Site icon Ullalavani

ಜೀವನದ ಪ್ರಮುಖ ಘಟ್ಟ ಹದಿಹರೆಯದ ಸಮಸ್ಯೆಗಳಿಗೆ ವೈದ್ಯರ ಸಲಹೆಯಂತೆ ಪರಿಹಾರ ಕಂಡುಕೊಳ್ಳಿ: ಟಿ.ಜಿ.ರಾಜಾರಾಮ್ ಭಟ್

ಕೈರಂಗಳ : ಹದಿಹರೆಯ ಅನ್ನುವುದು ಅತ್ಯಂತ ಪ್ರಾಮುಖ್ಯವಾದ ಘಟ್ಟ, ವ್ಯಕ್ತಿತ್ವ ವಿಕಸನದ ಕಾಲಘಟ್ಟ. ಈ ವೇಳೆ ಉಂಟಾಗುವ ಸಮಸ್ಯೆಗಳು ಜೀವನದುದ್ದಕ್ಕೂ ತೊಂದರೆಗಳನ್ನು ತಂದೊಡ್ಡಬಹುದು. ಅದನ್ನು ಸರಿಯಾದ ವೈದ್ಯರ ಸಲಹೆಗಳಂತೆ ಸೂಕ್ತ ಮಾರ್ಗದರ್ಶನಗಳನ್ನು ಪಡೆದುಕೊಂಡು ಜೀವನದಲ್ಲಿ ಅನ್ವಯಿಸುವ ಮುಖೇನ ಸದೃಢ ಆರೋಗ್ಯವನ್ನು ನಮ್ಮದಾಗಿಸಬಹುದು. ಈ ನಿಟ್ಟಿನಲ್ಲಿ ಶಾಲೆಯಲ್ಲಿ ವಿವಿಧ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಆರೋಗ್ಯ ಶಿಬಿರ ಶ್ಲಾಘನಾರ್ಹ ಎಂದು ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಅಭಿಪ್ರಾಯಪಟ್ಟರು.
ಲೈಫ್ ನೆಸ್ಟ್ ಟ್ರಸ್ಟ್ , ಮಂಗಳೂರು, ಉಳ್ಳಾಲವಾಣಿ ಕನ್ನಡಪತ್ರಿಕೆ, ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಹಾಗೂ ಶಾರದಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದಲ್ಲಿ ಸಹಜವಾದ ಪ್ರಕ್ರಿಯೆಗಳು ನಡೆಯುವ ವೇಳೆ ಹಲವು ಸಮಸ್ಯೆಗಳು ಎದುರಾಗಬಹುದು. ಅದನ್ನು ಮುಕ್ತವಾಗಿ ವೈದ್ಯರ ಜತೆಗೆ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಜೀವನವನ್ನು ಆರೋಗ್ಯಯುತಗೊಳಿಸಬಹುದು. ಇಂತಹ ಉತ್ತಮ ಕಾರ್ಯಕ್ಕೆ ಎಂದರು.
ಮುಖ್ಯ ಅತಿಥಿಗಳಾಗಿ ಅಶ್ವಿನಿ ಹೆಲ್ತ್ ಕೇರ್ ಮುಡಿಪು ಇದರ ವೈದ್ಯ ಡಾ.ಅರುಣ್ ಪ್ರಸಾದ್ ಮಾತನಾಡಿ, ಶರೀರದಲ್ಲಿ ಅನೇಕ ಜ್ಞಾನೇಂದ್ರಿಯಗಳಿದ್ದು, ಇವುಗಳಲ್ಲಿ ಕಣ್ಣು ಪ್ರಧಾನವಾದ ಅಂಗವಾಗಿರುತ್ತದೆ. ಮೊಬೈಲ್ ಯುಗ ಆರಂಭವಾದ ನಂತರದ ದಿನಗಳಲ್ಲಿ ಕಣ್ಣಿನ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಜಾಗೃತವಹಿಸಬೇಕಿದೆ. ದೃಷ್ಟಿ ಸಮಸ್ಯೆಯಿಂದ ಕೆಲ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅತಿಮುಖ್ಯ ಎಂದರು.
ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಕಂಬ್ಳಪದವು ಜಯರಾಮ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಜಾಗೃತಿ ಕುರಿತು ಖಾರ್ಯಕ್ರಮದ ಚಿಂತನೆಯನ್ನು ನಡೆಸುತ್ತಾ ಬಂದಿದ್ದೆವು. ಆದರೆ ಇದೀಗ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶಾಲಾ ಸಂಚಾಲಕ, ಆಡಳಿತ ಮಂಡಳಿಯ ಆಶಯವನ್ನು ಈಡೇರಿಸಿದಂತಾಗಿದೆ. ಶಿಬಿರದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಜೀವನದಲ್ಲಿ ನಿರ್ವಹಿಸುವಂತಾಗಲಿ ಎಂದರು.
ಈ ಸಂದರ್ಭ ಪ್ರಾಂಶುಪಾಲರಾದ ಅರುಣ್‌ಪ್ರಕಾಶ್ ಶೆಟ್ಟಿ, ಕೆ.ಎಸ್ ಹೆಗ್ಡೆ ಕಣ್ಣು, ಮೂಗು, ಕಿವಿ ವಿಭಾಗದ ಡಾ| ನೀಮಾ ಕೆ., ಸ್ತ್ರೀರೋಗ ತಜ್ಞ ಡಾ| ಸಂಜೀವಿನಿ, ಸೈಕಾಟ್ರಿ ವಿಭಾಗದ ಆಗ್ನೆಟಾ ಐಮನ್ , ಮಾರುಕಟ್ಟೆ ವಿಭಾಗದ ತಿಲಕ್, ಲೈಫ್ ನೆಸ್ಟ್ ಟ್ರಸ್ಟ್ ಅಧ್ಯಕ್ಷ ಅಚಲ್ ಶರ್ಮಾ ಆರ್.ಎಂ, ಟ್ರಸ್ಟೀಗಳಾದ ಕೆ. ಯಶವಂತ್ ರಾವ್, ಉಳ್ಳಾಲವಾಣಿ ಸಂಪಾದಕ ಮೋಹನ್‌ ಕುತ್ತಾರ್‌, ವಿನಯ್ ಶರ್ಮ ಉಪಸ್ಥಿತರಿದ್ದರು.
ಶ್ರೀನಿವಾಸ್ ಭಟ್ ಸೇರಾಜೆ ನಿರೂಪಿಸಿದರು. ಪ್ರಾದ್ಯಾಪಕ ಚಂದ್ರಕುಮಾರ್ ಸ್ವಾಗತಿಸಿದರು. ಶಿಕ್ಷಕಿ ದೀಪಿಕಾ ವಂದಿಸಿದರು.

Exit mobile version