
ಕೊಣಾಜೆ: ಇಲ್ಲಿನ ಸಪ್ತಸ್ವರ ಕಲಾತಂಡದ ಮಾಜಿ ಪ್ರಧಾನ ಕಾರ್ಯದರ್ಶಿ, ಮೊಸರುಕುಡಿಕೆ ಉತ್ಸವ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ ಕಂಬ್ಳಪದವು ದೇವಿನಗರ ನಿವಾಸಿ ಗಂಗಾಧರ್ -ಯಶೋಧಾ ದಂಪತಿ ಪುತ್ರ , ಮೂಲತ: ಸುಳ್ಯ ತಾಲೂಕು ಕೊಲ್ಲರಮೂಲೆ ನಿವಾಸಿ ಅಭಿಲಾಷ್ (29) ಇನ್ನಿಲ್ಲವಾಗಿದ್ದಾರೆ.
ತಂದೆ ಗಂಗಾಧರ್ ಅವರು ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ಕೊಣಾಜೆ ಭಾಗದಲ್ಲಿ ಸೇವೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೊಣಾಜೆಯಲ್ಲಿ ಕುಟುಂಬ ವಾಸವಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಅಭಿಲಾಷ್ ಹರೇಕಳ ಶ್ರೀ ರಾಮಕೃಷ್ಣ ಹೈಸ್ಕೂಲಿನ ಹಳೇ ವಿದ್ಯಾರ್ಥಿಯಾಗಿದ್ದು, ಶಾಲಾ ಸಂದರ್ಭದಲ್ಲೇ ಸಕ್ರಿಯನಾಗಿ ವಿದ್ಯಾರ್ಥಿ ನಾಯಕನಾಗಿದ್ದರು. ಶಾಲಾ ದಿನಗಳಲ್ಲಿ ಯಕ್ಷಗಾನ, ನಾಟಕ, ಕಲೆಗಳಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದರು. ಕೊಣಾಜೆ, ಸುಳ್ಯ ಭಾಗದಲ್ಲಿ ಸಂಘ ಪರಿವಾರದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅಭಿಲಾಷ್ , ಸುಳ್ಯದಲ್ಲಿ ಫಾಚ್ರ್ಯೂನ್ ಯೂಟ್ಯೂಬ್ ಚಾನೆಲ್ ನಂತರ ಕೇಬಲ್ ಚಾನೆಲ್ ಆರಂಭಿಸಿದ್ದರು. 3 ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಅವರು ಒಂದೂವರೆ ವರ್ಷದಿಂದ ಸುಳ್ಯದ ಗಾಂಧಿನಗರದಲ್ಲಿ ಅಡಿಕೆ ವ್ಯಾಪಾರವನ್ನು ನಡೆಸುತ್ತಾ ಬಂದಿದ್ದರು. ಮೃತರ ಅಂತಿಮ ದರ್ಶನಕ್ಕೆ ಕೊಣಾಜೆ ಸಪ್ತಸ್ವರ ವಠಾರದಲ್ಲಿ ನ.13 ರ ಬೆಳಿಗ್ಗೆ 7 ಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಳಿಕ ಸುಳ್ಯದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಮೃತ ಅಭಿಲಾಷ್ ತಂದೆ, ತಾಯಿ, ಪತ್ನಿ, ಸಹೋದರಿ ಸೇರಿದಂತೆ ಸ್ನೇಹಿತರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರಿಗೆ ಮಾಜಿ ಸಂಸದ ನಳಿನ್ ಕಟೀಲ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಸಂಸದ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡರುಗಳಾದ ಸಂತೋಷ್ ರೈ ಬೋಳಿಯಾರ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಗದೀಶ್ ಆಳ್ವ ಕುವೆತ್ತಬೈಲ್, ಮುರಳಿ ಕೊಣಾಜೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.