ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಸೈಕಲ್‍ನಿಂದ ಬಿದ್ದು ಮೂರು ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿದ್ದ ಮುನ್ನೂರು ಸುಭಾಷನಗರದ ಜಯಂತಿ ಅವರ ಪುತ್ರ 18ರ ಹರೆಯದ ಪುನೀತ್‍ನನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಕಾಳಜಿಯಿಂದ ಇಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
15ರ ಹರೆಯದಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿದ್ದ ಪುನೀತ್ ತನ್ನ ಸಹೋದರನ ಜತೆಗೆ ಸೈಕಲ್ ಸವಾರಿ ನಡೆಸುತ್ತಿದ್ದ ಸಂದರ್ಭ ಚರಂಡಿಗೆ ಉರುಳಿಬಿದ್ದಿದ್ದರು. ಇದರಲ್ಲಿ ಪುನೀತ್ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ ಜೀವಚ್ಛವವಾಗಿ ಹಾಸಿಗೆ ಹಿಡಿದಿದ್ದಾನೆ. ಮೂರು ವರ್ಷಗಳಿಂದ ಸತತ ಹಾಸಿಗೆಯಲ್ಲೇ ಮಲಗಿದ ಪುನೀತ್ ಗೆ ಪೈಪಿನ ಮೂಲಕ ಅನ್ನಾಹಾರ ನೀಡಲಾಗುತಿತ್ತು.
ಈ ನಿಟ್ಟಿನಲ್ಲಿ ಮಾಧ್ಯಮಗಳು ಪುನೀತ್ ದುರಂತ ಕತೆಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಹಲವು ಸಂಘಸಂಸ್ಥೆಗಳು ಆರ್ಥಿಕವಾಗಿ ಕುಟುಂಬಕ್ಕೆ ಸಹಾಯ ಮಾಡಿತ್ತು. ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ವರದಿಗೆ ಸ್ಪಂಧಿಸಿ ಜಯಂತಿ ಅವರ ಮನೆಗೆ ಭೇಟಿ ನೀಡಿ ಪುನೀತ್ ಆರೋಗ್ಯ ಸ್ಥಿತಿಯನ್ನು ಕಂಡು ನಿಮ್ಹಾನ್ಸ್ ವೈದ್ಯರ ಜತೆಗೆ ಮಾತುಕತೆ ನಡೆಸಿ ಅಲ್ಲೇ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಇಂದು 108 ಆರೋಗ್ಯ ರಕ್ಷಾ ಕವಚ ಮೂಲಕ ಪುನೀತ್‍ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.