Site icon Ullalavani

ಆನ್ಲೈನ್ ಪಾರ್ಟ್‌ ಟೈಮ್‌ ಜಾಬ್ ದೋಖಾ ‌ಕೊಣಾಜೆ ಪೊಲೀಸರಿಂದ ಇಬ್ಬರ ಬಂಧನ

ಕೊಣಾಜೆ: ವಾಟ್ಸಪ್ ಮತ್ತು ಟೆಲಿಗ್ರಾಂ ಲಿಂಕ್ ಮೂಲಕ ಕೆಲಸದ ಆಮಿಷ ತೋರಿಸಿ ಆನ್ಲೈನ್ ಮುಖೇನ ಕೊಣಾಜೆ ನಿವಾಸಿಯಿಂದ ಹಣ ಪಡೆದುಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಮತ್ತು ಜಮ್ಮು ಕಾಶ್ಮೀರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರಿನ ಜಲಸಂದ್ರ ನಿವಾಸಿ ಅಮೀರ್ ಸುಹೇಲ್ ಹಾಗೂ ಕಾಶ್ಮೀರ ನಿವಾಸಿ ಸುಹೈಲ್ ಅಹ್ಮದ್ ವಾನಿ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು 2024ರ ಜು.21 ರಂದು ಪಾರ್ಟ್ ಟೈಮ್ ಜಾಬ್ ಕುರಿತು ವಾಟ್ಸಪ್ ಮತ್ತು ಟೆಲಿಗ್ರಾಂ ಲಿಂಕ್ ಕಳುಹಿಸಿದ್ದರು. ಕೆಲಸ ಏನೆಂದು ಕೇಳಿದ ತಕ್ಷಣ ವೀಡಿಯೋ ಕಳುಹಿಸಿ ಅದರ ಸ್ಕ್ರೀನ್ ಶಾಟ್ ಕಳುಹಿಸಲು ತಿಳಿಸಿ ಅವರಿಗೆ ರೂ.130 ನ್ನು ಪಾವತಿಸಿದ್ದಾರೆ. ನಂತರ ಮತ್ತೆ ಹಾಕಿದ ವೀಡಿಯೋ ತಪ್ಪಾಗಿದೆ ಎಂದು ಹೇಳಿ ಇನ್ನೊಂದು ಲಿಂಕ್ ಕಳುಹಿಸಿದ್ದಾರೆ. ಆ ಲಿಂಕ್ ಓಪನ್ ಮಾಡಿದ ತಕ್ಷಣ ರೂ.1000 ಮೊತ್ತವನ್ನು ಹಾಕಲು ಹೇಳಿ ನಂತರ ಹಂತ ಹಂತವಾಗಿ ಅಕೌಂಟಿನಿಂದ ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾಯಿಸಿ ಒಟ್ಟು ರೂ. 28,18,065 ವಂಚನೆ ನಡೆಸಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯ ಐಟಿ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಈಗಾಗಲೇ ಬೆಂಗಳೂರು, ಮೈಸೂರು ಮೂಲದ 5 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರು ವಿಚಾರಣೆ ವೇಳೆ ಬಂಧಿತರಿಬ್ಬರ ಮಾಹಿತಿ ನೀಡಿದ್ದರು. ಇಬ್ಬರು ಆರೋಪಿಗಳು ಹಲವು ಬ್ಯಾಂಕುಗಳಲ್ಲಿ ಬೇರೆಯವರ ಹೆಸರಿನಲ್ಲಿ ಮತ್ತು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಮಾಡಿಸಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಬೇರೆಯವರ ಖಾತೆಗೆ ದಿನಕ್ಕೆ 3,000 ದಿಂದ 4,000 ರೂ. ದಷ್ಟು ಹಣ ನೀಡಿ ಬೇರೆ ಬೇರೆ ಕಡೆಗಳಲ್ಲಿ ಅಕೌಂಟ್ ಮಾಡಿಸಿರುವುದು ತಿಳಿದುಬಂದಿದೆ.
ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ನಿರ್ದೇಶನದಂತೆ ಕೊಣಾಜೆ ಠಾಣಾ ನಿರೀಕ್ಷಕ ರಾಜೇಂದ್ರ ಬಿ ಹಾಗೂ ಪಿಎಸ್ ಐಗಳಾದ ಪುನೀತ್ ಗಾಂವ್ಕರ್, ನಾಗರಾಜ್, ಎಎಸ್ ಐ ಪ್ರವೀಣ್ ಹಾಗೂ ಸಿಬ್ಬಂದಿಯಾದ ರೇಷ್ಮಾ, ರಾಮ ನಾಯ್ಕ, ಬಸವನ ಗೌಡ, ದರ್ಶನ್, ಸುರೇಶ್ , ಮುತ್ತು, ಓಗೇನರ್ ಮತ್ತು ಸಂತೋಷ್ ಕಾರ‍್ಯಾಚರಣೆಯಲ್ಲಿ ಭಾಗವಹಿಸಿದ್ದರು.

Exit mobile version