Site icon Ullalavani

ತಂಡದಿಂದ ಹಲ್ಲೆಗೊಳಗಾದವರೇ ಬಂಧನಕ್ಕೊಳಗಾದರು !

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕಲ್ಲಾಪು: ತೊಕ್ಕೊಟ್ಟು ಕಲ್ಲಾಪು ಸಮೀಪ ತಂಡದಿಂದ ಹಲ್ಲೆಗೊಳಗಾದ ಪ್ರೀತೇಶ್ ಮತ್ತು ಕವಿತ್‍ರಾಜ್ ಪ್ರಕರಣಕ್ಕೆ ಸಂಬಂಧಿಸಿ ಪಿಕಪ್ ವಾಹನ ಚಾಲಕ ಇಕ್ಬಾಲ್ ಎಂಬಾತ ನೀಡಿರುವ ಪ್ರತಿದೂರಿನ ಆಧಾರದಂತೆ ಉಳ್ಳಾಲ ಪೊಲೀಸರು ಗಾಯಾಳುಗಳಿಬ್ಬರನ್ನು ನಿನ್ನೆ ಬಂಧಿಸಿದ್ದಾರೆ.

ಪಿಕಪ್ ವಾಹನ ಓವರ್ ಟೇಕ್ ವಿಚಾರಕ್ಕೆ ಸಂಬಂಧಿಸಿ ಸೋಮವಾರ ತಡರಾತ್ರಿ ಕಲ್ಲಾಪು ಸಮೀಪ ಪ್ರೀತೇಶ್ ಮತ್ತು ಕವಿತರಾಜ್ ಎಂಬವರ ರಿಟ್ಝ್ ಕಾರು ತಡೆದು ಸುಮಾರು 50 ರಷ್ಟು ಮಂದಿ ಹಲ್ಲೆ ನಡೆಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಿನ್ನಮತೀಯರು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದಾಗಿ ಕೆಲಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.

ಈ ಬಗ್ಗೆ ಉಳ್ಳಾಲ ಪೊಲೀಸರಲ್ಲಿ ಅಪರಿಚಿತ ತಂಡ ದಾಳಿ ನಡೆಸಿರುವ ಕುರಿತು ಇಬ್ಬರು ದೂರು ನೀಡಿದ್ದರು. ಆನಂತರ ಮತ್ತೆ ಪ್ರತಿದೂರು ದಾಖಲಿಸಿದ ಪಿಕಪ್ ವಾಹನದ ಚಾಲಕ ಬೈಂದೂರು ನಿವಾಸಿ ಇಕ್ಬಾಲ್ ಎಂಬಾತ, ನೇತ್ರಾವತಿ ಸೇತುವೆ ಸಮೀಪ ರಿಟ್ಝ್ ಕಾರನ್ನು ಪಿಕಪ್ ವಾಹನಕ್ಕೆ ಅಡ್ಡವಿಟ್ಟ ಇಬ್ಬರು ವಾಹನದ ಗಾಜನ್ನು ಪುಡಿಗೈದಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದು ಪರಾರಿಯಾಗಿದ್ದಾರೆ ಎಂದು ದೂರನ್ನು ನೀಡಿದ್ದ. ಅದರಂತೆ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಪ್ರೀತೇಶ್ ಈ ಹಿಂದೆ ಉದ್ಯಮಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ.

Exit mobile version