Site icon Ullalavani

ಎರಡು ರೂಪಾಯಿ ವಿವಾದ:ಖಾಸಗಿ ಬಸ್ ನಿರ್ವಾಹಕಗೆ ತಂಡದಿಂದ ಹಲ್ಲೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಎರಡು ರೂಪಾಯಿ ಚಿಲ್ಲರೆ ವಿಚಾರಕ್ಕಾಗಿ ಪ್ರಯಾಣಿಕನೋರ್ವ ತಂಡವನ್ನು ಸೇರಿಸಿ ಉಳ್ಳಾಲದಿಂದ ಸ್ಟೇಟ್ ಬ್ಯಾಂಕಿಗೆ ತೆರಳುವ ಖಾಸಗಿ ಬಸ್ಸಿನ ನಿರ್ವಾಹಕನಿಗೆ ಕಲ್ಲಿನಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಕೋಡಿ ಸೀರೂಟ್ ಎಂಬಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

44ಸಿ ಸುರಭಿ ಬಸ್ಸಿನ ನಿರ್ವಾಹಕ ಬಂಡಿಕೊಟ್ಯ ನಿವಾಸಿ ಕಿಶನ್ (22) ಹಲ್ಲೆಗೊಳಗಾದವರು. ಕೋಡಿ ನಿವಾಸಿ ಮಹಮ್ಮದ್ ಮತ್ತು ತಂಡ ಕೃತ್ಯ ಎಸಗಿರುವುದಾಗಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಮುಂಜಾನೆ ಸ್ಟೇಟ್ ಬ್ಯಾಂಕಿನತ್ತ ಹೋಗುತ್ತಿದ್ದ ಬಸ್ಸಿಗೆ ಕೋಡಿ ಸಮೀಪ ಮಹಮ್ಮದ್ ಬಸ್ಸನ್ನೇರಿದ್ದ. ಸ್ಟೇಟ್ ಬ್ಯಾಂಕಿಗೆ ರೂ.12 ಟಿಕೇಟ್ ದರ ಇರುವುದರಿಂದ ನಿರ್ವಾಹಕ ಎರಡು ರೂ. ಚಿಲ್ಲರೆ ಕೊಟ್ಟು ಸಹಕರಿಸುವಂತೆ ಹೇಳಿದ್ದರು. ಇದನ್ನೇ ವಿವಾದವನ್ನಾಗಿಸಿದ ಮಹಮ್ಮದ್ ನಿರ್ವಾಹಕನ ಜತೆಗೆ ಮಾತಿಗಿಳಿದು ಬಳಿಕ ಚಾಲಕ ಸಾಗರ್ ಎಂಬವರು ಮಧ್ಯಪ್ರವೇಶಿಸಿ ಮಹಮ್ಮದ್‍ಗೆ ವಾಪಸ್ಸು ರೂ.10 ನ್ನು ನೀಡಿ ಬಸ್ಸಿನಿಂದ ಕೆಳಗೆ ಇಳಿಸಿದ್ದರು. ಘಟನೆ ನಂತರ ಮತ್ತೆ ಉಳ್ಳಾಲದತ್ತ ಹೊರಟಿದ್ದ ಬಸ್ಸನ್ನು ಕೋಡಿ ಸಮೀಪ ತಂಡವೊಂದು ಅಡ್ಡಗಟ್ಟಿ ಕಿಶನ್‍ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ. ಘಟನೆಯನ್ನು ಖಂಡಿಸಿ ಈ ಮೂಲಕ ಸಂಚರಿಸುವ ಖಾಸಗಿ ಬಸ್ ಸಿಬ್ಬಂದಿ ಬಂದ್ ನಡೆಸುವ ತೀರ್ಮಾನಕ್ಕೆ ಬಂದರೂ ಪೊಲೀಸರ ಮಧ್ಯಪ್ರವೇಶದಿಂದ ಆರೋಪಿಗಳ ಬಂಧನದ ಭರವಸೆಯಿಂದ ಅದನ್ನು ಕೈಬಿಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದಾರೆ.

Exit mobile version