Site icon Ullalavani

ಮಕ್ಕಳು ಇತಿಹಾಸ ಅರಿತುಕೊಂಡರೆ ಮಕ್ಕಳ ದಿನಾಚರಣೆ ಅರ್ಥಪೂರ್ಣ : ಸುಮಲತ ನವೀನ್ ಚಂದ್ರ ಸುವರ್ಣ


ಕುತ್ತಾರು: ಮಕ್ಕಳು ದಿನನಿತ್ಯ ತಮ್ಮ ಆಟಪಾಠಗಳಲ್ಲಿ ತೊಡಗಿಕೊಂಡು ಚಟುವಟಿಕೆಯಿಂದ ಕೂಡಿರುತ್ತಾರೆ. ಯಾವುದೇ ಚಿಂತೆ, ಜವಾಬ್ದಾರಿಗಳಿಲ್ಲದೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಮಕ್ಕಳು ಸಂತಸದಿಂದಿದ್ದು ನಿತ್ಯ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುತ್ತಾರೆ. ಮಕ್ಕಳು ಇತಿಹಾಸ ಅರಿತುಕೊಂಡರೆ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗುತ್ತದೆ ” ಎಂದು ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷರಾದ ಸುಮಲತ ಎನ್ ಸುವರ್ಣ ಹೇಳಿದರು.
ಅವರು ಮಹಿಳಾ ಸಂಘದ ವತಿಯಿಂದ ಇದೇ ಭಾನುವಾರ ಕುತ್ತಾರು ಪದವಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸುತ್ತಾ ಮಾತನಾಡಿದರು.
ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ವತಿಯಿಂದ ಮಕ್ಕಳಿಗೆ ರಸಪ್ರಶ್ನೆ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅನಾಥಾಶ್ರಮದ ಮಕ್ಕಳು ಹಾಡು, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಗೆ ಎಲ್ಲಾ ಮಕ್ಕಳಿಗೆ ಆಹಾರತಿನಿಸುಗಳ ಜೊತೆ ದಿನಬಳಕೆಯ ವಸ್ತುಗಳನ್ನು ಉಡುಗೊರೆಯಾಗಿ ಹಂಚಲಾಯಿತು. ಸಂಘದ ವತಿಯಿಂದ ಆಶ್ರಮಕ್ಕೆ ಧನಸಹಾಯ ನೀಡಲಾಯಿತು.
ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ವೈ. ಸುವರ್ಣ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶಕಿಲಾರಾಜ್ ಸ್ಪರ್ಧೆಗಳನ್ನು ನಡೆಸಿಕೊಟ್ಟು ನಿರೂಪಿಸಿದರು. ಉಪಾಧ್ಯಕ್ಷರಾದ ದೇವಕಿ ಉಳ್ಳಾಲ್, ದಯಾಮಣಿ ಕೋಟ್ಯಾನ್, ಖಜಾಂಚಿ ರೇವತಿ ಅಶೋಕ್, ಸದಸ್ಯೆ ಸತ್ಯವತಿ ಜೆ.ಕೆ ಉಳ್ಳಾಲ್, ಆಶ್ರಮದ ಆಡಳಿತ ಮಂಡಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸಂಘದ ಸದಸ್ಯರು ಮಕ್ಕಳ ಜೊತೆ ಮಕ್ಕಳಾಗಿ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Exit mobile version