Site icon Ullalavani

ಪಿಲಾರಿನಲ್ಲಿ ಜಾನಪದ ಸಿರಿಪರಿಚಯ, ಗ್ರಾಮೀಣ ಆಟಕೂಟದೊಂದಿಗೆ ನಡೆದ “ತುಳು ಪರ್ಬ”

ಉಳ್ಳಾಲ : ಫೆ-12 ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಅತ್ಯಂತ ಸುಂದರವಾದ ಭಾಷೆಯಾಗಿದೆ.ತುಳು ಭಾಷೆಯ ಲಿಪಿಯೂ ಕೂಡ ದೊರಕಿದೆ. ಸರಕಾರವೂ ಕೂಡ ಸಾಹಿತ್ಯ ಅಕಾಡೆಮಿಯ ಮೂಲಕ ತುಳು ಭಾಷೆಗೆ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಮಂಗಳೂರು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ರಾಧಾಕೃಷ್ಣ ಕೆ. ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಪಿಲಾರು ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಪಿಲಾರುವಿನ ಪಂಜಂದಾಯ ದೈವದ ಸನ್ನಿಧಿಯ ಮೈದಾನದಲ್ಲಿ ಭಾನುವಾರದಂದು ನಡೆದ ‘ತುಳು ಪರ್ಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನ ಮರೆತ ಪರಿಣಾಮವಾಗಿ ಪೃಕೃತಿಯು ‌ವಿಕೃತಿಯಾಗಿ ಪರಿಣಮಿಸುತ್ತಿದೆ. ನಮ್ಮ ಮೂಲ ಸಂಸ್ಕೃತಿ ,ಸಂಸ್ಕಾರಗಳಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ಆಟಗಳು ಇವತ್ತು ಸಂಪೂರ್ಣ ಮರೆಯಾಗಿವೆ. ನಮ್ಮ ಸಾಂಪ್ರದಾಯಿಕ ಆಟಗಳನ್ನ ಇಂದಿನ‌ ಮಕ್ಕಳಿಗೆ ಪರಿಚಯಿಸಬೇಕಿದೆ. ನಾವೆಲ್ಲರೂ ಸಾಧ್ಯವಾದಷ್ಟು ತುಳುವಲ್ಲೇ ಮಾತನಾಡಿ ಮಾತೃ ಭಾಷೆಯನ್ನ ಪ್ರೋತ್ಸಾಹಿಸಿ ಮುಂದಿನ‌ ಪೀಳಿಗೆಗೂ ಪರಿಚಯಿಸಬೇಕು. ತುಳು ಭಾಷೆ, ಜನಪದ ಸಂಸ್ಕೃತಿಯ ಬಗ್ಗೆ ಮತ್ತಷ್ಟು ಅನ್ವೇಷಣೆಗಳು ನಡೆದು ಕಲೆ, ಸಂಸ್ಕೃತಿಗಳನ್ನ ಉಳಿಸಿ ಬೆಳೆಸಬೇಕೆಂದರು.

ಹಿರಿಯ ಪಾರ್ದನಗಾರ್ತಿ ಕುತ್ತಾರ್ ತಿಮ್ಮಕ್ಕ ಅವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ವೇಳೆ ತಿಮ್ಮಕ್ಕ ಅವರು ಪಾಡ್ದನ ಪರಿಚಯ ಮಾಡಿಕೊಟ್ಟರು. ರಮೇಶ್ ಮಂಚಕಲ್ ಅವರು ತುಳುನಾಡಿನ ಸಾಂಪ್ರದಾಯಿಕ ಡೋಲು ವಾದನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಬಳಿಕ ಸ್ಥಳೀಯರಿಗಾಗಿ ಗ್ರಾಮೀಣ ಆಟೋಟಗಳು ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರನಾಥ ಗಟ್ಟಿ ಕಾಪಿಕಾಡ್ ಅವರು ಅಧ್ಯಕ್ಷತೆ ವಹಿಸಿದ್ದರು.ಅಕಾಡೆಮಿ‌ ಸದಸ್ಯರಾದ ಬಾಬು ಪಾಂಗಳ, ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಪುರಸಭಾ ಸದಸ್ಯ ಪುರುಷೋತ್ತಮ ಶೆಟ್ಟಿ ಪಿಲಾರ್,ಚೆಂಬುಗುಡ್ಡೆ ಜುಮ್ಮಾ ಮಸೀದಿಯ ಅಧ್ಯಕ್ಷ ಇಮ್ತಿಯಾಜ್ ಪಿಲಾರ್, ನಿವೃತ್ತ ಆಹಾರ ನಿರೀಕ್ಷಕ ಚಂದ್ರಶೇಖರ ಗಟ್ಟಿ ಮಜಲ್, ಉದ್ಯಮಿ ಚಂದ್ರಹಾಸ್, ಪಿಲಾರು ಯುವಕ ಮಂಡಲದ ಅಧ್ಯಕ್ಷ ಯಶವಂತ ಶೆಟ್ಟಿ, ಗೌರವಾಧ್ಯಕ್ಷ ಗಜಾನಂದ ಗಟ್ಟಿ,ಕೋಶಾಧಿಕಾರಿ ನವೀನ್ ಸಾಲಿಯಾನ್, ಪ್ರ.ಕಾರ್ಯದರ್ಶಿ ಧನರಾಜ್,ಸದಸ್ಯರಾದ ಶ್ರೀಧರ ಆಳ್ವ ಪಿಲಾರು, ಜಿತೇಶ್ ಗಟ್ಟಿ ಪಿಲಾರು,ನವೀನ್ ಗಟ್ಟಿ ಪಿಲಾರು, ಅರುಣ್ ಗಟ್ಟಿ ಮಜಲ್ ಮೊದಲಾದವರು ಉಪಸ್ಥಿತರಿದ್ದರು.
ರೇಡಿಯೋ ಸಾರಂಗ್ ನ ಎಡ್ವರ್ಡ್.ಡಿ.ಸೋಜ ಸ್ವಾಗತಿಸಿ,ನಿರೂಪಿಸಿದರು.ರಜನೀಶ್ ವಂದಿಸಿದರು.

ತುಳುನಾಡಿನದ್ದೇ ಆಗಿರುವ ನೂರಕ್ಕೂ ಹೆಚ್ಚು ವಾದನಗಳಿವೆ. ಹಿರಿಯರಿಗೆ ವಿದ್ಯೆ ಇಲ್ಲದಿದ್ದರೂ ಮಸ್ತಕದಲ್ಲೇ ತುಂಬಿರುವ ಪಾರ್ದನವನ್ನ ಗಂಟೆ ಗಟ್ಟಲೆ ನಿರರ್ಗಳವಾಗಿ ಹೇಳುತ್ತಿದ್ದರು. ಇದು ತುಳುನಾಡಿನ‌ ಜ್ನಾನ ಭಂಡಾರದ ಪರಂಪರೆಯ ಮಹತ್ವವಾಗಿದೆ.ತುಳುನಾಡಿನ ಮೂಲ ನಿವಾಸಿಗಳಾದ ಕೊರಗರ ಜನಸಂಖ್ಯೆ ಕೇವಲ ಹದಿನೆಂಟು ಸಾವಿರದಷ್ಟಿದ್ದು,ಅವರದ್ದೇ ಸ್ವತಂತ್ರ ಮೂಲ ಭಾಷೆಯನ್ನ ಮಾತನಾಡುವವರ ಸಂಖ್ಯೆ ಎರಡೂವರೆ ಸಾವಿರದಷ್ಟಿದೆ. ಅದಕ್ಕಾಗಿ ನಾವು ಕೂಡ ತುಳು ಭಾಷೆಯನ್ನ ಪೋಷಿಸುವ ಕೆಲಸ ಮಾಡಬೇಕಿದೆ.
***ತಾರನಾಥ ಗಟ್ಟಿ ಕಾಪಿಕಾಡು. ಅಧ್ಯಕ್ಷರು ತುಳು ಸಾಹಿತ್ಯ ಅಕಾಡೆಮಿ.

Exit mobile version