Site icon Ullalavani

ನಿಟ್ಟೆ ಸಾರ್ವಜನಿಕ ಆರೋಗ್ಯ ವಿದ್ಯಾರ್ಥಿಗಳು ಸ್ವೀಡನ್‌ನ ಸಂಪೂರ್ಣ ಅನುದಾನಿತ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆ

ಉಳ್ಳಾಲ: ನಿಟ್ಟೆ ಅಲೈಡ್ ಹೆಲ್ತ್ ಸೈನ್ಸಸ್ ಇನ್‌ಸ್ಟಿಟ್ಯೂಟ್‌ನ ಸಾರ್ವಜನಿಕ ಆರೋಗ್ಯ ವಿಭಾಗದ ನಾಲ್ಕು ವಿದ್ಯಾರ್ಥಿಗಳು ಸ್ವೀಡನ್‌ನ ಗೋತೆನ್‌ಬರ್ಗ್ ವಿಶ್ವವಿದ್ಯಾಲಯದ ಸಾಹ್ಲ್‌ ಗ್ರೆನ್ಸ್ಕಾ ಅಕಾಡೆಮಿಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಶೈಕ್ಷಣಿಕ ಸಾಧನೆ, ಪಾಠ್ಯೇತರ ಚಟುವಟಿಕೆಗಳು ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ತೋರಿದ ಆಸಕ್ತಿಯನ್ನು ಪರಿಗಣಿಸಿ ಈ ವಿದ್ಯಾರ್ಥಿಗಳಿಗೆ ಈ ಅವಕಾಶ ಲಭಿಸಿದೆ.
ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಡಾ. ಮಾಲ್ವಿಕಾ ನಾಯಕ್ ಮತ್ತು ಡಾ. ಅನುಲೇಕ ಎನ್. ಅವರು ಆರೋಗ್ಯ ಅರ್ಥಶಾಸ್ತ್ರ (Health Economics) ಅಧ್ಯಯನ ಮಾಡಲಿದ್ದಾರೆ. ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಡಾ. ನಿಕಿತಾ ನಿಕೋಬಾ ಮತ್ತು ಮಿಸ್ ಬಿಫಿನಾ ಎಸ್ತರ್ ವಿಲ್ಸನ್ ಅವರು ಸಾಮಾಜಿಕ ಮಹಾಮಾರಿ ವಿಜ್ಞಾನ (Social Epidemiology) ಕ್ಷೇತ್ರದಲ್ಲಿ ಅಧ್ಯಯನ ನಡೆಸಲಿದ್ದಾರೆ. ವಿದ್ಯಾರ್ಥಿಗಳು ಮಾರ್ಚ್ 20, 2025 ರಂದು ಸ್ವೀಡನ್‌ಗೆ ಪ್ರಯಾಣಿಸುತ್ತಿದ್ದು, ಮಾರ್ಚ್ 25 ರಿಂದ ಜೂನ್ 12, 2025ವರೆಗೆ ಕೋರ್ಸ್ ಅನ್ನು ಅನುಸರಿಸಲಿದ್ದಾರೆ.
ವಿದ್ಯಾರ್ಥಿಗಳ ಸಂಪೂರ್ಣ ಖರ್ಚು ಇರಾಸ್ಮಸ್+ ಶಿಷ್ಯವೃತ್ತಿ (Erasmus+ Scholarship) ಮೂಲಕ ಭರಿಸಲಾಗುತ್ತದೆ. ಇದರಲ್ಲಿ ಪ್ರಯಾಣ, ವಾಸ್ತವ್ಯ, ವಿಮೆ, ದಿನನಿತ್ಯದ ಖರ್ಚುಗಳು ಮತ್ತು ಟ್ಯೂಷನ್ ಶುಲ್ಕಗಳನ್ನು ಒಳಗೊಂಡಿರುತ್ತದೆ. ಶಿಷ್ಯವೃತ್ತಿ ವಿವರಗಳು ಹೀಗಿವೆ:
ಟ್ಯೂಷನ್ ಶುಲ್ಕಕ್ಕೆ ರೂ. 3,750 (ಸುಮಾರು ರೂ. 3,37,500)
ಪ್ರಯಾಣ ವೆಚ್ಚಕ್ಕೆ ರೂ.1,500 (ಸುಮಾರು ರೂ.1,35,000)
ಆಹಾರ ಮತ್ತು ವಸತಿ ವೆಚ್ಚಕ್ಕೆ ರೂ.700 (ಸುಮಾರು ರೂ.63,000)


ಒಟ್ಟಾರೆಯಾಗಿ ಪ್ರತಿ ವಿದ್ಯಾರ್ಥಿಗೆ ಸುಮಾರು ರೂ.5,35,500 ಅನುದಾನ ಲಭ್ಯವಿದೆ.
ನಿಟ್ಟೆ ವಿಶ್ವವಿದ್ಯಾಲಯ ಮತ್ತು ಗೋತೆನ್‌ಬರ್ಗ್ ವಿಶ್ವವಿದ್ಯಾಲಯದ ನಡುವೆ ವಿದ್ಯಾರ್ಥಿ ವಿನಿಮಯ ಒಪ್ಪಂದವಿದೆ. ಪ್ರತಿ ವರ್ಷ ವಸಂತಕಾಲದಲ್ಲಿ ನಿಟ್ಟೆ ವಿದ್ಯಾರ್ಥಿಗಳು ಸ್ವೀಡನ್‌ಗೆ ತೆರಳುತ್ತಾರೆ, ಮತ್ತು ಶೀತಕಾಲದಲ್ಲಿ ಗೋತೆನ್‌ಬರ್ಗ್ನ ಜಾಗತಿಕ ಆರೋಗ್ಯ ವಿದ್ಯಾರ್ಥಿಗಳು ಮಂಗಳೂರಿಗೆ ಬಂದು 10 ವಾರಗಳ ಕಾಲ ಶೈಕ್ಷಣಿಕ ಅನುಭವ ಪಡೆಯುತ್ತಾರೆ. ಈ ವಿನಿಮಯ ಕಾರ್ಯಕ್ರಮವನ್ನು ನಿಟ್ಟೆ ಯುನಿವರ್ಸಿಟಿ ಪ್ರಾಜೆಕ್ಟ್ಸ್& NuTEC ನಿರ್ದೇಶಕಿ ಪ್ರೊ. (ಡಾ.) ಇಂದ್ರಾಣಿ ಕರುನಾಸಾಗರ್ ಮತ್ತು ಸೀನಿಯರ್ ಡೈರೆಕ್ಟರ್, ಅಂತರಾಷ್ಟ್ರೀಯ ಸಂಬಂಧಗಳು ಪ್ರೊ. (ಡಾ.) ಇಡ್ಡ್ಯ ಕರುಣಾಸಾಗರ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ.
ನಿಟ್ಟೆ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಪ್ರೊ. (ಡಾ.) ಎಂ. ಶಾಂತರಾಮ ಶೆಟ್ಟಿ, ಉಪಕುಲಪತಿ ಪ್ರೊ. (ಡಾ.) ಎಂ. ಎಸ್. ಮೂಡಿತಾಯ, ರಿಜಿಸ್ಟ್ರಾರ್ ಪ್ರೊ. (ಡಾ.) ಹರ್ಷ ಹಲಹಳ್ಳಿ, ಡೀನ್ ಪ್ರೊ. (ಡಾ.) ಜಯಪ್ರಕಾಶ ಶೆಟ್ಟಿ ಕೆ. ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಮ್ಯಾಕ್‌ವಿನ್ ಡಿ’ಮೆಲ್ಲೋ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯವು ನಿಟ್ಟೆ ಪಬ್ಲಿಕ್ ಹೆಲ್ತ್ ವಿಂಟರ್ ಸ್ಕೂಲ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಅಂತರಾಷ್ಟ್ರೀಯ‌ ವಿದ್ಯಾರ್ಥಿಗಳು ಭಾರತದಲ್ಲಿ ಆರೋಗ್ಯ ಸೇವಾ ವ್ಯವಸ್ಥೆ ಕುರಿತು ಅಭ್ಯಾಸ ನಡೆಸಲು ಬರುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರು ಆಸ್ಪತ್ರೆಗಳು, ಸರ್ಕಾರಿ ಆರೋಗ್ಯ ಯೋಜನೆಗಳು, ಮತ್ತು ಪ್ರಾಥಮಿಕ ಮಾಹಿತಿ ಸಂಗ್ರಹಣೆಯ ಮೂಲಕ ಪ್ರಾಯೋಗಿಕ ಅನುಭವ ಪಡೆಯುತ್ತಾರೆ. ಅಲ್ಲದೆ, ಶೈಕ್ಷಣಿಕ ಕಾರ್ಯಾಗಾರಗಳು, ಕ್ಷೇತ್ರ ಪ್ರವಾಸಗಳು, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿಗಳು ಮತ್ತು ಕರಾವಳಿ ಪರಂಪರೆಗಳನ್ನು ಅನುಭವಿಸಲು ಅವಕಾಶ ಸಿಗುತ್ತದೆ.

Exit mobile version