
ಉಳ್ಳಾಲ: ಇಲ್ಲಿನ ಪೇಟೆ ರಹ್ಮಾನಿಯಾ ಜುಮಾ ಮಸೀದಿ ಮತ್ತು ಯುವ ಸಂಘಟನೆಯಾದ ಮುಸ್ತಾನುಲ್ ಊಲೂಂ ಯೂತ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಉಪಯೋಗಿಸಿದ ದುಬಾರಿ ಬೆಲೆಗಳ ಮದುವೆ ಸಾಮಗ್ರಿಗಳನ್ನು ಮನೆ ಮನೆಗಳಿಗೆ ತೆರಳಿ ಸಂಗ್ರಹಿಸಿದ ಸೊತ್ತುಗಳನ್ನು ಇಂದು ವಿತರಣೆ ನಡೆಸಲಾಯಿತು. ಎರಡು ದಿನಗಳ ಕಾಲ ಮಾತ್ರ ಇರುವ ಪ್ರಯತ್ನದಲ್ಲಿ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಿಯಾಗಿ ವಸ್ತುಗಳನ್ನು ಕೊಂಡೊಯ್ದರು.
ರಹ್ಮಾನಿಯಾ ಮಸೀದಿಯ ಮುಂಭಾಗದಲ್ಲಿರುವ ಮದ್ರಸಾದ ನಾಲ್ಕು ಬೃಹತ್ ಕೋಣೆಗಳಲ್ಲಿ ವಸ್ತ್ರಗಳನ್ನು ಜೋಡಿಸಿಡಲಾಗಿತ್ತು. ಬಾಕ್ಸ್ ಗಳಲ್ಲೂ ವಸ್ತ್ರಗಳನ್ನು ಸಂಗ್ರಹಿಸಿಡಲಾಗಿದೆ. ಬಡವರಿಗೆ ವಸ್ತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘಟಕರು ಯೋಜನೆ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ, ಸಂದೇಶವನ್ನು ರವಾನಿಸಿದೆ. ೧೦ ದಿನಗಳ ಅವಧಿಯಲ್ಲಿ ಮನೆಗಳಿಗೆ ಬರುವ ವಾಹನಕ್ಕೆ ಬಟ್ಟೆಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಜ.೧೫ರಿಂದ ೧೭ರವರೆಗೆ ಸಮಿತಿ ಮತ್ತು ಸಂಘಟನೆಯ ಸದಸ್ಯರು ವಾಹನದೊಂದಿಗೆ ಮನೆಗಳಿಗೆ ತೆರಳಿದಾಗ ದುಬಾರಿ ಬೆಲೆಯ ವಸ್ತ್ರಗಳು ಕೈಸೇರಿವೆ. ಯುವತಿಯರಿಗೆ ಮದರಂಗಿ, ಮದುವೆಗೆ ಬೇಕಾದ ವಸ್ತ್ರಗಳು ಮಾತ್ರವಲ್ಲದೆ ಪ್ರತಿದಿನ ಬಳಸುವ ವಸ್ತ್ರಗಳು, ಬುರ್ಖಾ, ಮಕ್ಕಳ ಕೋಟ್, ಪ್ಯಾಂಟ್, ಶರ್ಟ್ ಮಾತ್ರವಲ್ಲದೆ ಪುರುಷರ ವಸ್ತ್ರಗಳ ಸಂಗ್ರಹ ಇತ್ತು. ಎಲ್ಲದಕ್ಕೂ ಪ್ರತ್ಯೇಕ ವಿಭಾಗಗಳನ್ನು ಮಾಡಿ ಹಂಚಲಾಯಿತು.
ಸಮಾಜಮುಖಿಯಾಗಿ ರಹ್ಮಾನಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಕಾರ್ಯನಿರ್ವಹಿಸುತ್ತಿದೆ. ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಅನಾರೋಗ್ಯ ಪೀಡಿತರಿಗೆ, ವಿಶೇಷ ಚೇತನರಿಗೆ ಆರೋಗ್ಯ ಸಲಕರಣೆಗಳನ್ನು ಸಮಿತಿ ವಿತರಿಸುತ್ತಾ ಬಂದಿದೆ. ಇದೀಗ ಬಟ್ಟೆಗಳನ್ನು ಹಂಚುವ ಮುಖೇನ ಹೊಸ ನಾಣ್ಣುಡಿಯನ್ನು ಸಮಿತಿ ಬರೆದಿದೆ.
ಫೆ. ೧ಮತ್ತು ೨ರಂದು ವಸ್ತ್ರಗಳ ಆಯ್ಕೆ ಮಾಡಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಮಸೀದಿ ಆಡಳಿತ ಕಲ್ಪಿಸಿದೆ. ಫಲಾನುಭವಿಗಳನ್ನು ನಿಯಂತ್ರಿಸಲು ಪುರುಷ ಮತ್ತು ಮಹಿಳಾ ತಂಡಗಳು ಸ್ವಯಂಸೇವಕರಾಗಿ ಭಾಗವಹಿಸಿದರು . ಅರ್ಹರಿಗೆ ಯಾವ ಅಳತೆಯ ವಸ್ತ್ರ ಅಗತ್ಯವಿದೆಯೋ ಅದಕ್ಕಾಗಿ ಅಳತೆ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಿರುವುದು ವಿಶೇಷವಾಗಿತ್ತು.
ವಸ್ತುಗಳನ್ನು ಕೊಂಡೊಯ್ಯಲು ಜಾತಿ, ಧರ್ಮದ ಬೇಧವಿಲ್ಲ. ಎಲ್ಲರಿಗೂ ಬೇಕಾದ ವಸ್ತ್ರದ ಸಂಗ್ರಹ ಇದೆ. ಆಯ್ಕೆಯ ವಸ್ತ್ರ ಯಾರು ಬೇಕಾದರೂ ಉಚಿತವಾಗಿ ಕೊಂಡೊಯ್ಯಬಹುದು.
ಮೊಯಿದ್ದೀನ್ ಹಾಜಿ,
ಅಧ್ಯಕ್ಷ, ರಹ್ಮಾನಿಯಾ ಜುಮಾ ಮಸೀದಿ
