Site icon Ullalavani

ಒಂದು ಲಕ್ಷಕ್ಕಾಗಿ ತಾಯಿಯನ್ನೇ ಮುಗಿಸಿದನೇ..?

ಮಂಜೇಶ್ವರ : ನಿನ್ನೆ ವರ್ಕಾಡಿ ಬಳಿಯ ನಲ್ಲೆಂಗಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಬಂಧಿಸಲ್ಪಟ್ಟ ಆರೋಪಿಯಿಂದ ಮಹತ್ತರವಾದ ಹೇಳಿಕೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ದಿ. ಲೂಯಿಸ್ ಮೊಂತೇರೋರ ಪತ್ನಿ ಹಿಲ್ಡಾ ಮೊಂತೇರೋ (60) ರವರನ್ನು ಪುತ್ರ ಮೆಲ್ವಿನ್ ಮೊಂತೇರೋ (33) ಕೊಲೆಗೈಯ್ಯಲು ಕಾರಣ ಹಣದ ವಿಚಾರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿದ್ದ ಪುತ್ರ ಮೆಲ್ವಿನ್ ಮೊಂತೇರೋ ತನ್ನ ತಾಯಿಯಲ್ಲಿ ಜಾಗವನ್ನು ಅಡವಿಟ್ಟು 1 ಲಕ್ಷ ರೂಪಾಯಿ ಸಾಲ ನೀಡುವಂತೆ ಕೋರಿದ್ದ, ಇದಕ್ಕೆ ತಾಯಿಯು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೊಲೆ ಕೃತ್ಯ ನಡೆಯಲು ಕಾರಣವಾಗಿದೆ ಎಂದು ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ಸಮಗ್ರ ವಿಚಾರಣೆ ನಡೆಯಲಿದೆ.

ಕೊಲೆಗೈಯಲ್ಪಟ್ಟ ಹಿಲ್ಡಾ ಮೊಂತೇರೋರವರ ಶವ ಮಹಜರು ಪೆರಿಯಾರಂ ಮೆಡಿಕಲ್ ಕಾಲೇಜ್ ನಲ್ಲಿ ನಡೆಸಲಾಯಿತು. ಬಳಿಕ ಇಂದು ಬೆಳಗ್ಗೆ ಇನ್ನೊರ್ವ ಪುತ್ರ ಅಲ್ವಿನ್ ಮೊಂತೆರೋ ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಬಳಿಕ ಇಂದು ಮಧ್ಯಾಹ್ನ 3 ಗಂಟೆಗೆ ಮೃತದೇಹದ ಅಂತ್ಯ ಸಂಸ್ಕಾರ ವರ್ಕಾಡಿ ಸೀಕ್ರೆಟ್ ಹಾರ್ಟ್ ಚರ್ಚ್ ನಲ್ಲಿ ನಡೆಯಿತು.

ಚರ್ಚಿನ ಫಾದರ್ ರೆ.ಫಾ. ಬೇಸಿಲ್ ವಾಸ್ ಧಾರ್ಮಿಕ ವಿಧಿ ವಿಧಾನಗಳಿಗೆ ನೇತೃತ್ವವನ್ನು ನೀಡಿದರು. ಹಿಲ್ಡಾ ಮೊಂತೆರೋರವರ ಪುತ್ರ ಕೊಲ್ಲಿ ಉದ್ಯೋಗಿ ಅಶ್ವಿನ್ ಮೊಂತೆರೋರ ಕೂಗು ಮುಗಿಲು ಮುಟ್ಟಿತ್ತು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ. ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ, ವಿವಿಧ ಪಕ್ಷಗಳ ನೇತಾರರಾದ : ಅಬ್ದುಲ್ ಅಜೀಜ್ ಮರಿಕೆ, ಮೊಹಮ್ಮದ್ ಮಜಾಲ್, ಪುರುಷೋತ್ತಮ ಆರಿಬೈಲು, ದಾಮೋದರ ಮಾಸ್ತರ್, ರೋನಿ ಡಿ’ಸೋಜಾ, ಎಸ್. ಅಬ್ದುಲ್ ಖಾದರ್ ಹಾಜಿ, ಡಿ.ಬೂಬ, ಮೊಹಮ್ಮದ್ ಹನೀಫ್ ಎಚ್. ಎ, ಅಬ್ದುಲ್ ಮಜೀದ್ ಬಿ.ಎ., ವಿನೋದ್ ಕುಮಾರ್, ಶ್ರೀ ವತ್ಸಭಟ್, ರಾಜೇಶ್ ಡಿ’ ಸೋಜ, ಗಾಡ್ಡಿನ್, ರಾಬಿಯಾ, ಅಬುಸಾಲಿ, ಮುಂತಾದವರು ಸಂತೈಸಿ, ಸಂತಾಪ ಸೂಚಿಸಿದರು.

Exit mobile version