
ಉಳ್ಳಾಲ: ಪಂಚಾಯತ್ ಗಳಿಂದ ನಿವೇಶನ ರಹಿತರಿಗೆ ಆಶ್ರಯ ಮನೆಗಳು ಸಿಗುತ್ತಿಲ್ಲ.ಸರಕಾರದಿಂದ ಜನಪರ ಯೋಜನೆಗಳು ಯಾವುದೂ ಸಿಕ್ಕಿಲ್ಲ.ಇರುವ ಸವಲತ್ತುಗಳೂ ಜನರಿಗೆ ತಲುಪುತ್ತಿಲ್ಲ.ಜನಸಾಮಾನ್ಯರು ಕಷ್ಟ ಪಟ್ಟು ಒಂದು ಮನೆ ಕಟ್ಟಲು ಬೇಕಾದ ಕಲ್ಲು,ಮರಳು ಯಾವುದೂ ಸಿಗುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನ ಖಂಡಿಸಿ ಅಂಬ್ಲಮೊಗರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬಿಜೆಪಿ ಅಂಬ್ಲಮೊಗರು ಶಕ್ತಿ ಕೇಂದ್ರದ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರಕಾರದ ಎಲ್ಲಾ ಮುಖ್ಯಮಂತ್ರಿಗಳು ಅನೇಕ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರು ಜಾರಿಗೊಳಿಸಿದ್ದ ಭಾಗ್ಯ ಲಕ್ಷ್ಮೀ ಯೋಜನೆಯು ಬಹಳ ಜನಪ್ರಿಯತೆ ಪಡೆದಿತ್ತು.ಅಂತಹ ಜನಪ್ರಿಯ ಯೋಜನೆಯನ್ನೇ ಕಾಂಗ್ರೆಸ್ ಸರಕಾರ ಕೈ ಬಿಟ್ಟಿದೆ. ಅದೇ ರೀತಿ ಸಂಧ್ಯಾ ಸುರಕ್ಷ ಯೋಜನೆ ಫಲಾನುಭವಿಗಳಿಗೂ ಹಣ ನೀಡದೆ ಸತಾಯಿಸುತ್ತಿದ್ದು,ವೃದ್ದಾಪ್ಯ ವೇತನವನ್ನೂ ಕಡಿತಗೊಳಿಸಿದೆ. ಬಲು ಮುಖ್ಯವಾಗಿ 9/11 ನೀತಿಯನ್ನ ಸರಳೀಕರಣಗೊಳಿಸದ ಪರಿಣಾಮ ಜನರು ಬವಣೆ ಪಡುವಂತಾಗಿದೆ. ವಿದಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿಗಳಿಗೆ ಜನಸಾಮಾನ್ಯರ ಕೂಗು ಕೇಳಿಸ ಬೇಕೆಂದು ಸ್ಥಳೀಯಾಡಳಿತಗಳ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಹರೀಶ್ ಅಂಬ್ಲಮೊಗರು, ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಬ್ರಿಜೇಶ್ ನಾಯರ್, ಅಂಬ್ಲಮೊಗರು ಶಕ್ತಿ ಕೇಂದ್ರದ ಅಧ್ಯಕ್ಷರಾದ ನವೀನ್ ನಡುಮನೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಜೇಶ್ ಖಂಡಿಲ, ಪ್ರಮುಖರಾದ ಪ್ರವೀಣ್ ಬೊಳಮಾಡಿ, ರಮೇಶ್ ಪೂಜಾರಿ, ಗಂಗಾಧರ ಪೂಜಾರಿ, ದಿನೇಶ್ ಅಂಚನ್, ಪ್ರಕಾಶ್ ಖಂಡಿಲ, ಸುಕುಮಾರ್ ಕ್ವಾಟ್ರಗುತ್ತು, ವಾಮನ್ ಚಾಪು ಮನೆ, ಶೈಲೇಶ್ ನಡುಮನೆ, ರಾಜೇಶ್ ಆಚಾರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.