Site icon Ullalavani

ಮಂಗಳೂರು ವಿವಿಯಲ್ಲಿ ಪ್ರೊ. ವಿವೇಕ ರೈಗಳಿಗೆ ಅಭಿವಂದನೆ

ಕೊಣಾಜೆ: ನಾವು ಕರಾವಳಿಯಲ್ಲಿ ದ್ವೇಷ ಬಿತ್ತುವುದು ಬೇಡ. ಬೆಂಕಿ ಹಚ್ಚೋದೂ ಬೇಡ. ಮನುಷ್ಯ ಪ್ರೀತಿಯ ದೀಪ ಹಚ್ಚೋಣ. ಬಹುತ್ವದ ಈ ಮಣ್ಣಿನಲ್ಲಿ ನಾಡಿಗೆ ಹೊಸ ಸಂವೇದನೆಯನ್ನು ದಾಟಿಸಬಲ್ಲ ಶಕ್ತಿಯಿದೆ. ಪರಸ್ಪರ ಗೌರವ ಪ್ರೀತಿಗೆ ಬದ್ಧವಾದ ಸಮಾಜವನ್ನು ಕಟ್ಟೋಣ ಎಂದು ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿದ್ವಾಂಸ ಪ್ರೊ. ಬಿ.ಎ ವಿವೇಕ ರೈ ಅವರಿಗೆ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದ ಪ್ರಯುಕ್ತ ಬುಧವಾರ ಮಂಗಳೂರು ವಿವಿಯಲ್ಲಿ ನಡೆದ ಅಭಿವಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳನ್ನು ಕಟ್ಟಡ, ಹಣದಿಂದ ಕಟ್ಟಲು ಸಾಧ್ಯವಿಲ್ಲ. ಶೈಕ್ಷಣಿಕ ಕಾಳಜಿ, ಜ್ಞಾನದ ಬಗೆಗಿನ ಹಸಿವು ಮತ್ತು ಮಾನವೀಯ ಸಂಬಂಧಗಳ ಸಂಘಟಿತ ಪ್ರಯತ್ನದ ಮೂಲಕ ಕಟ್ಟಬೇಕು ಎಂದು ಹೇಳಿದರು.
ಕುವೆಂಪು ಮತ್ತು ಕಾರಂತರ ಬರವಣಿಗೆ ಮತ್ತು ಬದುಕು ನನಗೆ ಆದರ್ಶ. ಪಂಪ ನನ್ನ ಇಷ್ಟದ ಕವಿ. ಪಂಪನ ಕುರಿತಾಗಿಯೇ ಮುಂದಿನ ನನ್ನ ಕೃತಿ ಬರಲಿದೆ. ಸಾಹಿತ್ಯದ ಓದು ನನಗೆ ಬದುಕಿನ ಪ್ರಾಮಾಣಿಕತೆಯನ್ನು ಕಲಿಸಿದೆ. ಕುಲಪತಿಯಾದ ಬಳಿಕ ಮೂಡಾದಿಂದ ಸೈಟಿನ ಕೊಡುಗೆ ಬಂದಿತ್ತು. ಅಧಿಕಾರಿಗಳು ತಕೊಳ್ಳಿ ಸರ್ ಮುಂದೆ ಮಾರಬಹುದು ಎಂದರೂ ನನಗೆ ಸರಿ ಕಾಣಲಿಲ್ಲ. ನಾನು ಅದನ್ನು ನಿರಾಕರಿಸಿದೆ ಎಂದರು.
ಅಭಿನಂದನ ಭಾಷಣ ಮಾಡಿದ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪಗೌಡ ಅವರು, ‘ನಿಮ್ಮ ಮುಡಿಗೆ ಹೂವನ್ನಲದೆ ಹುಲ್ಲ ತರೆನು’ ಇದು ಪ್ರೊ.ವಿವೇಕ್ ರೈಗಳ ಬದುಕಿನ ಯಶಸ್ಸಿನ ಗುಟ್ಟು. ಜೀವನದುದ್ದಕ್ಕೂ ಶಿಸ್ತು, ಕಾಯಕನಿಷ್ಟೆಯೊಂದಿಗೆ ಬೆಳೆದವರು. ಅವರ ಎಲ್ಲಾ‌ ವಿಮರ್ಶೆಗಳಲ್ಲೂ ಖಂಡನೆ ಇಲ್ಲ ಮಂಡನೆ ಇದೆ ಎಂದರು.
ಕನ್ನಡ‌ ಕೆಲಸಗಳ ತೀವ್ರತೆ ಈಗ ಕಡಿಮೆಯಾಗಿದ್ದು, ಕನ್ನಡ ಮುರಿಯುವ ಕೆಲಸದ ಬದಲು ಕನ್ನಡವನ್ನು ‌ಕಟ್ಟುವ ಕೆಲಸ ನಮ್ಮಿಂದ ಆಗಬೇಕಿದೆ. ಎಲ್ಲಾ ಕನ್ಡಡದ ಮನಸ್ಸುಗಳು ಒಟ್ಟಾಗಿ‌ ಕೆಲಸ ಮಾಡಿದರೆ ಮಾತ್ರ ಕನ್ನಡ ಬೆಳೆಯಬಹುದು ಎಂಬ ನಿಷ್ಠೆಯೊಂದಿಗೆ ವಿವೇಕ್ ರೈ ಅವರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡ ವಿದ್ವಾಂಸರಾಗಿದ್ದಾರೆ ಎಂದರು.
ಸಾಹಿತ್ಯ, ಸಂಸ್ಕೃತಿಯನ್ನು ಜೋಡಿಸುವ ಪ್ರತಿಭಾನ್ವಿತ ಕವಿ ಪಂಪ. ಅವರ ಸಾಹಿತ್ಯದ‌ ನಡಿಗೆಯನ್ನು ವಿವೇಕ್ ರೈ ಅವರ ಬರವಣಿಗೆಗಳಲ್ಲಿ ಕಾಣಲು ಸಾಧ್ಯ. ಟೀಕಿಸುವವರಿಗೆ ಕೆಲಸದ ಮೂಲಕವೇ ಉತ್ತರಕೊಡಬೇಕು ಎನ್ನುವ ರೈ ಅವರು ಕನ್ನಡದ ಶೈಕ್ಷಣಿಕ ವಿಸ್ತರಣೆ, ತುಳು ಸಾಹಿತ್ಯದ ಪುನರ್ ವ್ಯಾಖ್ಯಾನ, ಮೌಖಿಕ ಸಾಹಿತ್ಯದ ದಾಖಲೀಕರಣ ಮೊದಲಾದ ಮೌಲ್ಯಯುತ ಕೆಲಸದೊಂದಿಗೆ ಕನ್ನಡದ ವಿವೇಕವಾಗಿ ಮೂಡಿಬಂದಿದ್ದಾರೆ. ಅವರಿಗೆ ಅರ್ಹವಾಗಿಯೇ ಪಂಪ ಪ್ರಶಸ್ತಿ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗೌರವ ಪುರಸ್ಕಾರಗಳು ಲಭಿಸುವಂತಾಗಲಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ಅವರು,
ದ.ಕ.ಜಿಲ್ಲೆಯ ಸಾಹಿತ್ಯ , ಸಂಸ್ಕೃತಿಯ ಅಪಾರ ಜ್ಞಾನದೊಂದಿಗೆ ಮನಸ್ಸುಗಳನ್ನು ಜೋಡಿಸುವ ಕಾರ್ಯ ಮಾಡಿರುವ ಪ್ರೊ.ವಿವೇಕ್ ರೈ ಅವರು, ಮಂಗಳೂರು ಕ್ಯಾಂಪಸ್ ನಲ್ಲಿ ಹೊಸ ರೀತಿಯ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ವಿವೇಕ್ ರೈ ಕಟ್ಟಿಕೊಟ್ಟಿರುವ ಪರಂಪರೆಯನ್ನು ಮುನ್ನಡೆಸಲಿದ್ದೇವೆ ಎಂದರು.
ಅಭಿವಂದನ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ , ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ‌ ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಅಭಯ್ ಕುಮಾರ್, ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೌಡ, ಡಾ. ಶಾನಿ ಕೆ ಆರ್ ಹಾಗೂ ಪ್ರೊ.ವಿವೇಕ್ ರೈ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ‌ ಪ್ರೊ ಸೋಮಣ್ಣ ಹೊಂಗಳ್ಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ವಂದಿಸಿದರು. ಉಪನ್ಯಾಸಕ ಡಾ.ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

Exit mobile version