ಮಂಗಳೂರು : ಪುಟ್ಟ ಮಕ್ಕಳಿಬ್ಬರ ಹುಟ್ಟುಹಬ್ಬವನ್ನು ಆರೋಗ್ಯ ಸ್ನೇಹಿ, ಪರಿಸರ ಸ್ನೇಹಿ ಮತ್ತು ಶೂನ್ಯ ತ್ಯಾಜ್ಯ ಪರಿಕಲ್ಪನೆಯಲ್ಲಿ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಲು ಉದ್ದೇಶಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಪರಿಸರ ಪ್ರೇಮಿ ಜಯಪ್ರಕಾಶ್ ಶೆಟ್ಟಿ ಎಕ್ಕೂರು ಅವರು ತಿಳಿಸಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಜಲ್‌ಕಟ್ಟೆಯ ರೇಶ್ಮಾ ಮತ್ತು ಲಕ್ಷ್ಮಿಕಾಂತ್ ದಂಪತಿಯ ಪುತ್ರಿಯರಾದ ಕ್ಷೀರ್ಷಾಳ ಮೊದಲ ವರ್ಷದ ಹುಟ್ಟುಹಬ್ಬ ಮತ್ತು ಮೋಕ್ಷಾಳ 10ನೇ ಚರ್ಷದ ಜನ್ಮದಿನವನ್ನು ಜು.5ರಂದು ರಾತ್ರಿ 7 ಗಂಟೆಗೆ ಕದ್ರಿಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾಭವನದಲ್ಲಿ ಆಯೋಜಿಸಲಾಗಿದೆ ಎಂದರು.
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೇಕ್ ಇತ್ಯಾದಿಗಳ ಬದಲಾಗಿ ತರಕಾರಿ, ಹಣ್ಣು ಸೊಪ್ಪು, ಡ್ರೈಫೂಟ್ಸ್ ಇತ್ಯಾದಿಗಳನ್ನು ಬಳಕೆ ಮಾಡಲಾಗುತ್ತದೆ ಮರಗಳ ನಾಶಕ್ಕೆ ಕಾರಣವಾಗಿರುವ ಟಿಶ್ಯೂ ಪೇಪರ್, ಪರಿಸರಕ್ಕೆ ಮಾರಕವಾಗಿರುವ ನೀರಿನ ಬಾಟಲ್, ಪೇಪರ್, ಪ್ಲಾಸಿಕ್ ಕಪ್‌ಗಳು ಇಲ್ಲದೆ, ಶೂನ್ಯ ತ್ಯಾಜ್ಯದೊಂದಿಗೆ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಈ ರೀತಿಯ ಆಚರಣೆ ಮೂಲಕ ಇತರರೂ ಪರಿಸರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಈ ಪರಿಕಲ್ಪನೆಗೆ ಮುಂದಾಗಿರುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಣಪತಿ ಭಟ್ ಸೇರಾಜೆ, ಕೃಷ್ಣ ಶೆಟ್ಟಿ ತಾರೆಮಾರ್, ರಾಘವ ಸೂರಿ, ಯಶವಂತ್, ಸುರೇಶ್ ರೈ ಲೋಕನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
