ಉಳ್ಳಾಲ : ಮಂಜನಾಡಿ ಉರುಮಣೆ ಕೋಡಿ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ ಹಾಗೂ ಮೊಮ್ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಅಜ್ಜಿಯ ಪುತ್ರ, ಮಕ್ಕಳ ತಂದೆ ಸೀತಾರಾಮ ಪೂಜಾರಿ ಅವರು ಅವೈಜ್ಞಾನಿಕ ರಸ್ತೆ ಕಾಮಗಾರಿ ಮತ್ತು ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ನಡೆಸಿರುವ ಕಾಮಗಾರಿಯಿಂದ ದುರಂತ ಸಂಭವಿಸಿರುವುದಾಗಿಯೂ ಕೊಣಾಜೆ ಪೊಲೀಸ್ ಠಾಣೆ ಹಾಗೂ ಸರಕಾರದ ಮುಖ್ಯ ಕಾರ‍್ಯದರ್ಶಿಗೆ ದೂರು ಸಲ್ಲಿಕೆಗೆ ಸ್ಪಂಧಿಸಿರುವ ರಾಜ್ಯ ಮುಖ್ಯ ಕಾರ‍್ಯದರ್ಶಿ ಶಾಲಿನಿ ರಜನೀಶ್ ಅವರು ದ.ಕ. ಜಿಲ್ಲಾಡಳಿತ ಹಾಗೂ ಜಿ.ಪಂ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಮೇ.30 ರಂದು ರಾತ್ರಿ ವೇಳೆ ಸುರಿದ ಮಹಾಮಳೆಯ ಸಂದರ್ಭ ಮನೆ ಮೇಲೆ 30 ಅಡಿ ಎತ್ತರದ ಗುಡ್ಡ ಕುಸಿದು ಸೀತಾರಾಮ ಪೂಜಾರಿ ಅವರ ಕುಟುಂಬ ದುರಂತಕ್ಕೊಳಗಾಗಿತ್ತು. ತಾಯಿ ಪ್ರೇಮ ಪೂಜಾರಿ(60), ಇಬ್ಬರು ಮಕ್ಕಳಾದ ಆರ್ಯನ್ (3), ಆರುಷ್ (1.5 ವರ್ಷ) ಮೃತಪಟ್ಟಿದ್ದರು. ಇದರ ಜೊತೆಗೆ ಸೀತಾರಾಮ ಅವರ ಪತ್ನಿ ಅಶ್ವಿನಿಯವರ ಎರಡೂ ಕಾಲುಗಳು ಮತ್ತು ತಂದೆ ಕಾಂತಪ್ಪ ಪೂಜಾರಿಯವರ ಒಂದು ಕಾಲು ಚಿಕಿತ್ಸೆ ಸಂದರ್ಭ ತುಂಡರಿಸಲಾಗಿತ್ತು. ದುರಂತಕ್ಕೆ ಕರ್ನಾಟಕ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಮಂಜೂರಾದ ರೂ.20 ಲಕ್ಷ , ಎಸ್.ಟಿ.ಕಾಲನಿ ಸಿಸಿ ರಸ್ತೆ ಕಾಮಗಾರಿ, ಕೆ.ಆರ್.ಡಿ.ಐ.ಎಲ್ ಮಂಗಳೂರು ಘಟಕದಿಂದ ನಿರ್ಮಾಣಗೊಂಡ ರಸ್ತೆಯ ಕಾಮಗಾರಿ ಎನ್ನಲಾಗಿತ್ತು. ರಸ್ತೆ ನಿರ್ಮಾಣದ ಸಂದರ್ಭ ಗುಡ್ಡದಿಂದ ಮಣ್ಣು ತೆಗೆಯುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಡ್ಡಾಯವಾದ ಭೂವೈಜ್ಞಾನಿಕ ಪರೀಕ್ಷೆ ನಡೆಸಲಾಗಿಲ್ಲ. ಮೈನ್ಸ್ ಆಂಡ್ ಮಿನರಲ್ಸ್ (ರೆಗ್ಯುಲೇಷನ್ ಆಂಡ್ ಡೆವಲಪ್ ಮೆಂಟ್ ಆಕ್ಟ್ 1957 ಪ್ರಕಾರ ಮಣ್ಣಿನ ಸ್ಥಿರತೆ ಮತ್ತು ಕುಸಿತದ ಸಂಭವವನ್ನು ಮೌಲ್ಯಮಾಪನ ನಡೆಸುವುದು ಕಾನೂನು ಬದ್ಧವಾಗಿದೆ. ಇದರ ಜೊತೆಗೆ ಕರ್ನಾಟಕ ಅರಣ್ಯ ನಿಯಮಗಳ ಕಾಯಿದೆ 1964ರ ಅನ್ವಯ ಮರಗಳಿದ್ದಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿದೆ. ಆದರೆ ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೇ ಕಾಮಗಾರಿ ನಡೆಸಲಾಗಿತ್ತು.
ಇನ್ನೂ ದಾಖಲಾಗದ ಎಫ್‌ಐಆರ್
ಕೊಣಾಜೆ ಪೊಲೀಸ್ ಠಾಣೆಯಲ್ಲಿ ದುರಂತ ಸಂಭವಿಸಿದ ಮರುದಿನವೇ ಮೇ.31 ರಂದು ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆ.ಆರ್.ಡಿ.ಐ.ಎಲ್ ಇಂಜಿನಿಯರ್, ಗುತ್ತಿಗೆದಾರರರ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿತ್ತು. ಆದರೆ ನಾಲ್ಕು ದಿನಗಳು ಕಳೆದರೂ ಯಾರ ವಿರುದ್ಧವೂ ಎಫ್ ಐ ಆರ್ ದಾಖಲಾಗಿಲ್ಲ. ಇದೀಗ ರಾಜ್ಯ ಮುಖ್ಯ ಕಾರ‍್ಯದರ್ಶಿಗಳಿಗೆ ದೂರು ನೀಡಿದ ಬೆನ್ನಲ್ಲೇ ಸ್ಪಂಧಿಸಿರುವ ಅಧಿಕಾರಿ ದ.ಕ ಜಿಲ್ಲಾಧಿಕಾರಿಗೆ ಅವರ ಗೈರು ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಆದೇಶ ಇಂದು ಜಿಲ್ಲೆಯ ಅಧಿಕಾರಿಗಳ ಕೈ ಸೇರಿದ್ದು, ಪೊಲೀಸರಿಂದ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳುವರೋ? ಅಥವಾ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುವುದೋ ಅನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
ಅರೆಪ್ರಜ್ಞಾವಸ್ಥೆಯಲ್ಲಿರುವ ಅಶ್ವಿನಿ !
ಮೃತ ಮಕ್ಕಳ ತಾಯಿ ಅಶ್ವಿನಿ ಅವರ ಆರೋಗ್ಯ ಜೂ.4 ರಂದು ಅರೆಪ್ರಜ್ಞಾವಸ್ಥೆಗೆ ತಲುಪಿದೆ. ಜೂ.3 ರ ವರೆಗೆ ವೆಂಟಿಲೇಟರ್ ನಲ್ಲಿದ್ದಂತಹ ಸಂದರ್ಭ ಆರೋಗ್ಯಯುತವಾಗಿಯೇ ಕಾಣಿಸಿಕೊಂಡಿದ್ದ ಅಶ್ವಿನಿ, ಜ್ವರ ಬಂದ ಹಿನ್ನೆಲೆಯಲ್ಲಿ ಯಾಂಟಿಬಯಾಟಿಕ್ ನೀಡುವ ಉದ್ದೇಶದಿಂದ ವೆಂಟಿಲೇಟರ್ ತೆಗೆದ ನಂತರ ಅರೆಪಜ್ಞಾವಸ್ಥೆ ಸ್ಥಿತಿಯಲ್ಲಿರುವುದಾಗಿ ವೈದ್ಯರು ಸಂಬಂಧಿಕರಲ್ಲಿ ತಿಳಿಸಿದ್ದಾರೆ.
