Site icon Ullalavani

ಶಿಕ್ಷಕ, ಸಾಹಿತಿ, ಸಂಘಟಕ, ಕೃಷಿಕ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರು ಅವರಿಗೆ ಈ ಬಾರಿಯ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷಗಾದಿ

ಮಂಗಳೂರು: ಶಿಕ್ಷಕ, ಸಾಹಿತಿ, ಸಂಘಟಕ, ಕೃಷಿಕನಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರವೀಂದ್ರ ರೈ ಕಲ್ಲಿಮಾರ್‌ ಅವರು ಈ ಬಾರಿ ಸರ್ವಾನುಮತದಿಂದ ಪ್ರತಿಷ್ಠಿತ ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ.
೩೪ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಉಡುಪಿಯಿಂದ ಇತ್ತೀಚೆಗಷ್ಟೇ ವರ್ಗಾವಣೆ ಹೊಂದಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೇರಿದಂತೆ ಅನೇಕ ಕಲಾವಿದರು ಹಾಗೂ ಶ್ರೇಷ್ಟ ಸಾಧಕರನ್ನು ಸಮಾಜಕ್ಕೆ ಒಪ್ಪಿಸಿದಂತಹ ಅಚ್ಚುಮೆಚ್ಚಿನ ಶಿಕ್ಷಕನಾಗಿರುವ ರವೀಂದ್ರ ರೈ ಅವರಿಗೆ ಸಮುದಾಯದ ಸಂಘದ ಗಾದಿ ಒಲಿದಿದೆ.
ಕೇವಲ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸದೇ ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು. ಶಾಲೆಗೆ ಬೇಕಾದ ಅಗತ್ಯತೆ ಪೂರೈಸುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಿದವರು. ಹಾಗಾಗಿ ಖಾಸಗಿ ಶಾಲೆಯನ್ನು ಮೀರುವ ರೀತಿಯಲ್ಲಿ ಹರೇಕಳ ಶಾಲೆ ನಿರ್ಮಾಣಗೊಂಡಿದೆ.
ಕೊಳ್ನಾಡು ಗ್ರಾಮದ ಸಾಲೆತ್ತೂರು ಕುಳಾಲು ಬಂಟ ಮನೆತನದವರಾಗಿರುವ ಕುಳಾಲು ದಿ. ವಿಠಲ್‌ ರೈ , ತಾಯಿ ದಿ.ಸುಂದರಿ ರೈ ದಂಪತಿಯ ಹಿರಿಯ ಪುತ್ರನಾಗಿರುವ ರವೀಂದ್ರ ರೈ ಇವರು ಕಡೆಂಜಿಮಲೆ ಕಾಡನ್ನು ಕ್ರಮಿಸಿ ನಿತ್ಯ 5 ಕಿ.ಮೀ ನಡೆದುಕೊಂಡೇ ಸಾಗಿ ಕನ್ಯಾನ ಗ್ರಾಮದ ಹೈಸ್ಕೂಲ್‌ ನಲ್ಲಿ ಶಿಕ್ಷಣ ಪಡೆದುಕೊಂಡವರು. ಕೆನರಾ ಕಾಲೇಜಿನಲ್ಲಿ ಪಿಯುಸಿ, ಡಿಗ್ರೀ,ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಬಿಎಡ್‌ ಪದವಿಯನ್ನು ಪೂರೈಸಿ, ಮೈಸೂರು ವಿ.ವಿಯಲ್ಲಿ ಎಂ.ಎ ಪದವಿ ಪೂರೈಸಿದವರು. ತನ್ನ ಅಜ್ಜನಾಗಿರುವ ವಿದ್ವಾನ್‌ ಕಾಂತ ರೈ ಮಾರ್ಗದರ್ಶನದಲ್ಲಿ ಅದ್ಯಾಪಕ ವೃತ್ತಿ ಪ್ರವೇಶಿಸಿದವರು. ಅಜ್ಜ ಅಧ್ಯಾಪಕನಾಗಿದ್ದ ಮೂಡಬಿದ್ರೆಯ ಜೈನ್‌ ಹೈಸ್ಕೂಲಿನಲ್ಲಿ ಅಂದಿನ ಕಾಲದಲ್ಲಿ ೧ ವರ್ಷ ಉಚಿತ ಸೇವೆ ಸಲ್ಲಿಸಿದವರು.
ಬಾಲ್ಯ ಕಷ್ಟದಲ್ಲಿತ್ತು, ತನ್ನ ಶ್ರಮದಿಂದಲೇ ಪದವಿ ಪಡೆದುಕೊಂಡು ೧೯೮೩ ರಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಗೆ ಸೇರಿಕೊಂಡೆ . ಕ್ಲಾಸ್‌ ರೂಮಲ್ಲಿ ಬೋಧನೆ ಮಾಡುವುದು ಮಾತ್ರವಲ್ಲ, ಅಭಿವೃದ್ಧಿಯ ಜವಾಬ್ದಾರಿಯಿತ್ತು, ಶಾಲೆಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿತ್ತು. ವ್ಯಕ್ತಿತ್ವ ಬೆಳೆಸಲು ವಿದ್ಯಾ ಸಂಸ್ಥೆ ಅವಕಾಶ ನೀಡಿತ್ತು. ಹಾಗಾಗಿ ಉತ್ತಮ ಶಿಕ್ಷಕನಾಗಲು ಸಾಧ್ಯವಾಯಿತು. ಪುಸ್ತಕಗಳನ್ನು ಓದುವ ಹವ್ಯಾಸ ಜಾಸ್ತಿಯಿತ್ತು. ಹಾಗಾಗಿ ಮಾತುಗಾರ, ಭಾಷಣಕಾರನಾಗಲು, ಪುಸ್ತಕದಿಂದ ಪ್ರಭಾವಿತನಾಗಿ ಮನೆಯಲ್ಲೇ ಗ್ರಂಥಾಲಯವನ್ನು ಕೂಡ ನಿರ್ಮಿಸಿದ್ದೇನೆ. ಸಂಪನ್ಮೂಲ ವ್ಯಕ್ತಿಯೂ ಆಗಿ ಜೆಸಿಐ, ಲಯನ್ಸ್‌ ಸಂಸ್ಥೆ, ವಿವಿಧ ಸಂಘ ಸಂಸ್ಥೆಗಳಲ್ಲಿ ತರಬೇತಿ ಕೊಡುವ ಅವಕಾಶವನ್ನು ಪಡೆದುಕೊಂಡಿರುವುದರ ಜೊತೆಗೆ ಕಾರ್ಯಕ್ರಮ ನಿರೂಪಣೆ, ಆಕಾಶವಾಣಿಯಲ್ಲಿ ಚಿಂತನೆ, ಭಾಷಣ ಮಾಡುವ ಕಾರ್ಯವನ್ನು ಮಾಡಿದ್ದೇನೆ .ದೈವಸ್ಥಾನ, ದೇವಸ್ಥಾನ ಕಮಿಟಿಗಳಲ್ಲಿ ಸೇರಿಕೊಂಡು ಸೇವೆಯನ್ನು ನಡೆಸಿರುವ ಸಾರ್ಥಕತೆಯಿದೆ ಅನ್ನುತ್ತಾರೆ ರವೀಂದ್ರ ರೈ. ಶಿಕ್ಷಕ ಕ್ಲಾಸ್‌ ರೂಮಿನಲ್ಲಿದ್ದುಕೊಂಡು ಬೋಧನೆ ಮಾಡುತ್ತಾ ನಿದ್ದರೆ ಜನಮೆಚ್ಚಿದ ಶಿಕ್ಷಕನಾಗಲು ಸಾಧ್ಯವಿಲ್ಲ. ಸಮಾಜಮುಖಿಯಾದಂತಹ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಜನಮೆಚ್ಚಿದ, ಜನಪ್ರಿಯ ಶಿಕ್ಷಕನಾಗಲು ಸಾಧ್ಯ ಅನ್ನುವುದನ್ನು ಈಗಿನ ಶಿಕ್ಷಕರಿಗೆ ತಿಳಿಸುವ ಸಲುವಾಗಿ ತನ್ನ ಸಾಧನೆ ಮಾತುಗಳನ್ನು ಹೇಳುತ್ತಿದ್ದೇನೆ.
ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ, ರಾಜ್ಯ, ತಾಲೂಕು ಮಟ್ಟದ ಪ್ರಶಸ್ತಿಗಳು ಸಿಕ್ಕಿದೆ. ಒಳ್ಳೆಯ ಬೋಧಕನಾದಲ್ಲಿ ಪಾಠ ಕಲಿತಂತಹ ವಿದ್ಯಾರ್ಥಿಗಳಿಗೆ ಪ್ರೀತಿಯಿರುತ್ತದೆ, ಜನರು ಪ್ರೀತಿಸುತ್ತಾರೆ ಅದು ತನ್ನ ಪಾಲಿಗೆ ದೊರಕಿದೆ. ನಿವೃತ್ತಿ ನಂತರ ಕೃಷಿಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿ ಅಡಿಕೆ, ಬಾಳೆತೋಟ, ಹಣ್ಣುಹಂಪಲು, ಅನಾನಸು ಬೆಳೆಸುವ ಕೆಲಸ ಮಾಡುತ್ತಾ ಬಂದಿರುವ ಅವರು ಕೊರೊನಾ ಸಮಯದಲ್ಲಿ ತೋಟದಲ್ಲಿ ಸುತ್ತಾಡಿಕೊಂಡು ಪ್ರೀತಿಯಿಂದ ನೋಡಿಕೊಂಡ ಪರಿಣಾಮ ದಿನಗಳೂ ಹೋಗಿದ್ದೇ ಗೊತ್ತಾಗಲಿಲ್ಲ ಅನ್ನುತ್ತಾರೆ.
ಕೃಷಿಯನ್ನು ಯಾವತ್ತೂ ತಿರಸ್ಕರಿಸದರಿ, ಹಿರಿಯರು ಮಾಡಿಕೊಂಡು ಬಂದಿರುವುದು ಒಳ್ಳೆಯ ಕೆಲಸ . ಕೃಷಿ ಬದುಕಿನಿಂದಾಗಿ ನಿವೃತ್ತಿ ಜೀವನ ಸಂತೋಷವಾಗಿ ಮುಂದುವರಿಯುತ್ತಿದೆ. ಲಯನ್ಸ್‌, ಜೆಸಿಐ, ಸ್ಕೌಟ್‌ ಗೈಡ್‌, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳ ಜೊತೆಗೆ ಒಡನಾಟವನ್ನು ಹೊಂದಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಪ್ತಸ್ವರ ಕಲಾ ತಂಡ, ನೃತ್ಯ ಲಹರಿ ನಾಟ್ಯಾಲಯದಲ್ಲಿಯೂ ನಂಟು ಹೊಂದಿದ್ದಾರೆ. ಅರುವಗುತ್ತು, ಅಳದಂಗಡಿಗುತ್ತು ಮನೆತನದಿಂದ ಸ್ವರ್ಣಲತಾ ರೈ ಅವರನ್ನು ಮದುವೆಯಾಗಿರುವ ಅವರು ಐಬಿಎಂ ಉದ್ಯೋಗಿ ಸ್ವಸ್ತಿಕಾ ರೈ ಅವರ ಮೆಚ್ಚಿನ ತಂದೆಯೂ ಆಗಿದ್ದಾರೆ.
ಶಾಲಾ ವೃತ್ತಿಯಲ್ಲಿದ್ದಂತಹ ಸಂದರ್ಭದಲ್ಲಿಯೂ ತನ್ನ ಪ್ರೋತ್ಸಾಹದಿಂದ ವಿದ್ಯಾರ್ಥಿಗಳಲ್ಲಿ ಕೃಷಿಯಲ್ಲಿ ತೊಡಗಿಸುವಂತೆ ಮಾಡಿ ಅಡಿಕೆ, ಬಾಳೆ ಗಿಡವನ್ನೂ ಬೆಳೆಸಿದ್ದರು. ಶಾಲೆಯಲ್ಲಿಯೂ ಅಡಿಕೆ, ಬಾಳೆ ಬೆಳೆ ಬೆಳೆಸಲಾಗಿದೆ. ೫೦೦ ಗಿಡಗಳನ್ನು ಹಾಕುವ ಯೋಜನೆಯಿತ್ತಾದರೂ, ನೀರಿನ ಕೊರತೆಯಿಂದ ಅಸಾಧ್ಯವಾಗಿತ್ತು. ಅದಾದ ನಂತರ ಹಳೇ ವಿದ್ಯಾರ್ಥಿ ಕ್ಲಾಸಿಕ್‌ ಕಲರ್‌ ಲ್ಯಾಬ್‌ ಮಾಲೀಕರು ಅಶೋಕ್‌ ಎಂಬವರು ಬೋರ್‌ ವೆಲ್‌ ಹಾಕಿಸಿದ ಫಲವಾಗಿ ಶಾಲಾ ಆವರಣದಲ್ಲಿ ಕೃಷಿಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗಿದೆ. ಸಾಹಿತಿಗಳ ಸಂಘ, ಕಲಾವಿದರ ಸಂಘದಲ್ಲಿಯೂ ಹೆಚ್ಚಾಗಿ ಗುರುತಿಸಿಕೊಂಡ ಮಾಸ್ಟರು ಸಿನೆಮಾ ಧಾರವಾಹಿ ನಟ ಶೋಭರಾಜ್‌ ಪಾವೂರು ಅವರನ್ನು ಕಲೆಯಲ್ಲಿ ಪ್ರೋತ್ಸಾಹಿಸಿದವರು . ಆರಂಭಿಕವಾಗಿ ಮರಕಳಬೆಟ್ಟು ಜಾತ್ರೆಯಲ್ಲಿ ನಾಟಕದಲ್ಲಿ ನಟಿಸುವಂತೆ ಮಾಡಿ ಬಳಿಕ ಆಕಾಶವಾಣಿಯಲ್ಲಿಯೂ ಅವರಿಗೆ ಅವಕಾಶ ಕಲ್ಪಿಸಿದ್ದರು. ಹಾಗೆಯೇ ತುಳುಚಿತ್ರ ನಟ ಪ್ರದೀಪ್‌ ಆಳ್ವ ಅವರ ಶಿಕ್ಷಕರಾಗಿದ್ದಾರೆ. ತನ್ನ ಜೀವನದಲ್ಲಿ ಕುವೆಂಪು ಅವರು ಹೇಳಿರುವಂತೆ ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೇ ಹೊರತು ಭತ್ತ ತುಂಬಿಸುವ ಗೋಣಿಚೀಲಗಳಾಗಬಾರದು ಅನ್ನುವದನ್ನು ಮನದಟ್ಟು ಮಾಡಿಕೊಂಡು ಕಾರ್ಯ ನಿರ್ವಹಿಸಿದವರು. ೧೯೮೭ ರ ವಿದ್ಯಾರ್ಥಿನಿ ವಿದ್ಯಾ ಕುಮಾರಿ ಅವರಿಗೆ ರವೀಂದ್ರ ರೈಗಳು ಗುರುಗಳಾಗಿದ್ದರು. ತಾನು ಅಚ್ಚುಮೆಚ್ಚಿನ ಶಿಕ್ಷಕನಾಗಿದ್ದರಿಂದಾಗಿ ಉಡುಪಿಯಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ನಿರ್ವಹಿಸುವ ಮುನ್ನ ತನಗೆ ಕರೆ ಮಾಡಿ ವಿಷಯ ತಿಳಿಸಿರುವುದು ಎಲ್ಲಾ ಪ್ರಶಸ್ತಿಗಳಿಗಿಂತ ದೊಡ್ಡದಾಗಿ ಸಿಕ್ಕಂತಹ ಗೌರವವಾಗಿದೆ. ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಗುರುಗಳ ಕುರಿತು ʻ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮವಾಗಿ ಇರುವ ಶಾಲೆಯನ್ನು ರೂಪಿಸುವಲ್ಲಿ ತನ್ನ ಗುರುಗಳು ರವೀಂದ್ರ ರೈಗಳ ಸೇವೆ ಬಹಳಷ್ಟಿದೆ. ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಶಾಲೆಯನ್ನು ನಡೆಸಿಕೊಂಡು ಬಂದವರು. ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಕಟ್ಟಡ, ಕ್ರೀಡಾಂಗಣ, ಶೌಚಾಲಯ ನಿರ್ಮಿಸಿ ವಿದ್ಯಾರ್ಥಿ ಸ್ನೇಹಿ ಶಾಲೆಯನ್ನು ರಚಿಸಿದವರು. ಅತ್ಯುತ್ತಮ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ ಗುರುಗಳ ಶಿಷ್ಯೆ ಅನಿಸಿಕೊಳ್ಳಲು ಹೆಮ್ಮೆಯಿದೆ ಎಂದಿದ್ದಾರೆ.

Exit mobile version