
ತೊಕ್ಕೊಟ್ಟು : ಕಾನೂನು ಪ್ರಕಾರ ಮಾದಕ ವ್ಯಸನಗಳ ಸೇವನೆ ಅಪರಾಧ, ಅದರಲ್ಲಿ ಕಮರ್ಷಿಯಲ್ ಪ್ರಮಾಣದಲ್ಲಿದ್ದರೆ 10 ವರ್ಷಗಳಿಗಿಂತ ಅಧಿಕ ಶಿಕ್ಷೆ ಹಾಗೂ ಮನೆ ಆಸ್ತಿ ಎಲ್ಲವನ್ನೂ ಸೀಝ್ ಮಾಡುವ ಆದೇಶವೂ ನ್ಯಾಯಾಲಯದಿಂದ ಬರುವ ಸಾಧ್ಯತೆಗಳು ಹೆಚ್ಚಿದೆ. ಕಮರ್ಷಿಯಲ್ ಪ್ರಮಾಣಕ್ಕಿಂತ ಕಡಿಮೆಯಿದ್ದಲ್ಲಿಯೂ ಶಿಕ್ಷೆ ಖಚಿತ ಆದರೆ ವರ್ಷಗಳಲ್ಲಿ ಬದಲಾವಣೆಗಳಿರಬಹುದು ಎಂದು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್ ಹೇಳಿದ್ದಾರೆ.
ನಗರ ಪೊಲೀಸ್ ಎಸಿಪಿ ಮಂಗಳೂರು ದಕ್ಷಿಣ ವಿಭಾಗದ ಆಶ್ರಯದಲ್ಲಿ ತೊಕ್ಕೊಟ್ಟುವಿನ ಯುನಿಟಿ ಸಭಾಂಗಣದಲ್ಲಿ ಆಯೋಜಿಸಲಾದ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಕಾರ‍್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಮಾದಕ ವ್ಯಸನಗಳ ಕುರಿತಾಗಿ ಜಾಗೃತಿ ಕಾರ‍್ಯಗಾರಗಳು ನಿರಂತರವಾಗಿ ಆಗಬೇಕಿದೆ. ಮನೋವೈದ್ಯರನ್ನು ಸೇರಿಸಿಕೊಂಡು ಕೌನ್ಸಿಲಿಂಗ್ ಕೂಡಾ ಪರಿಣಾಮಕಾರಿಯಾಗಿ ಜಾರಿಯಾದಾಗ ಒಂದು ಹಂತದಲ್ಲಿ ನಿಯಂತ್ರಣ ಸಾಧ್ಯ ಎಂದರು.
ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ಮಾತನಾಡಿ, ಮಕ್ಕಳ ಮಾನಸಿಕ ಅಸಮತೋಲನ ಸರಿದೂಗಿಸಲು ಶಿಕ್ಷಕ ವರ್ಗವೂ ಕೈಜೋಡಿಸಬೇಕಿದೆ. ವಿದ್ಯಾರ್ಥಿಗಳು ತಪ್ಪು ಎಸಗುತ್ತಾರೆಂದಲ್ಲಿ ಪೊಲೀಸರು ಮತ್ತು ಉಪನ್ಯಾಸಕ ವರ್ಗವೂ ಹೊಣೆಯಾಗಿರುತ್ತಾರೆ. ಶಾಲೆಗಳು, ಕಾಲೇಜುಗಳು, ಹಾಸ್ಟೆಲ್, ಪಿ.ಜಿಗಳು ಎಲ್ಲರೂ ಮಾದಕ ವ್ಯಸನಿಗಳ ಪತ್ತೆಗೆ ಸಹಕಾರ ಮಾಡಬೇಕಿದೆ. ಶೈಕ್ಷಣಿಕ ಹಬ್ ಅನಿಸಿಕೊಂಡಿರುವ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭ ಮಂಗಳೂರು ಗ್ರಾಮಾಂತರ (ವಾಮಂಜೂರು) ಠಾಣಾಧಿಕಾರಿ ಗವಿರಾಜ್ , ಮಂಗಳೂರು ನಗರ ಠಾಣಾಧಿಕಾರಿ (ಕಂಕನಾಡಿ) ನಾಗರಾಜ್ , ಕೊಣಾಜೆ ಠಾಣಾ ಉಪನಿರೀಕ್ಷಕರಾದ ನಾಗರಾಜ್, ಪುನೀತ್ ಗಾಂವ್ಕರ್ , ಮನೋವೈದ್ಯ ಡಾ. ಮನು ಉಪಸ್ಥಿತರಿದ್ದರು.
ಬಾರ್ ಗಳಲ್ಲಿ ಯುವಕರನ್ನು ನಿಯಂತ್ರಿಸಿ : ಡಾ.ಗೋವಿಂದರಾಜು ಬಿ.ಎಂ
ಬಾರ್ ಗಳಲ್ಲಿ ಯುವಕರನ್ನು ನಿಯಂತ್ರಿಸುವ ಕೆಲಸಗಳಾಗಬೇಕು. ಯುವಸಮುದಾಯವೇ ಹೆಚ್ಚಾಗಿ ಕುಡಿತದ ದಾಸರಾಗಿ ನಂತರ ಅಮಲುಪದಾರ್ಥಗಳತ್ತ ವಾಲುತ್ತಾರೆ. ವ್ಯಸನಗಳನ್ನು ಸಮಾಜದ ನಿಯಂತ್ರಕರು ನಿಯಂತ್ರಿಸದೇ ಇದ್ದಲ್ಲಿ ಬಹಳ ಕಷ್ಟ. ಬೆಳವಣಿಗೆಯ ಸಮಾಜದಲ್ಲಿ ವೈಜ್ಞಾನಿಕ ಅಭಿವೃದ್ಧಿಯೊಂದಿಗೆ ತಾಂತ್ರಿಕತೆಯನ್ನು ಬಳಸಿ ವ್ಯಸನಿಗಳ ಪತ್ತೆಹಚ್ಚುವಿಕೆ ಕಾರ್ಯಗಳಾಗಲಿ. ಗೂಡಂಗಡಿ, ಹೊಟೇಲ್ ಗಳಲ್ಲಿ ಪರಿಶೀಲನೆಗಳಾಗಬೇಕು ಎಂದು ಮಂಗಳೂರು ವಿ.ವಿಯ ಸಮಾಜಶಾಸ್ತç ವಿಭಾಗದ ಸಹಾಯಕ ಪ್ರಧ್ಯಾಪಕ ಡಾ.ಗೋವಿಂದರಾಜು ಬಿ.ಎಂ ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ
ಮಾನಿಟರಿಂಗ್ ಸೆಲ್ ಗಳು ಕರ‍್ಯಾಚರಿಸಲಿ: ಡಾ| ಮೋಹನ್ ಎಸ್.ಸಿಂಘೇ
ವ್ಯಸನಿಗಳ ವಿರುದ್ಧದ ಕಾನೂನು ಸಡಿಲಗೊಳಿಸದೇ, ಕಂಟ್ರೋಲಿಂಗ್ ಮೆಕ್ಯಾನಿಸಂ ಸ್ಟ್ರಾಂಗ್ ಆಗಿರಲಿ. ಕಾನೂನು ವ್ಯವಸ್ಥೆ ಹೆಚ್ಚಾದಂತೆ ಅಪರಾಧಗಳು ಗಣನೀಯವಾಗಿ ಏರಿಕೆಯಾಗಿದೆ. ಅಪರಾಧಿಗಳ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಳೆಸುವ ಕೆಲಸವಾಗಲಿ. ಬಾಲಾಪರಾಧಿಗಳು ವ್ಯಸನದಲ್ಲಿರುವುದು ಗಮನಾರ್ಹ ಅಂಶ. ನಿಯಂತ್ರಣಕ್ಕೆ ತರಲು ಆಯಾಯ ಶಿಕ್ಷಣ ಸಂಸ್ಥೆಗಳಲ್ಲಿ ಮಾನಿಟರಿಂಗ್ ಸೆಲ್ ಗಳು ಅಗತ್ಯವಾಗಿ ಕಾರ‍್ಯಾಚರಿಸಬೇಕಿದೆ. ಸ್ನಾತಕೋತ್ತರ ಹಾಗೂ ಸಮಾಜಸೇವಾ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಮೋಹನ್ ಎಸ್. ಸಿಂಘೇ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಲ್ ಲಿಪ್, ಟ್ಯಾಬ್ಲೇಟ್‌ಗಳಲ್ಲೇ
ನಶೆ ಏರಿಸುತ್ತಿದ್ದಾರೆ : ಡಾ| ಸೈಯ್ಯದ್ ಅಮೀನ್ ಅಹಮ್ಮದ್
ಕಾಲೇಜು ಹಾಸ್ಟೆಲ್ಲುಗಳಲ್ಲಿ ಶುಚಿಗೊಳಿಸುವ ಸಂದರ್ಭ ಮಾರಕ ಕೂಲ್ ಲಿಪ್ ಗಳೇ ಸಿಗುತ್ತಿವೆ. ಇದು ಡ್ರಗ್ಸ್ ಪದಾರ್ಥಗಳಿಗೆ ಸ್ವಾಗತಗೋಪುರವಾಗಿದೆ. ದೇರಳಕಟ್ಟೆ, ನಾಟೆಕಲ್ ಕುತ್ತಾರ್ ಭಾಗದಲ್ಲಿರುವ ಪಿ.ಜಿಗಳು ವ್ಯವಸ್ಥಿತವಾಗಿಯಿಲ್ಲ. ಗರಿಷ್ಠ ವಿದ್ಯಾರ್ಥಿಗಳು ಪಿಜಿಗಳಲ್ಲೇ ನಿಂತು ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸುವ ಸಲುವಾಗಿ ಪಿ.ಜಿಗಳ ಮೇಲೆ ಪರಿಶೀಲನೆ ದಾಳಿಗಳಾಗಬೇಕಿದೆ. ಸದ್ಯ ಗಾಂಜಾ ಬೆಳೆಯುವ ಕಾಲವಲ್ಲ, ಹಾಗಾಗಿ ಮಾನಸಿಕ ವಿಚಾರಕ್ಕೆ ಸಂಬAಧಿಸಿ ಟ್ಯಾಬ್ಲೆಟ್ ಗಳ ಸೇವನೆಗಳಾಗುತ್ತಿವೆ. 2017-16 ರಲ್ಲಿ ಕಪ್ ಸಿರಪ್ ಅಮಲಿಗೆ ಕುಡಿಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಗೊತ್ತೇ ಆಗದ ಟ್ಯಾಬ್ಲೆಟ್ ಸೇವನೆಯಲ್ಲಿ ನಿರತರಾಗಿದ್ದಾರೆ. ಮೆಡಿಕಲ್ ಶಾಪ್ ಗಳಲ್ಲಿ ದುಬಾರಿ ಬೆಲೆಗೆ ಮಾತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಕೂಲ್ ಲಿಪ್ ಗಳ ಸೇವನೆ ಪರೀಕ್ಷಾ ಸಮಯದಲ್ಲೇ ಹೆಚ್ಚಾಗುತ್ತಿದೆ. ಪಿ.ಜಿಗಳ ನಿಯಂತ್ರಣಕ್ಕೆ ತರುವ ಕೆಲಸ ಪೊಲೀಸರಿಂದ ಆಗಬೇಕಿದೆ ಎಂದು ನಡುಪದವು ಪಿ.ಎ ಎಜ್ಯುಕೇಷನಲ್ ಟ್ರಸ್ಟ್ ಸಂಸ್ಥೆಗಳ ಸ್ಟೂಡೆಂಟ್ ಅಫೇರ್ ಡೀನ್ ಡಾ| ಸೈಯ್ಯದ್ ಅಮೀನ್ ಅಹಮ್ಮದ್ ಹೇಳಿದ್ದಾರೆ.
ಕೊರಿಯರ್ ಮೂಲಕ ಮಾದಕ ವ್ಯಸನ
ಸರಬರಾಜು: ಅಬ್ದುಲ್ ಸತ್ತಾರ್
ಕೊರಿಯರ್ ಮೂಲಕವೇ ಅಮಲು ಪದಾರ್ಥಗಳ ಸರಬರಾಜು ಆಗುತ್ತಿದೆ. ಶೇ.75 ಕೊರಿಯರ್ ಮುಖೇನವೇ ವಿದ್ಯಾರ್ಥಿಗಳ ಕೈತಲುಪುತ್ತಿದೆ. ಪೊಲೀಸರು ತಿಂಗಳಿಗೆ ಒಮ್ಮೆಯಾದರೂ ಹಾಸ್ಟೆಲ್ , ಪಿ.ಜಿಗಳಲ್ಲಿ ಪರಿಶೀಲನೆ ನಡೆಸಬೇಕಿದೆ ಎಂದು ಕಣಚೂರು ಹಾಸ್ಟೆಲ್ ವಾರ್ಡನ್ ಅಬ್ದುಲ್ ಸತ್ತಾರ್ ಹೇಳಿದ್ದಾರೆ.
ವಿದ್ಯಾರ್ಥಿನಿಯರು ನಶೆ ಏರಿಸಲು
ವಿಕ್ಸ್, ಫೆವಿಕಾಲ್ ಇಟ್ಟುಕೊಳ್ಳುತ್ತಾರೆ: ಲೋಹಿತ್ ಗಟ್ಟಿ
ವಿದ್ಯಾರ್ಥಿನಿಯರು ವಿಕ್ಸ್, ಫೆವಿಕಾಲ್ ನಂತಹ ಸೊತ್ತುಗಳನ್ನು ನಶೆ ಏರಿಸಲು ಉಪಯೋಗಿಸುತ್ತಾರೆ. ಬಿಯರ್ ನಲ್ಲಿ ಹೆಚ್ಚು ನಶೆ ತರಿಸಲು ವಾಪಸ್ಸು ಅದಕ್ಕೆ ಟ್ಯಾಬ್ಲೆಟ್ ಹಾಕಿ ನಶೆ ಭರಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಸಂಸ್ಥೆಗಳ 200 ಮೀ. ದೂರಗಳಲ್ಲಿ ಯಾವುದೇ ಮಾದಕ ವ್ಯಸನಗಳನ್ನು ಇಡದಂತೆ ಕಡ್ಡಾಯವಾಗಿ ಸೂಚಿಸಬೇಕು. ಗಡಿಭಾಗದ ಮುದುಂಗಾರುಕಟ್ಟೆ, ಕಲ್ಪನೆ, ನರಿಂಗಾನ, ಹೂಹಾಕುವಕಲ್ಲು ಭಾUಗಳಲ್ಲಿ ಪೊಲೀಸರು ನಿತ್ಯ ತಪಾಸಣೆ ಕೈಗೊಳ್ಳಬೇಕಿದೆ. ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ತಪಾಣಸೆಗಳು ಮಾತ್ರ ನಡೆಯುತ್ತಿಲ್ಲ ಎಂದು ಪಿಎ ಕಾಲೇಜು ಸಹಪ್ರಾಧ್ಯಾಪಕ ಲೋಹಿತ್ ಗಟ್ಟಿ ಹೇಳಿದ್ದಾರೆ.