Site icon Ullalavani

ಜಿಪ್ಸೀ ಚಾಲಕನ ಆವಾಂತರ ಆಕ್ಟಿವಾ ಸವಾರ ಬಲಿ, ಮಹಿಳೆ ಗಂಭೀರ ಗಾಯ

ತೊಕ್ಕೊಟ್ಟು: ಜಿಪ್ಸೀ ವಾಹನ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಸಹಸವಾರೆ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲಿಯಾರ್ ಪದವು ಸಂಪಿಗೆದಡಿ ನಿವಾಸಿ ಅರುಣ್ ಪೂಜಾರಿ(43) ಮೃತರು. ಸಹಸವಾರೆ ಬಾರ್ ನ ಸ್ವಚ್ಛತಾ ಸಿಬ್ಬಂದಿ ಹೇಮಾವತಿ ಗಂಭೀರ ಗಾಯಗೊಂಡಿದ್ದಾರೆ. ಕಾಪಿಕಾಡು ಸಮೀಪದ ವೈನ್ ಆಂಡ್ ಡೈನ್ ಬಾರಿನಲ್ಲಿ ಹಲವು ವರ್ಷಗಳಿಂದ ವೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್,  ಶನಿವಾರ ತಡರಾತ್ರಿ ಕರ್ತವ್ಯ ಮುಗಿಸಿ ಆಕ್ಟಿವಾ ಸ್ಕೂಟರ್ ಮೂಲಕ ಎಲಿಯಾರುಪದವು ಮನೆ ಕಡೆಗೆ ತೆರಳುವಾಗ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ನಡೆಸಿ ಬಂದ ಜಿಪ್ಸೀ ವಾಹನ ಚಾಲಕ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅರುಣ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಸಹಸವಾರೆ ಹೇಮಾವತಿ ಅವರ ಕಾಲಿಗೆ ಗಂಭೀರ ಗಾಯಗಳಾಗಿದೆ. ಅಪಘಾತದ ತೀವ್ರತೆಗೆ ಆಕ್ಟಿವಾ ಸ್ಕೂಟರಿನ ಸೀಟ್ , ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಎಸೆಯಲ್ಪಟ್ಟಿತ್ತು.
ಜಿಪ್ಸೀ ವಾಹನ ಚಾಲಕ ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Exit mobile version