
ಕೊಲ್ಯ : ಕೊಲ್ಯ ಆಸುಪಾಸಿನ ಭಕ್ತರು, ಸಮಾಜಬಾಂಧವರು, ಕೇರಳ ಯಾದವ ಸಭೆಯ ಪ್ರಮುಖರು, ಕ್ಷೇತ್ರದ ಅಭಿಮಾನಿಗಳ ಅಭಿಪ್ರಾಯದಂತೆ ಕೊಲ್ಯ ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಸೂಕ್ತ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವಸ್ಥಾನ ಅಭಿವೃದ್ಧಿ ಕುರಿತ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನಗೈದು ಮಾತನಾಡಿದರು.
ಸಾಮಾಜಿಕ ಸೇವೆ, ಭಕ್ತಿ ಜೀವನ ಮತ್ತು ಮಠದಲ್ಲಿನ ಆಧ್ಯಾತ್ಮಿಕ ಮಾರ್ಗದರ್ಶನದ ಮೂಲಕ ಹಲವರಿಗೆ ದಾರಿ ತೋರಿದ ಗುರು ಕೊಲ್ಯ ಕೀರ್ತಿಶೇಷ ಶ್ರೀ ರಮಾನಂದ ಸ್ವಾಮಿಗಳು. 2016 ರ ಮೇ 23 ರಂದು ಅಸ್ತಂಗತರಾಗಿಯೂ, ಅವರ 66 ವರ್ಷಗಳ ಜೀವನಾವಧಿಯಲ ಸೇವೆಗಳು ಮತ್ತು ಜನಪ್ರಿಯತೆ ಸ್ಮರಣಾರ್ಥವಾಗಿ ಉಳಿದಿವೆ. ಮುಂಬರುವ ದಿನಗಳಲ್ಲಿ ಅಜೀರ್ಣಾವಸ್ಥೆಯಲ್ಲಿರುವ ಕ್ಷೇತ್ರದ ಅಭಿವೃದ್ಧಿ ಬಹುಮುಖ್ಯ, ಕ್ಷೇತ್ರದ ಭಕ್ತಾಭಿಮಾನಿಗಳಿಗೂ ಸ್ವಾಮಿಗಳ ಆದರ್ಶವನ್ನು ಪಾಲಿಸುತ್ತಾ, ಪ್ರತೀ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ, ದೇವಸ್ಥಾನದ ಅಭಿವೃದ್ಧಿಯ ದೃಷ್ಟಿಯಿಂದಲೂ ಕ್ಷೇತ್ರಕ್ಕೆ ಉತ್ತರಾಧಿಕಾರಿಗಳ ಆಯ್ಕೆ ಸೂಕ್ತ. ಅವರ ಮುಂದಿರಿಸಿಕೊAಡು ಸ್ವಾಮಿಗಳ ಸಮಾಜಮುಖಿ, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವವರಂತಾಗಬೇಕಿದೆ ಎಂದರು.
ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮಿಗಳು ಸ್ವಾಮಿಗಳ ಆದರ್ಶಗಳನ್ನು, ಹಾಗೂ ಮಠಕ್ಕಾಗಿ ಮಾಡಿದ ಸಾಧನೆಗಳನ್ನು ವಿವರಿಸಿ ಆಶೀರ್ವಚನಗೈದರು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾರಾಯಣ ತಂತ್ರಿ ಪಟ್ಟಾಭಿ ಆಶೀರ್ವಚನ ನೀಡಿದರು.
ಪರಮಪೂಜ್ಯ ಕೀರ್ತಿಶೇಷ ಶ್ರೀ ರಮಾನಂದ ಸ್ವಾಮೀಜಿಯವರ ಹಿರಿಯ ಸಹೋದರ ಕೃಷ್ಣ ಮಣಿಯಾಣಿ ನಡುಮೂಲೆ ಮಾವಿನಕಟ್ಟೆ ಇವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಕಾಸರಗೋಡು ಯಾದವ ಸಭಾ ಜಿಲ್ಲಾಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು, ಧಾರ್ಮಿಕ ಮುಖಂಡ ಕೃಷ್ಣ ಕುಂಜತ್ತೂರು, ವಿಶ್ವ ಹಿಂದೂ ಪರಿಷತ್‌ನ ಗೋಪಾಲ್ ಕುತ್ತಾರು, ವಾಸುದೇವ್ ಉಪಸ್ಥಿತರಿದ್ದರು.
ಕುಮಾರ್ ನಿರೂಪಿಸಿದರು. ರಾಘವೇಂದ್ರ ಸ್ವಾಗತಿಸಿದರು.