Site icon Ullalavani

ಜ್ಞಾನದ ಆರಾಧನೆಯಾಗುವಂತದ್ದು ಎಲ್ಲವೂ ವೇದಗಳ ಕಾಲವೇ ಹೌದು: ಪ್ರವೀಣ್ ಸರಳಾಯ

ತೊಕ್ಕೊಟ್ಟು: ಕಳೆದ ಲಕ್ಷಾಂತರ ವರ್ಷಗಳಿಂದ ಬೆಳಕಿನ ಜ್ಞಾನದ ಆರಾಧನೆ ಇಲ್ಲಿ ನಡೆಯಿತು. ಯುಗಗಳ ಕಲ್ಪನೆ ತೆಗೆದುಕೊಂಡರೆ ಕಲಿಯುಗ ಪ್ರಾರಂಭವಾಗಿ 5126ನೇ ವರ್ಷ ನಡೆಯುತ್ತಿದೆ. ಜ್ಞಾನದ ಆರಾಧನೆಯಾಗುವಂತದ್ದು ಎಲ್ಲವೂ ವೇದಗಳ ಕಾಲವೇ ಆಗಿದೆ ಎಂದು ಗೋ ಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ವನ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮಂಗಳೂರು ಇಲ್ಲಿ “ನಾರಿಶಕ್ತಿ” ಎಂಬ ಪರಿಕಲ್ಪನೆಯೊಂದಿಗೆ ಜರಗಿದ ರಾಷ್ಟ್ರೋತ್ಸವ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ಕು ಯುಗಗಳ ಲೆಕ್ಕಾಚಾರವನ್ನು ಸಂಖ್ಯೆಸಹಿತ ಸಭಿಕರಿಗೆ ಕೆಲವು ಉದಾಹರಣೆಗಳ ಮೂಲಕ ವಿವರಿಸಿದ ಅವರು “ಗೋವು ಮತ್ತು ಗುರುಕುಲ ಜೊತೆ ಜೊತೆಗೆ ಇತ್ತು. ಗೋವು ಎಂದರೆ ಜ್ಞಾನ. ಶಿಕ್ಷಣ ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾದದ್ದಲ್ಲ. ಜಗತ್ತಿನ ಆತ್ಯಂತ ಶ್ರೇಷ್ಟ ವೃತ್ತಿ ಏನೆಂದರೆ ಅದು ‘ಗೋಪಾಲನೆ’, ಜಗತ್ತಿನ ಅತ್ಯಂತ ಶ್ರೇಷ್ಟ ಗ್ರಂಥ ‘ಭಗವದ್ಗೀತೆ’ ಅದನ್ನು ಕೃಷ್ಣ ಕೊಟ್ಟಿರುವುದು ಗೋ ಪಾಲನೆ ಮಾಡಿರುವುದರಿಂದ, ಗುರುಕುಲ ಶಿಕ್ಷಣ ಗೋವಿನ ಜೊತೆ ಜೊತೆಗೆ ವಿಕಾಸವಾಯಿತು” ಎಂಬ ಸಂದೇಶವನ್ನು ನೀಡಿದರು
ಸಂಸ್ಥೆಯ ಪ್ರಧಾನಾಚಾರ್ಯ ವಿದ್ಯಾಕಾಮತ್ ಜಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ ವಂದಿಸಿದರು. ಲಾವಣ್ಯ ಶೆಟ್ಟಿ ಮಾತಾಜಿ ಅತಿಥಿ ಪರಿಚಯ ಮಾಡಿದರು. ಸೌಮ್ಯ ಮಾತಾಜಿ ಶೈಕ್ಷಣಿಕ ವರ್ಷದಲ್ಲಿ ಶಾಲಾ ಸ್ಪರ್ಧೆಗಳಲ್ಲಿ ವೈಯಕ್ತಿಕ ಚಾಂಪಿಯನ್ ಪಡೆದ ತಂಡಗಳ ವರದಿ ನೀಡಿದರು. ಲಾವಣ್ಯ ಸುಧಾಕರ್ ಮಾತಾಜಿ ವೈಯಕ್ತಿಕ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ತನ್ಮಯ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಮಮತ ಮಾತಾಜಿ ಮತ್ತು ದೀಪಾ ಮಾತಾಜಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಹಾಡು, ನೃತ್ಯ, ನಾಟಕ, ಚಿತ್ರಕಲೆ, ಸಂಗೀತವಾದ್ಯಗಳ ವಾದನ, ಪ್ರಹಸನ, ಯಕ್ಷಗಾನ ಜರಗಿತು.

Exit mobile version