ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲಂಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್. ಕುಂಪಲರವರ ನಿರ್ಮಾಣದಲ್ಲಿ ತಯಾರಾದ `ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಕರಾವಳಿಯಾದ್ಯಂತ ತೆರೆಕಂಡಿದ್ದು, 3 ನೇ ವಾರವೂ ಅದ್ಧೂರಿ ಪ್ರದರ್ಶನ ನೀಡುತಿದ್ದು, ಎಲ್ಲಾ ಥಿಯೇಟರುಗಳಲ್ಲಿ ಪ್ರೇಕ್ಷಕರು ಹೌಸ್ ಫುಲ್ ಆಗಿರುವುದರಿಂದಾಗಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಒಬ್ಬ ಯುವಕ ತನ್ನದೇ ಆದ ಮನೆ ಕಟ್ಟಬೇಕು, ಕುಟುಂಬದವರೊಂದಿಗೆ ಸಂತೋಷವಾಗಿ ಬದುಕಬೇಕು, ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಖ ಜೀವನ ನಡೆಸಬೇಕು. ಇವು ಸಾಮಾನ್ಯವಾಗಿ ಎಲ್ಲಾ ಯುವಕರ ಕನಸುಗಳು. ಆದರೆ ಈ ಕನಸುಗಳನ್ನು ಈಡೇರಿಸಲು ಅವರು ಎದುರಿಸಬೇಕಾದ ಸವಾಲುಗಳು ಅಪಾರ. ವಿಶೇಷವಾಗಿ, ಮಧ್ಯಮ ವರ್ಗದ ಕುಟುಂಬದ ಯುವಕರಿಗೆ ಇದು ಸುಲಭವಾದ ದಾರಿ ಅಲ್ಲ.
ಈ ಅದ್ಧೂರಿ ಕನಸುಗಳ ನಡುವೆ ಎದುರಾಗುವ ಸವಾಲುಗಳು, ಹಾಸ್ಯಭರಿತ ಸನ್ನಿವೇಶಗಳ ಮೂಲಕ ಹೇಳಲು “ಮಿಡಲ್ ಕ್ಲಾಸ್ ಫ್ಯಾಮಿಲಿ” ಸಿನಿಮಾ ಅಸ್ತಿತ್ವಕ್ಕೆ ಬಂದಿದೆ. ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಮೂಲಕ ತುಳು ಪ್ರೇಕ್ಷಕರ ಮನಗೆದ್ದ ನಿರ್ದೇಶಕ ರಾಹುಲ್ ಅಮೀನ್, ಮತ್ತೊಂದು ಭರ್ಜರಿ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಹಾಸ್ಯ ಹಾಗೂ ಜೀವನದ ನಿಜ ಕಥನ : ಬಿಲ್ಡಪ್ ಇಲ್ಲದ ನೇರ ಕಥಾ ಹಂದರದಿಂದ ಆರಂಭವಾಗುವ ಈ ಸಿನಿಮಾದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ನಗುವಿನ ಸಿಂಚನ ಹರಿಯುತ್ತದೆ. ಹಾಸ್ಯ ನಟ ಅರವಿಂದ್ ಬೋಳಾರ್ ತಮ್ಮ ವಿಶಿಷ್ಠ ಅಭಿನಯ ಹಾಗೂ ವಿಭಿನ್ನ ಗೆಟಪ್‌ಗಳ ಮೂಲಕ ಚಿತ್ರಕ್ಕೆ ಇನ್ನಷ್ಟು ರಸಭರಿತ ಸನ್ನಿವೇಶ ನೀಡಿದ್ದಾರೆ.
ನಟ ವಿನೀತ್ ಕುಮಾರ್ ಈ ಚಿತ್ರದ ಕೇಂದ್ರಬಿಂದು. ಅವರು ಕಥೆ ಬರೆದಿರುವುದರ ಜೊತೆಗೆ ನಾಯಕನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅವರ ಅಭಿನಯ, ನೃತ್ಯ ಹಾಗೂ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಮೆಚ್ಚಿಸುವಂತಿವೆ. ನಾಯಕಿಯಾಗಿ ಸಮತಾ ಅಮೀನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಟರ ಮೆರುಗು ಮತ್ತು ತಾಂತ್ರಿಕವಾಗಿ ಶಕ್ತವಾದ ಚಿತ್ರ
ನಿರ್ದೇಶಕ ರಾಹುಲ್ ಅಮೀನ್ ಸ್ವತಃ ಸಿನಿಮಾದಲ್ಲಿ ಪಾತ್ರವಹಿಸಿರುವುದು ಒಂದು ವಿಶೇಷ. ಅವರ ಪರದೆಯ ಮೇಲಿನ ಉಸ್ತುವಾರಿ ಹಾಗೂ ಉಸ್ತುವಾರಿ ಎರಡೂ ಗಮನಾರ್ಹ. ಭೋಜರಾಜ ವಾಮಂಜೂರು, ನವೀನ್ ಡಿ ಪಡೀಲ್, ಉಮೇಶ್ ಮಿಜಾರ್, ರವಿ ರಾಮಕುಂಜ, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಅವರ ಅಭಿನಯ ಪ್ರೇಕ್ಷಕರನ್ನು ಮರುಳುಗೊಳಿಸುತ್ತದೆ.
ಪ್ರಸನ್ನ ಶೆಟ್ಟಿ ಅವರ ಸಂಭಾಷಣೆಗಳು, ಸೃಜನ್ ಕುಮಾರ್ ತೋನ್ಸೆ ಅವರ ಹಿನ್ನೆಲೆ ಸಂಗೀತ ಕೂಡಾ ಸಿನಿಮಾದ ಆಕರ್ಷಣೆಯಾಗಿವೆ.
ಸಂಪೂರ್ಣ ಮನರಂಜನೆಯ ಪ್ಯಾಕೇಜ್
ಕಾಮಿಡಿ ಹಾಗೂ ಬದುಕಿನ ನಿಜ ಚಿತ್ರಣದೊಂದಿಗೆ, “ಮಿಡಲ್ ಕ್ಲಾಸ್ ಫ್ಯಾಮಿಲಿ” ಚಿತ್ರವು ಪ್ರೇಕ್ಷಕರಿಗೆ ಸಂತಸ ನೀಡುವಂತಾಗಿದೆ. ಕಮರ್ಶಿಯಲ್ ತುಳು ಸಿನಿಮಾ ಅಭಿಮಾನಿಗಳಿಗೆ ಇದು ಒಮ್ಮೆ ನೋಡಲೇಬೇಕಾದ ಮನರಂಜನೆಯ ಹೊಳೆಯಾಗಿದೆ!
ತುಳುನಾಡಿನ ಜನತೆಯ ಮನಗೆದ್ದ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಜಿಲ್ಲೆಯಾದ್ಯಂತ ಥಿಯೇಟರ್ ಗಳು ಹೌಸ್ ಫುಲ್
