ಉಳ್ಳಾಲ: ದಕ್ಷಿಣ ಕನ್ನಡ ,ಉಡುಪಿ, ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿ ಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ 16ನೇ ಶಾಖೆಯು ಕೋಟೆಕಾರು ಮಾಡೂರಿನಲ್ಲಿ ನ.24 ರಂದು ಭಾನುವಾರ ಬೆಳಿಗ್ಗೆ 11.45ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ಧನ್ ಮೂಲ್ಯ ತಿಳಿಸಿದ್ದಾರೆ.
ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
66 ವರ್ಷಗಳ ಸುದೀರ್ಘ ಸೇವೆಯಲ್ಲಿರುವ ಸಂಘ ಇದೀಗ ತನ್ನ 14 ನೇ ಶಾಖೆಯನ್ನು ಮಾಡೂರು ಮೆಡಿ ಪ್ಲಸ್ ಮೆಡಿಕಲ್ ಎದುರುಗಡೆ ಕಾರ್ಯಾರಂಭಗೊಳ್ಳಲಿದೆ. ಸಭಾಧ್ಯಕ್ಷರಾದ ಯು.ಟಿ ಖಾದರ್ ಉದ್ಘಾಟಿಸಲಿದ್ದು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ದ್ವೀಪ ಪ್ರಜ್ಜಲಿಸಲಿದ್ದಾರೆ. ಕೋಟೆಕಾರ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ದಿವ್ಯ ಶೆಟ್ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.
ಹಿರಿಯ ನ್ಯಾಯಾವಾದಿಗಳಾದ ಲಕ್ಷ್ಮಣ ಕುಂದರ್, ಕುಲಾಲ ಸಂಘ ಕೊಲ್ಯದ ಅಧ್ಯಕ್ಷ ರಾದ ಭಾಸ್ಕರ್ ಕುತ್ತಾರ್, ಕುಲಾಲ್ ಸಂಘ ಮುಡಿಪು ಅಧ್ಯಕ್ಷ ಪುಂಡರೀಕಾಕ್ಷ ಯು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ದನ್ ಮೂಲ್ಯ, ಕಾರ್ಯನಿರ್ವಹಣಾ ಪ್ರಬಂಧಕಿ ಸುಜಾತ, ಮ್ಯಾನೇಜರ್ ಸುಕನ್ಯ ಉಪಸ್ಥಿತರಿದ್ದರು.
66 ವರ್ಷಗಳ ನಿರಂತರ ಸೇವೆ : 1958 ರಲ್ಲಿ ಗ್ರಾಮೀಣ ಕುಂಬಾರಿಕೆ ಮತ್ತು ಗುಡಿ ಕೈಗಾರಿಕೆಯ ಅಭಿವೃಧಿಗಾಗಿ ಗ್ರಾಮೀಣ ಕುಂಬಾರ ಕುಶಲ ಕರ್ಮಿಗಳನ್ನು ಸದಸ್ಯರನ್ನಾಗಿಸಿ ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಿಗೆ ಕಾರ್ಯ ವ್ಯಾಪ್ತಿ ಹೊಂದಿ ಅಂದಿನ ಮದ್ರಾಸ್ ಸರಕಾರದಡಿಯಲ್ಲಿ ರಚಿತವಾದ ಸಹಕಾರ ಸಂಘ ಇಂದು ದ.ಕ, ಉಡುಪಿ, ಕೊಡಗು, ಮೈಸೂರು ಜಿಲ್ಲಾ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಒಟ್ಟು 15 ಕಡೆಗಳಲ್ಲಿ ಬ್ಯಾಂಕಿಂಗ್ ಮತ್ತು ಮಾರಾಟ ಮಳಿಗೆಗಳು, ಪುತ್ತೂರು ಮತ್ತು ಬಿ.ಸಿ.ರೋಡಿನಲ್ಲಿ ಕುಂಬಾರಿಕೆ ಪ್ರದರ್ಶನ ಮಳಿಗೆ ಮತ್ತು ಒಂದು ಕುಂಬಾರಿಕೆ ಉತ್ಪಾದನಾ ತರಬೇತಿ ಕೇಂದ್ರದ ಮುಖಾಂತರ ತನ್ನ ಸದಸ್ಯರಿಗೆ ಸಹಾಯವನ್ನು ನೀಡುವ ರಾಜ್ಯದ ಏಕೈಕ ಸಹಕಾರ ಸಂಘವಾಗಿದೆ.
ಗ್ರಾಮೀಣ ಕುಶಲ ಕರ್ಮಿಗಳಿಗೆ ಆಧುನಿಕ ರೀತಿಯ ತರಬೇತಿಯನ್ನು ನೀಡಿ ಅವರು ತಮ್ಮ ಗುಡಿ ಕೈಗಾರಿಕೆಯನ್ನು ಸ್ವತಂತ್ರ್ಯವಾಗಿ ನಡೆಸಲು ಅನುಕೂಲವಾಗುವಂತೆ ಪೂರಕ ಮಾರ್ಗದರ್ಶಿ ಹಾಗೂ ಕೈಗಾರಿಕೆಗೆ ಬೇಕಾದ ಪೂರಕ ಕಚ್ಚಾ ವಸ್ತು ಉತ್ತಮ ಗುಣಮಟ್ಟದ ಮಣ್ಣು, ಕಟ್ಟಿಗೆ, ವಗೈರೆ ಒದಗಿಸಿ ನುರಿತ ಕರಕುಶಲ ತಯಾರಕರಿಂದ ಅವರಿಗೆ ತರಬೇತಿ ನೀಡಿ ಅವರ ಉತ್ಪಾದನೆಯನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಿ ಅವರಿಗೆ ಯೋಗ್ಯ ಮಾರುಕಟ್ಟೆಯನ್ನು ಒದಗಿಸುತ್ತಿದೆ.
ಸಹಕಾರ ಸಂಘದ ಉತ್ಪಾದನಾ ತರಬೇತಿ ಕೇಂದ್ರದಲ್ಲಿ ಸುಂದರ ಹೂದಾನಿಗಳು, ಮ್ಯಾಜಿಕ್ ಜಗ್ ಗಳು, ಆಲಂಕಾರಿಕ ಪಾತ್ರೆಗಳು, ನೀರಿನ ಹೂಜಿಗಳು , ಹೂಚಟ್ಟಿಗಳು, ತಂದೂರಿ ರೊಟ್ಟಿ ತಯಾರಿಸುವ ಗುಡಾಣಗಳು ಹೊಟೇಲ್ ಗಳ ಅಲಂಕರಿಸುವ ಮಣ್ಣಿನ ಕಲಾಕೃತಿಗಳು, ದಿನಬಳಕೆ ಮಣ್ಣಿನ ಪಾತ್ರೆಗಳು ಸೇರಿದಂತೆ ಹಲವು ಆಕರ್ಷಕ ಉತ್ಪನ್ನಗಳು ಕಾರ್ಯಗಾರದಲ್ಲಿ ತಯಾರಿಸಲಾಗುತ್ತಿದೆ. ಸಹಕಾರ ಸಂಘದ ಕೇಂದ್ರ ಕಚೇರಿಯು ಪುತ್ತೂರಿನ ಹೃದಯಭಾಗದಲ್ಲಿದ್ದು, ಕೌಡಿಚ್ಚಾರು, ಬೆಳ್ಳಾರೆ, ಗುರುವಾಯನಕೆರೆ, ಮಾಣಿ, ವಿಟ್ಲ, ಕುಡ್ತಮುಗೇರು, ಉಪ್ಪಿನಂಗಡಿ, ಬಿ.ಸಿರೋಡ್ , ಮೆಲ್ಕಾರ್, ಬೆಳ್ತಂಗಡಿ, ಸಿದ್ಧಕಟ್ಟೆ, ಮುಡಿಪು , ಫರಂಗಿಪೇಟೆ, ಮಡಂತ್ಯಾರು ಕಡೆಗಳಲ್ಲಿ ಒಟ್ಟು 15 ಶಾಖೆಗಳನ್ನು ಹೊಂದಿದೆ.
ಸಹಕಾರ ಸಂಘ ಪ್ರಸಕ್ತ 31547 ಸದಸ್ಯರನ್ನು ಹೊಂದಿದ್ದು, ಒಟ್ಟು ರೂ. 358.74 ಲಕ್ಷ ಪಾವತಿಯ ಪಾಲು ಬಂಡವಾಳವಿರುತ್ತದೆ. ಸಹಕಾರ ಸಂಘ ಸದಸ್ಯರಿಂದ ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಸಂಗ್ರಹಣೆ ಮಾಡುತ್ತಿದೆ. ಹಿರಿಯ ನಾಗರಿಕ ಸದಸ್ಯರ ಠೇವಣಿಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. 30-09-24 ಇದ್ದಂತೆ 103.24 ಕೋಟಿ ಠೇವಣಿ ಸಂಗ್ರಹಣೆ ಇದೆ. ಅ.30 ರ ಅಂತ್ಯಕ್ಕೆ ವಿವಿಧ ಯೋಜನೆಗಳಿಗೆ ನೀಡಲಾದ ಸಾಲದಲ್ಲಿ ರೂ.88.79 ಕೋಟಿ, ಹೊರಬಾಕಿ ಸಾಲವಿದ್ದು, ಕುಂಬಾರಿಕೆ ಕೈಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೇ.9 ಬಡ್ಡಿದರಲ್ಲಿ ಕುಂಬಾರಿಕೆ ಅಭಿವೃದ್ಧಿ ಸಾಲ, ಪ್ರಸಕ್ತ ಸಾಲಿನಲಿ 478.17 ಕೋಟಿ ವ್ಯವಹಾರ ನಡೆಸಲಾಗಿದೆ.
ಮಾ.31 ರಂದು 201.32 ಲಕ್ಷ ಲಾಭ ಗಳಿಸಲಾಗಿದೆ. ಸಂಘದ ಲೆಕ್ಕ ಪರಿಶೋಧನೆಯಲ್ಲಿ ಎ ಬರ್ಗವನ್ನು ನಿರಂತರ ಕಾಯ್ದುಕೊಂಡಿದ್ದು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಕಳೆದ ಎರಡು ವರ್ಷಗಳಿಂದ ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದಿಂದ ಕೊಡಮಾಡುವ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇ ಸ್ಟಾಂಪ್ ಪೇಪರ್ ಮಾರಾಟದ ವ್ಯವಸ್ಥೆಯನ್ನು ಒಳಗೊಂಡಿದ್ದು, ನೆಫ್ಟ್ ಮತ್ತು ಆರ್ ಟಿಜಿಎಸ್ ಸೌಲಭ್ಯ ಇದೆ. ಮಾಡೂರು ಶಾಖೆಯ ಆರಂಭದ ಪ್ರಯುಕ್ರ , ಸ್ವೀಕರಿಸುವ ಠೇವಣಿಗಳಿಗೆ 10.5 ಬಡ್ಡಿದರವನ್ನು ನಿಗದಿಪಡಿಸಲಾಗಿದೆ ಎಂದರು.
