Site icon Ullalavani

ರಿಕ್ಷಾ ಗಾಜು ಒಡೆದು ಕೊಲೆಗೆ ಯತ್ನಿಸಿದ ರೌಡಿಶೀಟರ್‌ ಬಂಧನ

ಉಳ್ಳಾಲ : ಕಳವುಗೈದ ರಿಕ್ಷಾ ಬ್ಯಾಟರಿಗಳನ್ನು ವಾಪಸ್ಸು ತಂದು ಇಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ರೌಡಿಶೀಟರ್‌ ಓರ್ವ ರಿಕ್ಷಾ ಗಾಜು ಒಡೆದು, ಯುವಕನೋರ್ವನ ಮೇಲೆ ಕತ್ತಿ ಬೀಸಿ ಕೊಲೆಗೆ ಯತ್ನಿಸಿ, ಮನೆ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ ಕೊಲೆಬೆದರಿಕೆ ಹಾಕಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಹೈದರ್ ಆಲಿ ರಸ್ತೆಯ ಮುಕ್ಕಚ್ಚೇರಿ ಎಂ.ಎಫ್.ಸಿ ಕ್ಲಬ್ ಹತ್ತಿರ ನಡೆದಿದೆ. ಘಟನೆ ಸಂಬಂಧ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಆರೋಪಿ ರೌಡಿಶೀಟರ್‌ ಅರ್ಫಾನ್ ನನ್ನು ಬಂಧಿಸಿದ್ದಾರೆ.
ಅಬ್ದುಲ್ಲಾ ಹಮೀದ್‌ ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ. ಹಮೀದ್‌ ಅವರ ರಿಕ್ಷಾದ ಗಾಜನ್ನು ಒಡೆದ ಆರೋಪಿ ಬಳಿಕ ಅಳಿಯ ಮೊಹಮ್ಮದ್‌ ಇರ್ಷಾದ್‌ ಅವರ ರಿಕ್ಷಾದ ಗಾಜನ್ನು ಒಡೆಯಲು ಮುಂದಾಗಿದ್ದಾನೆ. ಅಲ್ಲದೆ ಹಮೀದ್ ಅವರ ಪುತ್ರ ಆದಿಲ್‌ ಅಹಮ್ಮದ್‌ ಎಂಬವರ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದನು. ಜೂ.10 ರಂದು ಮಧ್ಯಾಹ್ನ2 ರ ಹೊತ್ತಿಗೆ ಮನೆಯ ಕಿಟಕಿ ಸಮೀಪ ನಿಲ್ಲಿಸಿದ್ದ ಎರಡು ರಿಕ್ಷಾಗಳ ಬ್ಯಾಟರಿಗಳನ್ನು ಅರ್ಫಾನ್‌ ಮತ್ತು ಆತನ ಇಬ್ಬರು ಸಹಚರರು ಕಳವು ನಡೆಸಿದ್ದರು. ಈ ಬಗ್ಗೆ ಅಳಿಯ ಮೊಹಮ್ಮದ್‌ ಇರ್ಷಾದ್‌ ಕಳವು ನಡೆಸಿದ ಇರ್ಫಾನ್‌ ತಂದೆ ಜಲ್ದೀ ಸಿದ್ದೀಖ್‌ ಎಂಬಾತನಲ್ಲಿ ಬ್ಯಾಟರಿ ಕಳವು ನಡೆಸಿದ ಕುರಿತು ಮೊಬೈಲ್‌ ಫೂಟೇಜ್‌ ಇರುವುದಾಗಿಯೂ, ಎರೆಡು ಬ್ಯಾಟರಿಗಳನ್ನು ವಾಪಸ್ಸು ತಂದು ಕೊಡುವಂತೆ ಮೊಬೈಲ್‌ ಮೂಲಕ ತಿಳಿಸಿದ್ದನು. ಈ ವೇಳೆ ಜಲ್ದೀ ಸಿದ್ದೀಖ್‌ ಮೊಬೈಲ್‌ ಫೂಟೇಜ್‌ ಕಳುಹಿಸುವಂತೆ ತಿಳಿಸಿದ್ದನು. ನಂತರ ಜೂ.12 ರಂದು ಮಧ್ಯಾಹ್ನ 2 ರ ವೇಳೆ ಅರ್ಫಾನ್‌ ಮತ್ತೆ ಅಬ್ದುಲ್ಲಾ ಹಮೀದ್‌ ಮನೆ ಬಳಿ ಬಂದು, ಅಳಿಯ ಮೊಹಮ್ಮದ್‌ ಇರ್ಷಾದ್‌ ನನ್ನು ಕೇಳಿದ್ದಾನೆ. ಆತನಿಲ್ಲ ಎಂದು ಹಮೀದ್‌ ಮತ್ತು ಅವರ ಪುತ್ರಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ವಾಪಸ್ಸಾಗಿದ್ದನು.
ಜೂ.13 ರಂದು ಅಬ್ದುಲ್ಲಾ ಹಮೀದ್‌ ಮತ್ತು ಮೊಹಮ್ಮದ್‌ ಇರ್ಷಾದ್‌ ಮಸೀದಿಗೆ ಪ್ರಾರ್ಥನೆಗೆಂದು ತೆರಳಲು ಅನುವಾಗಿದ್ದ ಸಂದರ್ಭ ಹಮೀದ್‌ ಅವರ ರಿಕ್ಷಾದ ಗಾಜಿಗೆ ಇಂಟರ್‌ ಲಾಕ್‌ ಮೂಲಕ ಬಡಿದು ಹಾನಿಗೊಳಿಸಿದ್ದಾನೆ. ಮತ್ತೆ ಇರ್ಷಾದ್‌ ರಿಕ್ಷಾದ ಗಾಜು ಒಡೆಯಲು ಮುಂದಾದಾಗ ಮನೆಯಲ್ಲಿದ್ದ ಹಮೀದ್‌ ಅವರ ಪುತ್ರ ಆದಿಲ್‌ ಅಹಮ್ಮದ್‌, ಪತ್ನಿ ಹಾಗೂ ಪುತ್ರಿ ಜೋರಾಗಿ ಬೊಬ್ಬೆ ಹಾಕಲು ಆರಂಭಿಸಿದಾಗ ಅರ್ಫಾನ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಸ್ಕೂಟರಿನಲ್ಲಿದ್ದ ಕತ್ತಿಯನ್ನು ತಂದು ಆದಿಲ್‌ ಅಹಮ್ಮದ್‌ ತಲೆ ಕಡಿಯಲು ಯತ್ನಿಸುತ್ತಿದ್ದಂತೆ, ಆತ ತಪ್ಪಿಸಿಕೊಂಡಿದ್ದರಿಂದಾಗಿ ಬದುಕುಳಿದ್ದಾನೆ. ಈ ವೇಳೆ ಮನೆಮಂದಿ ಯಾರನ್ನೂ ಬಿಡುವುದಿಲ್ಲ, ಕೊಲ್ಲುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಈ ಕುರಿತು ಕಾರ್ಯಪ್ರವತ್ತರಾದ ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃತ್ವದ ಇಬ್ಬರನ್ನು ಬಂಧಿಸಿದೆ.

Exit mobile version