Site icon Ullalavani

ಜಿಲ್ಲೆಯ ಜೀವನಾಡಿ ಕೆಂಪುಕಲ್ಲು – ಮರಳಿನಿಂದ ಸಂಕಷ್ಟದಲ್ಲಿ ಕಾರ್ಮಿಕರು : ಜಗದೀಶ್ ಆಳ್ವ ಕುವೆತ್ತಬೈಲ್

ಪಜೀರು : ಜಿಲ್ಲೆಯ ಜೀವನಾಡಿಯಾಗಿರುವ ಕೆಂಪುಕಲ್ಲು, ಮರಳು ಎಲ್ಲಾ ನಿಷೇಧವಾಗಿ, ಕಾರ್ಮಿಕರು ತುಂಬಾ ಕಷ್ಟದಲ್ಲಿದ್ದಾರೆ. ಆದಷ್ಟು ಬೇಗ ಕಾಂಗ್ರೆಸ್ ಸರಕಾರ ಅವೆಲ್ಲದನ್ನೂ ಸರಳೀಕರಣಗೊಳಿಸಿ, ಜನರಿಗೆ ತಲುಪಿಸಲು ಆದಷ್ಟು ಬೇಗ ಕ್ರಮ ವಹಿಸಬೇಕಿದೆ. ಇಲ್ಲದೇ ಹೋದಲ್ಲಿ ಕಾರ್ಮಿಕರು ರಸ್ತೆಗೆ ಬೀಳುವ ದಿನಗಳು ದೂರವಿಲ್ಲ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಹೇಳಿದ್ದಾರೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಜೀರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬಿ.ಜೆ.ಪಿ. ಪಾವೂರು ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರಕಾರ ಹಾಗೂ ಹಿಂದಿನ ಬಿಜೆಪಿ ಸರಕಾರ ಕೃಷಿಕರಿಗೆ ನೀಡಿರುವ ಸವಲತ್ತುಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ಏಕಾಏಕಿ ಸ್ಥಗಿತಗೊಳಿಸಿದೆ. ಇದರಿಂದ ರೈತರಿಗೆ ಮಳೆಗಾಲದ ಸಮಯದಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಜಾಗದ ನೋಂದಾವಣೆಗೆ ಅಧಿಕ ಶುಲ್ಕ, 9/11 ತೆಗೆಯಬೇಕಾದಲ್ಲಿ ಮುಡಾಕ್ಕೆ ತಿಂಗಳಾನುಗಟ್ಟೆಲೆ ಅಲೆದಾಡಬೇಕು, ಬ್ರೋಕರ್ ಹಾವಳಿ ಹೀಗೆ ಅಡಚಣೆಗಳು ಸಾಲುಗಟ್ಟಲೆ ರಾಜ್ಯದಲ್ಲಿದೆ. ದಬ್ಬಾಳಿಕೆಯನ್ನು ಮಾಡಿ ಜನರ ಬಾಯಿ ಮುಚ್ಚಿಸುವ ಕಾರ್ಯಗಳಾಗುತ್ತಿದೆ. ದುರಾಡಳಿತ ಅಂತ್ಯಗೊಳಿಸದೇ ಹೋದಲ್ಲಿ ನಿರಂತರ ಹೋರಾಟ ನಡೆಸಲಿದ್ದೇವೆ ಎಂದರು.


ಅಲ್ಪಸಂಖ್ಯಾತ ಮೋರ್ಛಾ ಉಪಾಧ್ಯಕ್ಷ ಮೊಹಮ್ಮದ್ ಅಝ್ಗರ್ ಮಾತನಾಡಿ, 23 ತಾರೀಖು ಕಳೆದರೂ ಕೇಂದ್ರ ಸರಕಾರ ಕೊಟ್ಟ ಅಕ್ಕಿಯನ್ನು ರೇಷನ್ ವಿತರಣೆ ಪಜೀರು ಗ್ರಾಮದಲ್ಲಿ ಮಾಡಲಾಗಿಲ್ಲ. ಜಲಸಮೃದ್ಧಿ ಯೋಜನೆ ಮುಖಾಂತರ ರೂ. 3.5 ಪಜೀರು ಗ್ರಾಮಕ್ಕೆ ಮಂಜೂರಾಗಿದೆ. ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಪಜೀರು ಗ್ರಾಮದ ಮಸೀದಿ ಮಂದಿರದ ಮಧ್ಯದಲ್ಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಕೋಟೆಕಾರು ಬ್ಯಾಂಕ್ ದರೋಡೆ, ರಾಜ್ಯವನ್ನು ಬೆಚ್ಚಿಬೀಳಿಸುವ ಡ್ರಗ್ಸ್ ದಂಧೆಯನ್ನು ಮಂಗಳೂರು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸುತ್ತಾರದರೆ, ಇಲ್ಲಿನ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸಾಧ್ಯವಾದ ಮಾತಾಗಿದೆ. ಪೊಲೀಸ್ ಇಲಾಖೆಯೊಳಗಡೆ ಜನಪ್ರತಿನಿಧಿಗಳ ಒತ್ತಡ, ಲಾಭಿಯಿಂದ ಪೊಲೀಸರ ಕೈಗಳನ್ನು ಕಟ್ಟಿದಂತಾಗಿದೆ. ಶುಕ್ರವಾರದ ಪ್ರಾರ್ಥನೆಯ ಸಮಯ ಬದಲಾಯಿಸಿ, ಹಗಲಿರುಳು ಶ್ರಮಿಸಿ, ಚುನಾವಣೆಯಲ್ಲಿ ಭಾಗಿಯಾಗಿ, ಧಾರ್ಮಿಕ ಮುಖಂಡರು ಕಾಂಗ್ರೆಸ್ ಗೆ ಮತ ಹಾಕುವಂತೆ ತಿಳಿಸಿದ್ದರೂ, ಮುಸ್ಲಿಂ ಸಮುದಾಯದವರಿಗೆ ರಕ್ಷಣೆ ಕೊಡಲು ರಾಜ್ಯದ ಕಾಂಗ್ರೆಸ್ ಸರಕಾರದಿಂದ ಆಗಿಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮುಖಂಡ ಜಯರಾಮ್ ಪೂಂಜ, ರಾಜೇಶ್ ಶೆಟ್ಟಿ ಪಜೀರುಗುತ್ತು, ಜಯರಾಮ್ ಶೆಟ್ಟಿ ಕಂಬ್ಲಪದವು, ಕೊಣಾಜೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ವಿಜೇತ್ ಪಜೀರ್, ಶಿವಕುಮಾರ್ ಅಡಪ, ಜಗದೀಶ್ ಕೋಟ್ಯಾನ್ ಪಾನೇಲ, ಪ್ರವೀಣ್ ಆಳ್ವ, ಕೃಷ್ಣ ಪ್ರಸಾದ್ ಪಜೀರ್, ಯುವಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ ಮುಂತಾದವರು ಉಪಸ್ಥಿತರಿದ್ದರು.

Exit mobile version