Site icon Ullalavani

ನೇತ್ರಾವತಿ ಸೇತುವೆ ಕಳಚಿದ ರಾಡಿನಿಂದ ಒಡೆದ ಕಾರಿನ ಟಯರ್


ಕಲ್ಲಾಪು: ತೊಕ್ಕೊಟ್ಟು ಭಾಗದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರೊಂದರ ಎರಡೂ ಟಯರುಗಳು ನೇತ್ರಾವತಿ ಹಳೇಯ ಸೇತುವೆಯ ರಾಡುಗಳಿಗೆ ತಗಲಿ ಒಡೆದುಹೋಗಿರುವ ಕುರಿತು ಕಾರು ಮಾಲೀಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.
ಡಿ.14 ರಂದು ಮಂಗಳೂರು ಕಡೆಗೆ ತೆರಳುತ್ತಿದ್ದ ವೆನ್ಯೂ ಕಾರು ನೇತ್ರಾವತಿ ಸೇತುವೆಯಲ್ಲಿ ಹೊಂಡಕ್ಕೆ ಬಿದ್ದಿದೆ. ಇದೇ ವೇಳೆ ಒಂದೇ ಬದಿಯ ಎರಡು ಟಯರುಗಳು ಒಡೆದುಹೋಗಿ ಪಂಕ್ಚರ್ ಆಗಿದೆ. ಕಾರಿನಿಂದ ಇಳಿದ ಮಾಲೀಕರು ಸೇತುವೆಯನ್ನು ಗಮನಿಸಿದಾಗ ಸೇತುವೆಯ ರಾಡ್ ಎದ್ದು ಟಯರಿಗೆ ಚುಚ್ಚಿರುವುದು ಕಂಡುಬಂದಿದೆ. ರಾಷ್ಟ್ರೀಯ ಹೆದ್ದಾರಿ -66ರ ಅವ್ಯವಸ್ಥೆಯಿಂದಾಗಿ ಕಾರಿನಲ್ಲಿದ್ದವರು ತೊಂದರೆಗೀಡಾಗುವಂತಾಯಿತು. ಈ ಕುರಿತು ವೀಡಿಯೋ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾರು ಮಾಲೀಕರು ಎಲ್ಲಾ ವಾಹನ ಸವಾರರು ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದ್ದು, ಸ್ವಲ್ಪ ತಪ್ಪಿದರೂ ಅಪಘಾತವೇ ನಡೆಯುತಿತ್ತು ಎಂದು ನೋವನ್ನು ಹಂಚಿಕೊಂಡಿದ್ದಾರೆ. ಸುಂಕ ವಸೂಲಾತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸುಂಕ ಪಡೆಯುತ್ತಿರುವ ಹೆದ್ದಾರಿ ನಿರ್ವಹಣೆ ವಹಿಸಿಕೊಂಡಿರುವ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಇಲಾಖಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರಿಂದ ಒತ್ತಾಯಗಳು ಕೇಳಿಬಂದಿದೆ.

Exit mobile version