
ಉಳ್ಳಾಲ: ಕಾರ್ಮಿಕರು ದೈನಂದಿನ ಕೂಲಿಯ ಮೇಲೆ ಅವಲಂಬಿತರಾಗಿದ್ದು, ಕಾಮಗಾರಿ ನಿಲ್ಲುವುದರಿಂದ ಆರ್ಥಿಕವಾಗಿ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಕೆಲವರು ಊರಿಗೆ ಹಿಂತಿರುಗುವ ಪರಿಸ್ಥಿತಿಯಲ್ಲಿದ್ದಾರೆ. ನಿರ್ಮಾಣ ಉದ್ಯಮದ ಪುನಶ್ಚೇತನಕ್ಕಾಗಿ ಸರ್ಕಾರ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಕಾರ‍್ಯದರ್ಶಿ ಚಂದ್ರಹಾಸ್ ಪಿಲಾರ್ ಆಗ್ರಹಿಸಿದ್ದಾರೆ.
ಅವರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಪ್ರಾರಂಭಿಸುವ ಬಗ್ಗೆ ತಾಲೂಕು ಉಪತಹಶೀಲ್ದಾರರಾದ ವಿನಯ ಎಸ್. ರಾವ್ ಇವರಿಗೆ ನಾಟೆಕಲ್ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು.
ಕೆಂಪು ಕಲ್ಲು ಮತ್ತು ಮರಳಿನ ಕೊರತೆಯು ಇದೀಗ ಕಟ್ಟಡ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಮಹತ್ತರವಾದ ತೊಂದರೆಯನ್ನು ಉಂಟುಮಾಡುತ್ತಿದೆ. ನಿರ್ಮಾಣ ಸಾಮಗ್ರಿಗಳ ಲಭ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ, ಅನೇಕ ಕಟ್ಟಡ ಕಾಮಗಾರಿ ಸ್ತಬ್ಧಗೊಂಡಿವೆ. ಇದರಿಂದ ಕೆಲಸವಿಲ್ಲದೇ ನಿರುದ್ಯೋಗ ಸ್ಥಿತಿಗೆ ತಲುಪಿದ ಕಾರ್ಮಿಕರು ದಿನಸಿ ಖರ್ಚುಗಳನ್ನೂ ಕೊಳ್ಳಲಾಗದೆ ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಜಿಲ್ಲಾಡಳಿತ ಸೂಕ್ತ ಪರಿಹಾರವನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ಮುಖೇನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಈ ಸಂದರ್ಭ ಸಿಪಿಎಂ ಮುಡಿಪು ವಲಯ ಕಾರ‍್ಯದರ್ಶಿ ರಫೀಕ್ ಹರೇಕಳ , ಪಿಂಚಣಿದಾರರ ಉಳ್ಳಾಲ ತಾಲೂಕು ವಲಯ ಅಧ್ಯಕ್ಷ ಸುಧಾಕರ್ ಆಳ್ವ , ಕಟ್ಟಡ ಕಾರ್ಮಿಕರ ಅಧ್ಯಕ್ಷ ಜನಾರ್ಧನ್ ಕುತ್ತಾರ್, ಪದಾಧಿಕಾರಿಗಳಾದ ಶೇಖರ್ ಪಿಲಾರ್, ಸದಾಶಿವ ಕುತ್ತಾರ್, ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ಮ ಗ್ರಾಮ ಸಮಿತಿ ಅಧ್ಯಕ್ಷ ಇಬ್ರಾಹಿಂ ಮದಕ ಉಪಸ್ಥಿತರಿದ್ದರು.