Site icon Ullalavani

ಸಹೋದರಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ರಿಕ್ಷಾ ಚಾಲಕನಿಗೆ ಗೂಗಲ್‌ ಪೇ ಮಾಡಿದ್ದ ಅಕ್ಕ

ಉಳ್ಳಾಲ : ರಿಕ್ಷಾ ಚಾಲಕ ಸೇರಿದಂತೆ ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ಪಶ್ಚಿಮ ಬಂಗಾಳ ಮೂಲದ 20ರ ಹರೆಯದ ಯುವತಿಯನ್ನು ಮುನ್ನೂರು ಬಂಗುಲೆ ಸಮೀಪ ಸಾಮೂಹಿಕ ಅತ್ಯಾಚಾರ ವೆಸಗಿದ ಪ್ರಕರಣಕ್ಕೆ ಸಂಬಂಧಿಸಿ , ಯುವತಿಯ ಸಹೋದರಿ ರಿಕ್ಷಾ ಚಾಲಕನಿಗೆ ರೂ.2,000 ಗೂಗಲ್‌ ಪೇ ಮಾಡಿ ಸುರಕ್ಷಿತವಾಗಿ ರೈಲು ಹತ್ತಿಸುವಂತೆ ಕೇಳಿಕೊಂಡಿದ್ದಳೆಂಬುದಾಗಿ ತನಿಖೆ ವೇಳೆ ತಿಳಿದುಬಂದಿದೆ. ಆದರೆ ಆರೋಪಿ ಅದನ್ನೇ ದುರ್ಬಳಕೆ ಮಾಡಿ ಪಿಶಾಚಿ ಕೃತ್ಯವೆಸಗಿದ್ದಾರೆ.
ಆರೋಪಿಗಳಾದ ರಿಕ್ಷಾ ಚಾಲಕ ಪ್ರಭುರಾಜ್, ಆತನ ಸ್ನೇಹಿತ ಡೆಲಿವರಿ ಬಾಯ್ ಮಣಿ ಮತ್ತು‌ ಇಲೆಕ್ಷ್ಟೀಷಿಯನ್‌ ಆಗಿರುವ ಮಿಥುನ್‌ ಕೃತ್ಯ ನಡೆಸಿದ 24 ಗಂಟೆಗಳೊಳಗೆ ಬಂಧಿಸಲಾಗಿತ್ತು. ಸಂತ್ರಸ್ತೆ ಯುವತಿ 3-4 ತಿಂಗಳುಗಳ ಹಿಂದೆ ಪ್ರಿಯತಮನ ಜೊತೆಗೆ ಊರುಬಿಟ್ಟು ಆತನ ಜೊತೆಗೆ ಕೇರಳ ಕಡೆಗೆ ಕೆಲಸಕ್ಕೆ ಬಂದಿದ್ದರು. ಎ.17 ರಂದು ಇಬ್ಬರ ನಡುವೆ ಜಗಳ ನಡೆದಿದ್ದು ಪ್ರಿಯತಮ ಜಗಳ ನಡೆಸಿ ಮೊಬೈಲನ್ನು ಒಡೆದು ಹಾಕಿ ಮನೆಯಿಂದ ಹೊರಹಾಕಿದ್ದಾನೆ. ಇದರಿಂದ ನೊಂದ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು. ಮಂಗಳೂರಿನಲ್ಲಿ ಇಳಿದಾಕೆ ಊರಿಗೆ ಹೋಗಲು ಹಣವಿಲ್ಲದೇ ಅಸಹಾಯಕಳಾಗಿ ಇದ್ದು, ರಿಕ್ಷಾ ಚಾಲಕ ಪ್ರಭುರಾಜ್‌ ಜೊತೆಗೆ ಅಲವತ್ತುಕೊಂಡಿದ್ದಳು. ಅದನ್ನೇ ದುರ್ಬಳಕೆ ನಡೆಸಿಕೊಂಡ ಕಿರಾತಕ ಆಕೆಯ ಮೊಬೈಲ್‌ ರಿಪೇರಿ ನಡೆಸಿದ ನಂತರ ಪಶ್ಚಿಮ ಬಂಗಾಳದಲ್ಲಿರುವ ಸಹೋದರಿಗೆ ಕರೆ ಮಾಡುವಂತೆ ಮಾಡಿದ್ದನು. ಅಲ್ಲಿ ಸಹೋದರಿ ಊರಿಗೆ ಬರುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಂತೆ ಸಹೋದರಿ ರಿಕ್ಷಾ ಚಾಲಕನಲ್ಲಿ ಸಹಾಯ ಯಾಚಿಸಿ ರೂ.2000 ಗೂಗಲ್‌ ಪೇ ಮಾಡಿ ರೈಲು ಹತ್ತಿಸುವಂತೆ ಭಿನ್ನವಿಸಿಕೊಂಡಿದ್ದಾಳೆ. ಆದರೆ ಪ್ರಭುರಾಜ್‌ ನಡೆಸಿದ ಕೃತ್ಯವೇ ಬೇರೆಯಾಗಿತ್ತು. ಕನಿಷ್ಠ ಮಾನವೀಯತೆ ತೋರದೇ ಯುವತಿಯನ್ನು ದುರ್ಬಳಕೆ ಮಾಡುವ ಆಲೋಚನೆಯಿಂದ ಪಶ್ಚಿಮ ಬಂಗಾಳದ ರೈಲು ತಡವಾಗಿದೆ ಎಂದು ನಂಬಿಸಿ 5-6 ಗಂಟೆಗಳ ಕಾಲ ರಿಕ್ಷಾದಲ್ಲೇ ತಿರುಗಿಸಿ ಮತ್ತು ಬರುವ ಪಾನೀಯ ಕುಡಿಸಿ ತಡರಾತ್ರಿ ವೇಳೆ ಮೂವರು ಸೇರಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಆರೋಪಿ ಮಿಥುನ್‌ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕುರಿತು ಪ್ರಕರಣವೊಂದಿದ್ದರೆ, ಉಳ್ಳಾಲ ಠಾಣೆಗೆ ಹೆಣ್ಣು ಸಂಬಂಧಿತ ಪ್ರಕರಣಕ್ಕೆ ಹಲವು ಬಾರಿ ಮೆಟ್ಟಿಲು ಹತ್ತಿದ್ದ. ಡೆಲಿವರಿ ಬಾಯ್‌ ಮಣಿ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಕಳವು ಪ್ರಕರಣ ಇದೆ.

Exit mobile version