ಉಳ್ಳಾಲ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಸಂಘಟನೆಯಿಂದ ಬಲಯುತರಾಗಿರಿ ಅನ್ನುವ ವಿಚಾರ ಕೊಲ್ಯ ಸಂಘದ ಸದಸ್ಯರಿಂದ ನಿರಂತರವಾಗಿ ಪಾಲನೆಯಾಗಿದೆ. ಈ ಮೂಲಕ ಸಂದೇಶವನ್ನು ಮನೆ ಮನೆಗಳಿಗೆ ಮುಟ್ಟಿಸುವ ಕಾರ್ಯ ಸಮಾಜದ ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಕಾರ್ಯ ಕೊಲ್ಯ ಬಿಲ್ಲವ ಸೇವಾ ಸಮಾಜದಿಂದ ಆಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.
ಸೋಮೇಶ್ವರ ಕೊಲ್ಯದ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಹಾಗೂ ಬಿಲ್ಲವ ಸೇವಾ ಸಮಾಜ ಆಶ್ರಯದಲ್ಲಿ 47ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿರಿಯ ಬಾಬು ಪಂಡಿತ್ ಅವರ ಅಧ್ಯಕ್ಷತೆಯೊಂದಿಗೆ ಆರಂಭವಾದ ಸಂಘಟನೆ ಡಾ. ರಾಮಾನುಜಂ, ರಮಾನಾಥ ಕೋಟೆಕಾರು ಅವರಂತಹ ಬಲಾಢ್ಯರನ್ನು ಹೊಂದುವ ಮುಖೇನ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ದೊಡ್ಡ ಜಾಗವನ್ನು ಖರೀದಿಸಿರುವುದು ದೊಡ್ಡ ವಿಷಯ. ಬಿಲ್ಲವ ಸಭಾಭವನ ಆದಷ್ಟು ಬೇಗ ನಾರಾಯಣ ಗುರುಗಳು, ಪರಿವಾರ ದೈವಗಳ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ಅನುಗ್ರಹದಲ್ಲಿ ನೆರವೇರಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪಿಕಾಡು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಟ್ರಸ್ಟೀ ದಿನೇಶ್ ಅತ್ತಾವರ ಮಾತನಾಡಿ, ಬಿಲ್ಲವ ಸಭಾಭವನ ಎಲ್ಲರ ಸಹಕಾರದೊಂದಿಗೆ ಶೀಘ್ರವೇ ನಿರ್ಮಾಣಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಕ್ತಿನಗರ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಕೇಶವ ಪೂಜಾರಿ , ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಐ ಬಗಂಬಿಲ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ದೇಹದಾರ್ಢ್ಯ ಪಟು ಭಾಸ್ಕರ್ ತೊಕ್ಕೊಟ್ಟು, ಮರೋಳಿ ಸರ‍್ಯನಾರಾಯಣ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ಮಹೇಶ್ ಪ್ರಸಾದ್, ತೊಕ್ಕೊಟ್ಟು ವಕೀಲರು ಮನೋಹರ, ಗೆಜ್ಜೆಗಿರಿ ಕ್ಷೇತ್ರದ ಟ್ರಸ್ಟೀ ಚಂದ್ರಶೇಖರ್ ಉಚ್ಚಿಲ್, ಉರ್ವ ಅಶೋಕನಗರದ ಬಿಲ್ಲವ ಸಂಘದ ಅಧ್ಯಕ್ಷ ಬಿ.ಹರಿಪ್ರಸಾದ್, ಉದ್ಯಮಿಗಳಾದ ಲೋಕೇಶ್ ಸುವರ್ಣ, ಗಣೇಶ್ ಕೊಲ್ಯ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ನಾರಾಯಣ ಗುರು ಮಹಿಳಾ ಸಂಘದ ಅಧ್ಯಕ್ಷೆ ರೇವತಿ ವಿಶ್ವನಾಥ್ , ಯುವವಾಹಿನಿ ಅಧ್ಯಕ್ಷೆ ಸುಧಾ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಕೊಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಹರೀಶ್ ಮುಂಡೋಳಿ ಸ್ವಾಗತಿಸಿದರು. ಟ್ರಸ್ಟ್ ಪ್ರಧಾನ ಕಾರ‍್ಯದರ್ಶಿ ಈಶ್ವರ ಸುವರ್ಣ ಕನೀರುತೋಟ ವಂದಿಸಿದರು. ಕುಸುಮಾಕರ್ ಕುಂಪಲ ಹಾಗೂ ಲತೀಶ್ ಸಂಕೊಳಿಗೆ ನಿರೂಪಿಸಿದರು.
ಯತೀಶ್ ಕುಮಾರ್ ವೆಂಕುಹಿತ್ಲು ಹಾಗೂ ಕಸ್ತೂರಿ ವೇಣುಗೋಪಾಲ ವಾರ್ಷಿಕ ವರದಿ ವಾಚಿಸಿದರು. ನಿತಿನ್ ಕರ್ಕೇರ ಮಾಡೂರು ಪ್ರಶಸ್ತಿ ವಿಜೇತರ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ದೈಯಿ ಬೈದ್ಯೆತಿ ಕ್ಷೇತ್ರದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
`ಸಮಾಜದ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆಗೊಳ್ಳಲಿ’ ಬಿಲ್ಲವ ಸಮಾಜಕ್ಕೆ ವೈದ್ಯ ವಿಜ್ಞಾನ ಕಾಲೇಜಾಗಲಿ, ಉನ್ನತ ಮಟ್ಟದ ತಾಂತ್ರಿಕ ಕಾಲೇಜಾಗಲಿ ಇಲ್ಲ. ಇನ್ನಾದರೂ ಸಂಘ ಸಂಸ್ಥೆಗಳು, ಸಮಾಜದ ಎಲ್ಲಾ ಸಂಘಟನೆಗಳು ಒಂದೇ ಮಾತೃ ಸಂಘದಡಿಗೆ ಬಂದು ಸ್ಥಾಪನೆ ಮಾಡುವ ಮನಸ್ಸು ಮಾಡಬೇಕಿದೆ. ಈ ಮೂಲಕ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಅವಕಾಶ ಕಲ್ಪಿಸಿದಲ್ಲಿ ಸಮಾಜ ಇನ್ನಷ್ಟು ಉನ್ನತ ಸ್ಥಿತಿಗೆ ಬರಲು ಸಾಧ್ಯವಾಗುವುದು.
ಕೇಶವ ಪೂಜಾರಿ
ಉಪನ್ಯಾಸಕರು
