
ಬಗಂಬಿಲ : ಬೆಂಕಿ ಅವಘಢದಿಂದ ಸಂಪೂರ್ಣ ಮನೆ ಹಾಗೂ ವಸ್ತುಗಳನ್ನು ಕಳೆದುಕೊಂಡ ಮನೆಮಂದಿಗೆ ರಜಕ ಯೂತ್ ವತಿಯಿಂದ ನೆರವಿನ ಹಸ್ತ ನೀಡಲಾಯಿತು.
ದೇರಳಕಟ್ಟೆಯ ವೈದ್ಯನಾಥನಗರದಲ್ಲಿ ಸುಶೀಲಾ ಮಡಿವಾಳ್ತಿ ಇವರ ಮನೆಯಲ್ಲಿ ಜೂ.6 ರಂದು ಘಟನೆ ಸಂಭವಿಸಿತ್ತು. ಘಟನೆಯಿಂದ ಲಕ್ಷಾಂತರ ನಷ್ಟವೂ ಉಂಟಾಗಿದೆ. ದಿನಗೂಲಿ ನಡೆಸಿ ಸಂಸಾರದ ನೌಕೆಯನ್ನು ಸಾಗಿಸುತ್ತಿರುವ ಕುಟುಂಬಕ್ಕೆ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೀಗ ರಜಕ ಯೂತ್ ಮಂಗಳೂರು ತಂಡವು ಭೇಟಿ ನೀಡಿ ರೂ. 40,000 ಆರ್ಥಿಕ ನೆರವು ನೀಡಿ ಸಹಕರಿಸಿದೆ.
ಬೆಂಕಿ ದುರಂತದಿಂದ ಜನಾರ್ಧನ ಮಡಿವಾಳರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ನೆರವು ಅವರಿಗೆ ಸ್ವಲ್ಪಮಟ್ಟಿಗೆ ಆಸರೆಯಾಗಲಿದೆ ಎಂದು ರಜಕ ಯೂತ್ ತಂಡದ ಸದಸ್ಯರು ತಿಳಿಸಿದ್ದಾರೆ.
ಜೊತೆಗೆ, ಸರಕಾರ ಹಾಗೂ ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ತಕ್ಷಣದ ಸಹಾಯ ಹಸ್ತ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಅಲ್ಲದೆ, ಶಾಸಕರ ಪರಿಹಾರ ನಿಧಿಯಿಂದ ಕೂಡ ಸಹಾಯ ನೀಡುವ ನಿರೀಕ್ಷೆಯಲ್ಲಿ ಕುಟುಂಬ ಇದೆ.
ರಜಕ ಯೂತ್ ತಂಡದ ನಾಯಕ ಪ್ರದೀಪ್ , ಮನೆಮಂದಿ ಸುಶೀಲಾ ಮಡಿವಾಳ್ತಿ, ಆಶಾ, ಜನಾರ್ದನ ಮಡಿವಾಳ ಉಪಸ್ಥಿತರಿದ್ದರು.