
ತೊಕ್ಕೊಟ್ಟು: ತಾನು ಹುಟ್ಟಿದ ಸಮಾಜದ ಏಳಿಗೆ,ನ್ಯೂನತೆ,ಅಸಮಾನತೆಗಳ ವಿರುದ್ಧ ಹೋರಾಡುವುದು ಸಹಜ.ಆದರೆ ಶತಮಾನದ ಹಿಂದೆಯೇ ಸಾರಸ್ವತ ಸಮಾಜದಲ್ಲಿ ಹುಟ್ಟಿದರೂ ಹಿಂದುಳಿದ ಸಮಾಜದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕುದ್ಮುಲ್ ರಂಗ ರಾವ್ ಅವರು ಪ್ರತೀ ಮನೆಯಲ್ಲೂ ಪೂಜೆಗೆ ಅರ್ಹರು ಎಂದು ಜನಪದ ವಿಧ್ವಾಂಸರಾದ ಉಳ್ಳಾಲಗುತ್ತು ಸುಕೇಶ್ ಚೌಟ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ ಹಾಗೂ ಶ್ರೀ ಸತ್ಯನಾರಾಯಣ ಮಂದಿರದ ಸುವರ್ಣ ಸಂಭ್ರಮ ಪ್ರಯುಕ್ತ ಗುರುವಾರದಂದು ನಡೆದ ಸುವರ್ಣ ಧರ್ಮಸಭೆಯನ್ನುದ್ದೇಶಿ ಅವರು ಮಾತನಾಡಿದರು.ಕುದ್ಮುಲ್ ರಂಗರಾವ್ ಅವರ ಸನ್ಯಾಸತ್ವ ಜೀವನದ ಈಶ್ವರಾನಂದ ಹೆಸರಿನಲ್ಲಿ ಭಜನಾಮಂದಿರಗಳಲ್ಲಿ ಆರಾಧನೆಗಳು ಇಂದಿಗೂ ನಡೆಯುತ್ತಿರುವುದು ಶ್ಲಾಘನೀಯ.ಅವಿಭಜಿತ ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಪ್ಪತ್ತು ಶಾಲೆಗಳನ್ನ ಕಟ್ಟಿದ್ದ ಕುದ್ಮುಲ್ ರಂಗರಾವ್ ಅವರು ಶತಮಾನದ ಹಿಂದೆಯೇ ಶಿಕ್ಷಣ ಕ್ರಾಂತಿ ಮಾಡಿದ್ದರು.ನೂರಾರು ಕೋಟಿ ಬೆಲೆಬಾಳುವ ಜಾಗವನ್ನ ಹಿಂದುಳಿದ ಸಮಾಜಕ್ಕೆ ಸಮರ್ಪಿಸಿದ ಮಹಾನ್ ವ್ಯಕ್ತಿ ಅವರಾಗಿದ್ದರು.ವಕೀಲರಾಗಿದ್ದ ಅವರು ಸಾಮಾಜಿಕ ನ್ಯಾಯಕ್ಕಾಗಿ ಬಡವರ ಪರ ಯಾವುದೇ ಫಲಾಪೇಕ್ಷೆ ಇಲ್ಲದೆ ವಕಾಲತ್ತು ನಡೆಸಿದವರಾಗಿದ್ದಾರೆ.ಸಮಾಜ ಅವರ ಅಸಮಾನ್ಯ ಸೇವೆಯನ್ನ ಎಂದಿಗೂ ನೆನಪಿಡಬೇಕು.ಈಗಿನ ಸ್ವಾರ್ಥ ತುಂಬಿದ ಸಮಾಜದಲ್ಲಿ ಕುದ್ಮುಲ್ ರಂಗರಾವ್ ರಂತವರು ಮತ್ತೆ ಹುಟ್ಟಿ ಬರಲು ಅಸಾಧ್ಯ ಎಂದರು.
ಉಳ್ಳಾಲ,ಬಂಡಿಕೊಟ್ಯದ ಶ್ರೀ ಕೋರಬ್ಬು ದೈವಸ್ಥಾನ ಆದಿಕ್ಷೇತ್ರ-ಪುನ್ಕೆದಡಿಯ ಶ್ರೀ ಚಂದ್ರಹಾಸ ಗುರಿಕಾರರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಉಡುಪಿ ಎ.ಜಿ.ಎಂ ಕಾಲೇಜಿನ ಉಪನ್ಯಾಸಕಿ ಡಾ.ನಯನ ಅತ್ತಾವರ ಅವರನ್ನ ಸನ್ಮಾನಿಸಲಾಯಿತು.
ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಮತ್ತಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಪಿಕಾಡು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾದ ರಾಜು ಗುರಿಕಾರ,ಸುವರ್ಣ ಸಂಭ್ರಮ ಉತ್ಸವ ಸಮಿತಿ ಅಧ್ಯಕ್ಷರಾದ ಸುರೇಶ್ ಭಟ್ನಗರ ,ಕಾಪಿಕಾಡು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎ.ಜೆ ಶೇಖರ್ ,ಮೊಕ್ತೇಸರರಾದ ದಿನೇಶ್ ಕೆ.ಅತ್ತಾವರ, ಸಾಹಿತಿ ಡಾ.ಅರುಣ್ ಉಳ್ಳಾಲ್,ಉಳ್ಳಾಲ ನಗರಸಭೆ ಸದಸ್ಯರಾದ ಕುಮಾರಿ ಭವಾನಿ,ಗಾಂಧಿನಗರ ಸತ್ಯನಾರಾಯಣ ಮಂದಿರದ ಅಧ್ಯಕ್ಷರಾದ ಹರೀಶ್ಚಂದ್ರ ಉಳ್ಳಾಲ್ ,ಮಹಿಳಾ ಮಂಡಳಿ ಅಧ್ಯಕ್ಷರಾದ ವಿದ್ಯಾ ದೇವದಾಸ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಸುವರ್ಣ ಸಂಭ್ರಮ ಉತ್ಸವ ಸಮಿತಿ ಪ್ರ.ಕಾ ಜಗದೀಶ್ ಸಾಲಿಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಘುರಾಜ್ ಕದ್ರಿ ವಿವಿಧ ಸ್ಫರ್ಧೆಗಳಲ್ಲಿ ಬಹುಮಾನ ವಿಜೇತರ ಹೆಸರು ವಾಚಿಸಿದರು.ರೋಹಿತ್ ಉಳ್ಳಾಲ್ ಸ್ವಾಗತಿಸಿ ನಿರೂಪಿಸಿದರು.ಆಶಿತ್ ಕಿರಣ್ ವಂದಿಸಿದರು.
ಹಿಂದೆ ಕೂಡು ಕುಟುಂಬದೊಂದಿಗೆ ಮಕ್ಕಳು ಬೆರೆಯುತ್ತಿದ್ದರು.ಇಂದು ಮಕ್ಕಳು ಕೂಡು ಕುಟುಂಬದಿಂದ ವಿಮುಖರಾಗಿ ಮೊಬೈಲ್ಗೆ ದಾಸರಾಗಿದ್ದಾರೆ.ಮೊಬೈಲ್ ಬಳಕೆ ತಪ್ಪಲ್ಲ,ಅದಕ್ಕೊಂದು ಇತಿ ಮಿತಿ ಇರಬೇಕು.ಇಂತಹ ಭಜನಾ ಮಂದಿರಗಳ ಕಾರ್ಯ ಚಟುವಟಿಕೆಗಳಿಂದ ಮಕ್ಕಳಿಂದು ಮೊಬೈಲ್ಗಳನ್ನ ಬಿಟ್ಟು ಭಜನೆ,ಕುಣಿತ ಭಜನೆಗಳತ್ತ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ಭಜನಾ ಮಂದಿರಗಳು ಮಕ್ಕಳನ್ನ ಸನ್ನಡತೆಯ ಹಾದಿಯತ್ತ ನಡೆಸುವ ಕೇಂದ್ರಗಳಾಗಿ ಬೆಳೆಯಲಿ.
***ಡಾ.ನಯನ ಅತ್ತಾವರ ,ಉಪನ್ಯಾಸಕರು.