Site icon Ullalavani

ಕೊಣಾಜೆ: ಕೃಷಿ ಖುಷಿ‌ ಕಾರ್ಯಕ್ರಮ ಉದ್ಘಾಟನೆ

ಕೊಣಾಜೆ: ಆಧುನಿಕತೆಯ ಭರಾಟೆಯಲ್ಲಿ ಬದುಕನ್ನು ಕಳೆದುಕೊಳ್ಳದೆ ಪಾರಂಪರಿಕ ಜೀವನದ ಮಹತ್ವವನ್ನು ಅರಿತುಕೊಳ್ಳಬೇಕು. ನಗರ ಜೀವನಕ್ಕೂ ಗ್ರಾಮೀಣ ಜೀವನಕ್ಕೂ ವ್ಯತ್ಯಾಸ ಇದೆ. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು, ಪರಿಸರ ಹಾಗೂ ಕೃಷಿಯ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದು ವಿಜಯ ಗ್ರಾಮೀಣ ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್ ಅವರು ಹೇಳಿದರು.
ಮಂಗಳ ಗ್ರಾಮೀಣ ಯುವಕ ಸಂಘ(ರಿ) ಕೊಣಾಜೆ, ನಾಗ ಬ್ರಹ್ಮ ಸ್ವಸಹಾಯ ಸಂಘ ಕೆಳಗಿನ ಮನೆ, ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಕೊಣಾಜೆ ಪದವು ಶಾಲಾಭಿವೃದ್ಧಿ ಸಮಿತಿ ಕೊಣಾಜೆ ಪ್ರೌಢಶಾಲಾ ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ಕೊಣಾಜೆ‌ ಪದವು ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಕೆಳಗಿನ ಮನೆ ಬಳಿ ‘ಕೆಸರು ಗದ್ದೆಯಲ್ಲೊಂದು ದಿನ ಹಾಗೂ ಕೃಷಿ ಖುಷಿ’ ಎಂಬ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಒಂದು ಅರ್ಥಪೂರ್ಣ ಕಾರ್ಯಕ್ರಮ. ಮಾನವ ಸಂಸ್ಕಾರದೊಂದಿಗೆ ಪ್ರಕೃತಿ ಸಂಸ್ಕಾರದ ಮೌಲ್ಯವನ್ನು ನಾವು ಬೆಳೆಸಿಕೊಳ್ಳಬೇಕು. ನಾವು ಎಷ್ಟು ಜಾಣರಾದರೂ ಪ್ರಕೃತಿಯ ವಿಷಯದಲ್ಲಿ ದಡ್ಡರಾಗುತ್ತಿದ್ದೇವೆ. ಇದರಿಂದಾಗಿಯೇ ಇಂದು ಪ್ರಕೃತಿ ವಿಕೋಪಗಳು ಹೆಚ್ಚು ನಡೆಯುತ್ತಿವೆ. ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ನಡೆಯಬೇಕು ಎಂದರು.
ಶಿಕ್ಷಣ ಪ್ರೇಮಿ ನಾಸೀರ್ ಕೆ.ಕೆ.ಎಸ್ ಅವರು ಮಾತನಾಡಿ, ಮಣ್ಣಿನಿಂದಲೇ ಬದುಕು ರೂಪುಗೊಳ್ಳುತ್ತದೆ. ಇಂದಿನ ವಿದ್ಯಾರ್ಥಿಗಳಿಗೆ ಈ ಮಣ್ಣಿನ ಮಹತ್ವ ಹಾಗೂ ಕೃಷಿ ಬದುಕಿನ ಜ್ಞಾನವನ್ನು ಒದಗಿಸಿಕೊಡುತ್ತಿರುವುದು ಉತ್ತಮ ಕೆಲಸವಾಗಿದೆ. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಗಳ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತದೆ ಎಂದರು.
ಸಮಾಜ ಸೇವಕ ಸುರೇಂದ್ರ ರೈ, ಅಬ್ದುಲ್ ರಹಿಮಾನ್ ಎ.ಕೆ., ಪಂಚಾಯತ್ ಸದಸ್ಯೆ ಶಶಿಕಲಾ,‌ ಕಾರ್ತಿಕ್, ಪಂಚಾಯಿತಿ ಮಾಜಿ ಸದಸ್ಯ ಹಸನ್ ಕುಂಞಿ, ಶಾಲಾಭಿವೃದ್ಧಿ ಸಮಿತಿಯ, ಅಬ್ದುಲ್ ಖಾದರ್, ಅಬ್ದುಲ್ ಲತೀಫ್ , ಅಶ್ರಫ್, ಕೃಷಿಕರಾದ ದಯಾನಂದ ಗಟ್ಟಿ,‌ಶಾಲಾ‌ ಮುಖ್ಯ ಶಿಕ್ಷಕಿ ಗಾಯತ್ರಿ ಎಂ, ಸಿಲ್ಪಿಯಾ ಮಿನೇಜಸ್ ಹಾಗೂ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ಅವರು ಸ್ವಾಗತಿಸಿದರು.
ಮಂಗಳ ಗ್ರಾಮೀಣ ಯುವಕ‌ ಸಂಘದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಎ.ಕೆ.ವಂದಿಸಿದರು.
ಗದ್ದೆಯ ಬಳಿ ವಿದ್ಯಾರ್ಥಿಗಳಿಗೆ ಕೃಷಿಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ಅವರು, ಸುಮಾರು 150 ಕ್ಕೂ ಹೆಚ್ಚು ಗಿಡಮರಗಳ ಪರಿಚಯ ಮಾಡಿ ಅವುಗಳ ಉಪಯೋಗಗಳನ್ನು ತಿಳಿಸಿದರು.

Exit mobile version