Site icon Ullalavani

ರೈತನ ಅಕ್ರಮ ಸಕ್ರಮ ಹಕ್ಕನ್ನೇ ಕಸಿಯುವ ಮೂಲಕ ಅನ್ನದಾತನನ್ನು ರಾಜ್ಯದ ಕಾಂಗ್ರೆಸ್ ಸರಕಾರ ಕಡೆಗಣಿಸಿದೆ : ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು

ಉಳ್ಳಾಲ: ಅಕ್ರಮ ಸಕ್ರಮ ಅರ್ಜಿಯನ್ನು ಕೃಷಿಕನಿಗೆ ಕೊಡುವ ವ್ಯವಸ್ಥೆ ಬಿಜೆಪಿ ಸರಕಾರ ಮಾಡಿತ್ತು. ಆದರೆ ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿಗೆ ಘನತೆ ಗೌರವ ಕೊಡದೇ , ರೈತ ಅಕ್ರಮ ಸಕ್ರಮಕ್ಕೆ ಹಾಕಿರುವ ಅರ್ಜಿಯನ್ನು ಕಾಂಗ್ರೆಸ್ ಸರಕಾರ ತಿರಸ್ಕಾರ ಮಾಡುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಅನ್ನದಾತ ಕೃಷಿಕನಿಗೆ ಅನ್ಯಾಯ ಮಾಡುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.


ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೊಣಾಜೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬಿ.ಜೆ.ಪಿ. ಪಾವೂರು ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಏಕನಿವೇಶನ ನಕ್ಷೆಯ ಅಧಿಕಾರವನ್ನು ನಗರಾಭಿವೃದ್ಧಿ, ಯೋಜನಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡುವ ಮುಖಾಂತರ ಬಡ ಜನರಿಗೆ ಒಂದು ಮನೆ ಕಟ್ಟಲು 3-4 ತಿಂಗಳುಗಳ ತಿರುಗಾಡುವಂತೆ ಮಾಡಲಾಗಿದೆ. 9/11 ಆಗದೇ ಸಿಂಗಲ್ ಸೈಟ್ ಅನುಮತಿ ಸಿಗದೇ ಬಡ ವರ್ಗದವನಿಗೆ ಮನೆ ಕಟ್ಟುವುದೇ ಅಸಾಧ್ಯವಾಗಿದೆ. ನಗರಾಭಿವೃದ್ಧಿ ಹಾಗೂ ಯೋಜನಾ ಪ್ರಾಧಿಕಾರಕ್ಕೆ 2-3 ಜನ ಇದ್ದರೆ ಒಬ್ಬೊಬ್ಬರಿಗೆ 3,4 ತಾಲೂಕು ಜವಾಬ್ದಾರಿ ನೀಡಲಾಗಿದೆ. 1992 ರ 73ರ ತಿದ್ದುಪಡಿಯಲ್ಲಿ ಗ್ರಾ.ಪಂ.ಗೆ, ತಾ.ಪಂ, ಜಿ.ಪಂ ವಿಶೇಷ ಸ್ಥಾನಮಾನ ಕೊಡುವ ವಿಚಾರವಾಗಿತ್ತು.


74 ರ ತಿದ್ದುಪಡಿಯಲ್ಲಿ ನಗರಾಡಳಿತಕ್ಕೆ ವಿಶೇಷ ತಿದ್ದುಪಡಿ ಸಿಕ್ಕಿತ್ತು. ಆದರೆ ಸದ್ಯ ರಾಜ್ಯ ಸರಕಾರ ಕಳೆದ 2 ವರ್ಷಗಳಿಂದ ಗ್ರಾ.ಪಂ ಸದಸ್ಯರ, ಅಧ್ಯಕ್ಷರ ಎಲ್ಲಾ ಶಕ್ತಿಯನ್ನು ಕಸಿದುಕೊಂಡಿದೆ. ಸಾಮಾನ್ಯ ವರ್ಗದ ಬಡಜನರಿಗೆ ತೊಂದರೆಯನ್ನು ಕೊಡುತ್ತಾ ಬಂದಿದೆ.
ಜೀವನದಲ್ಲಿ ಒಂದು ಬಾರಿ ಮನೆ ಕಟ್ಟಲು ಮುಂದಾಗುವ ಬಡ ಜನರಿಗೆ ಅನ್ಯಾಯವನ್ನು ರಾಜ್ಯ ಕಾಂಗ್ರೆಸ್ ಸರಕಾರ ಮಾಡುತ್ತಿದೆ.
ಎರಡು ವರ್ಷದಲ್ಲಿ ಯಾವುದೇ ಒಂದು ವಸತಿ ಯೋಜನೆಯನ್ನೂ ಅನುಷ್ಠಾನಗೊಳಿಸಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಪ್ರತೀ ಪಂ.ನಲ್ಲಿ 100 ಮನೆ ಕೊಡುವ ವ್ಯವಸ್ಥೆಯಾಗಿತ್ತು. ಭ್ರಷ್ಟ ಕಾಂಗ್ರೆಸ್ ಸರಕಾರ ಅದನ್ನೂ ಕಸಿಯುವ ವ್ಯವಸ್ಥೆ ಮಾಡಿದೆ. ಸರಕಾರದ ಖಜಾನೆಯಲ್ಲಿ ಹಣವಿಲ್ಲ. ವಾಲ್ಮೀಕಿ ಹಗರಣದ ಮೂಲಕ 197 ಕೋಟಿ ಬೇರೆ ರಾಜ್ಯ ಚುನಾವಣೆಗೆ ಉಪಯೋಗಿಸಿದರು. ಸಿದ್ಧರಾಮಯ್ಯ ಒಪ್ಪಿಕೊಂಡು 86 ಕೋಟಿ ಹಣವನ್ನು ನೇರ ಬ್ಯಾಂಕಿಗೆ ಜಮಾ ಮಾಡುವ ಮೂಲಕ ಭ್ರಷ್ಟಾಚಾರವನ್ನು ಎತ್ತಿ ತೋರಿಸಿದರು. ಮುಡಾ ಮೈಸೂರಿನಲ್ಲಿ ಪತ್ನಿ ಹೆಸರಿನಲ್ಲಿ 14 ಸೈಟ್ ಮಾಡಿ ವಾಪಸ್ಸು ಕೊಟ್ಟಿದ್ದಾರೆ. ಕಾನೂನು ಎಂಬುದನ್ನು ಅವರಿಗವರೇ ಮಾಡುವ ಸ್ಥಿತಿಯಿದೆ. ಸಕಾಲವನ್ನು ಚಾಲ್ತಿಗೆ ತಂದವರು ಬಿಜೆಪಿ ಸರಕಾರ ಆದರೆ ಅದನ್ನೇ ನಿಲ್ಲಿಸಲಾಗಿದೆ ಇದೀಗ ಕೇವಲ 10 ಲಕ್ಷ ಮಾತ್ರ ಪಂಚಾಯತ್ ಗೆ ಅನುದಾನ ಬರುತ್ತಿದೆ. ಅದರಲ್ಲಿ 4 ಲಕ್ಷ ಸಿಬ್ಬಂದಿ ವೇತನಕ್ಕೆ ಹಾಗೂ 6 ಲಕ್ಷ ನೀರಿನ ಬಿಲ್, ವಿದ್ಯುತ್ ಬಿಲ್ ವಿನಿಯೋಗಿಸಲಾಗುತ್ತಿದೆ. ಕೇಂದ್ರ ಸರಕಾರದ 15 ನೇ ಹಣಕಾಸು ಯೋಜನೆಯಿಂದಷ್ಟೇ ಗ್ರಾ.ಪಂ.ಗಳು ನಡೆಯುತ್ತಿದೆ. ಪ್ರಸ್ತುತ ಹೋರಾಟದ ಮೂಲಕ ಗ್ರಾಮದ ಜನರಿಗೆ ಗ್ರಾ.ಪಂ ಶಕ್ತಿ ತುಂಬುವ ಕೆಲಸ ಆಗಿದೆ. ಇದೀಗ ಆರಂಭ ಮಾತ್ರ, ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ಗೀತಾ ದಾಮೋದರ್, ಉಪಾಧ್ಯಕ್ಷೆ ಹರಿಶ್ಚಂದ್ರ ಶೆಟ್ಟಿಗಾರ್, ಮಂಡಲ ಉಪಾಧ್ಯಕ್ಷ ಹುಕ್ರಪ್ಪ ನಾಯ್ಕ್, ಯುವಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ಮಂಡಲ ಕಾರ‍್ಯದರ್ಶಿ ಭರತ್ ರಾಜ್ ಗಟ್ಟಿ, ರೈತಮೋರ್ಚಾ ಅಧ್ಯಕ್ಷ ಪದ್ಮನಾಭ ಗಟ್ಟಿ, ಜಿಲ್ಲಾ ಕಾರ‍್ಯಕಾರಿಣಿ ಸಮಿತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಪುಲ್ಲು, ಕೊಣಾಜೆ ಶಕ್ತಿಕೇಂದ್ರ ಅಧ್ಯಕ್ಷ ಸನತ್ ಕಕ್ಕೆಮಜಲು, ಗ್ರಾ.ಪಂ ಸದಸ್ಯ ಶೇಖರ್ ಕೊಪ್ಪಲ, ರಾಜೀವಿ ಶೆಟ್ಟಿ, ರವಿ ದಡಸ್, ಶೈಲೇಶ್, ವಿಜಯ ಗಣೇಶ್ ಅಸೈಗೋಳಿ, ರಾಮಕೃಷ್ಣ ಪಟ್ಟೋರಿ, ಶಶಿಕಲಾ ಬೊಳ್ಳೆಕುಮೇರ್, ವನಿತಾ ಶೆಟ್ಟಿ, ವಿಜೇತ ಎಸ್ ರೈ, ವರದರಾಜ್ ಬೊಳ್ಳಕುಮೇರು ಉಪಸ್ಥಿತರಿದ್ದರು.

Exit mobile version