ. ತಾಯಿಯು ಶಿಕ್ಷಕಿಯಾಗಿದ್ದಾರೆ. ಇದು ಕೇವಲ ವೈಯಕ್ತಿಕ ವಿಫಲತೆಯಲ್ಲ, ಬದಲಿಗೆ ಸಮಾಜದಲ್ಲಿ ನಾವು ಜಪಿಸುವ ಸಂಸ್ಕೃತಿ ಮತ್ತು ಸಂಸ್ಕಾರದ ಮೇಲೆ ಪ್ರಶ್ನೆಯನ್ನು ಎತ್ತುತ್ತದೆ.
ಒಬ್ಬ ಯುವತಿಯ ಜೀವನವನ್ನು, ಆಕೆಯ ಗೌರವವನ್ನು ಕಸಿದುಕೊಂಡು, ಒಂದು ಮಗುವಿನ ಭವಿಷ್ಯವನ್ನು ಅನಿಶ್ಚಿತತೆಯ ಕಡೆಗೆ ತಳ್ಳಿರುವ ಈ ಕೃತ್ಯವು ನಮ್ಮ ಸಂಸ್ಕೃತಿಯ ದುರ್ಬಲತೆಯನ್ನು ಬಯಲಿಗೆಳೆಯುತ್ತದೆ.
ಮಗುವಿನ ಭವಿಷ್ಯ ಮತ್ತು ಕಾನೂನಿನ ಸವಾಲು : ಈ ಸಂಬಂಧದಿಂದ ಜನಿಸಿದ ಮಗು ಈಗ ತಂದೆಯಿಲ್ಲದೆ ಅನಾಥವಾಗಿದೆ. ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ನಮೂದಿಸದಿರುವುದು, ಆಸ್ಪತ್ರೆಯ ಮಾಲೀಕರಿಂದ ತಂದೆಯ ಹೆಸರು ಹಾಕಲು ನಿರಾಕರಣೆ. ಇವೆಲ್ಲವೂ ಕಾನೂನಿನ ದೃಷ್ಟಿಯಿಂದ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸುತ್ತವೆ. ಭಾರತದ ಕಾನೂನಿನ ಪ್ರಕಾರ, ಜನನ ಪ್ರಮಾಣ ಪತ್ರದಲ್ಲಿ ತಂದೆ-ತಾಯಿಯ ಹೆಸರು ನಮೂದಿಸುವುದು ಕಡ್ಡಾಯವಾಗಿದೆ. ಇದು ಆಗದಿದ್ದರೆ, ಮಗುವಿನ ಜನನ ಪತ್ರವು ಅಪೂರ್ಣವಾಗುತ್ತದೆ, ಇದರಿಂದ ಆ ಮಗುವಿನ ಭವಿಷ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀಳಬಹುದು.

ಕಾನೂನು ತನ್ನ ಕೆಲಸ ಮಾಡುತ್ತಿದೆ. ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ, ಅವನು ಬಂಧನದಲ್ಲಿದ್ದಾನೆ. ಆದರೆ, ನ್ಯಾಯಾಲಯದಲ್ಲಿ ಜಾಮೀನು ಸಿಗುವ ಸಾಧ್ಯತೆಯಿಂದಾಗಿ, ನ್ಯಾಯದ ಪ್ರಶ್ನೆ ಇನ್ನೂ ಅತಂತ್ರವಾಗಿದೆ. ಕಾನೂನು ಕೇವಲ ಶಿಕ್ಷೆಯನ್ನು ನೀಡಬಹುದು, ಆದರೆ ಒಡದಿರುವ ಯುವತಿಯ ಜೀವನ, ಮಗುವಿನ ಭವಿಷ್ಯ, ಮತ್ತು ಸಮಾಜದಲ್ಲಿ ಮೂಡಿರುವ ಗಾಯವನ್ನು ಗುಣಪಡಿಸಲು ಕಾನೂನು ಒಂದೇ ಸಾಕಾಗದು.

ಜಾತಿಯ ಬೇಧವನ್ನು ಬಿಟ್ಟು, ಯುವತಿಯೊಂದಿಗೆ ಕೃಷ್ಣ ಜೆ. ರಾವ್‌ನ ಮದುವೆಯನ್ನು ಒಪ್ಪಿಸಿ, ಸಂಸಾರ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಈ ಕುಟುಂಬವು ಹಿಂದು ಸಮಾಜಕ್ಕೆ ಆದರ್ಶವಾಗಬೇಕು. ಇದು ಕೇವಲ ಒಂದು ಕುಟುಂಬದ ಕಥೆಯಲ್ಲ, ಸಮಾಜದ ಒಟ್ಟಾರೆ ನೈತಿಕತೆಯನ್ನು ಪ್ರಶ್ನಿಸುವ ಒಂದು ಘಟನೆಯಾಗಿದೆ.

ಹಿಂದೂ ಸಮಾಜದ ಒಂದು ಕರೆ

ಒಂದು ಯುವತಿಯ ಜೀವನ, ಒಂದು ಮಗುವಿನ ಭವಿಷ್ಯ, ಮತ್ತು ಸಮಾಜದ ಗೌರವವನ್ನು ಕಾಪಾಡುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು. ಜಗನ್ನಿವಾಸ ರಾವ್ ಕುಟುಂಬವು ತಮ್ಮ ತಪ್ಪನ್ನು ಸರಿಪಡಿಸಿಕೊಂಡು, ಸಮಾಜಕ್ಕೆ ಆದರ್ಶವಾಗುವ ಮೂಲಕ ಈ ದುರಂತವನ್ನು ಒಂದು ಆಶಾದಾಯಕ ಭವಿಷ್ಯವಾಗಿ ಪರಿವರ್ತಿಸಬೇಕು.

Exit mobile version