
ದೇರಳಕಟ್ಟೆ : ನರೇಗಾ ಕಾಮಗಾರಿ ಅನುಷ್ಠಾನ ಮಾಡುವಲ್ಲಿ ಆರ್ಥಿಕವಾಗಿ ಏನಾದರೂ ಸಮಸ್ಯೆಯಾದಲ್ಲಿ ಎನ್‍ಆರ್‍ಎಲ್‍ಎಮ್ ಒಕ್ಕೂಟದಿಂದ ಸಾಲ ಪಡೆದು ಕಾಮಗಾರಿ ನಡೆಸಬೇಕಿದೆ. ನಂತರ ಅನುದಾನ ಬಿಡುಗಡೆಯಾದ ಕೂಡಲೇ ಮತ್ತೆ ಒಕ್ಕೂಟಕ್ಕೆ ಮರುಪಾವತಿ ಮಾಡಿ. ಅಷ್ಟೇ ಅಲ್ಲ ಈ ಬಾರಿ ಅತೀ ಹೆಚ್ಚು ಕಾಮಗಾರಿ ಬೇಡಿಕೆ ಸಂಗ್ರಹಿಸಿ ತಂದ ಅಭ್ಯರ್ಥಿಗೆ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಉಳ್ಳಾಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ತ್ ಎಮ್.ಎನ್ ಹೇಳಿದ್ದಾರೆ.
ಅವರು ಉಳ್ಳಾಲ ತಾಲೂಕು ಪಂಚಾಯತ್ ವ್ಯಾಪ್ತಿಯ ಕೃಷಿ ಸಖಿ- ಪಶು ಸಖಿಯರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಲೂಕು ಮಟ್ಟದ ಮಾಹಿತಿ ಕಾರ್ಯಗಾರಕ್ಕೆ ಇಂದು ಉಳ್ಳಾಲ ತಾಲೂಕು ಪಂಚಾಯತ್ ನ ಬೆಳ್ಮ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೃಷಿ ಸಖಿ -ಪಶು ಸಖಿಯರು ಹೋಗಿ ಮಾಹಿತಿ ನೀಡಿದಾಗ ಜನ ಉತ್ತಮವಾಗಿ ಸ್ಪಂಧಿಸುತ್ತಾರೆ. ಎಲ್ಲದಕ್ಕೂ ಮೊದಲು ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಾಗಬೇಕು. ಆಗ ಮಾತ್ರ ಯೋಜನೆಗಳ ಬಗ್ಗೆ ಇತರರಿಗೆ ತಿಳಿಸಲು ಸಾಧ್ಯ ಎಂದ ಅವರು, ಮುಂದಿನ ದಿನಗಳಲ್ಲಿ ನರೇಗಾ ಕರಪತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತಲುಪಿಸಿ ಅವರಿಂದ ಬೇಡಿಕೆಯನ್ನು ಸಂಗ್ರಹಿಸಿ ನೇರವಾಗಿ ತಾಲೂಕು ಪಂಚಾಯತ್ ಗೆ ಸಲ್ಲಿಸಿರಿ. ಉದ್ಯೋಗ ಖಾತರಿ ಯೋಜನೆಯು ಪ್ರಾರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ. ಇಂದಿಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅದೆಷ್ಟೋ ಕುಟುಂಬಗಳಿಗೆ ಸರಕಾರದ ಈ ಯೋಜನೆಯಿಂದ ಏನೆಲ್ಲಾ ಸವಲತ್ತು ಸಿಗುತ್ತಿವೆ ಅನ್ನುವ ವಿಚಾರವೇ ತಿಳಿದಿಲ್ಲ. ಹಾಗಾಗಿ ಕೃಷಿ ಸಖಿ ಮತ್ತು ಪಶು ಸಖಿಗಳಾದ ನೀವು ಗ್ರಾಮದ ಜನರೊಂದಿಗೆ ಹೆಚ್ಚು ನಿಕಟ ಸಂಪರ್ಕದಲ್ಲಿರುತ್ತೀರಾ. ಅಷ್ಟೇ ಅಲ್ಲ ನಿಮ್ಮ ಗ್ರಾಮದ ಜನರು ನಿಮ್ಮ ಕುಟುಂಬದವರಾಗಿರುತ್ತಾರೆ ಇಲ್ಲ ಸ್ನೇಹಿತರಾಗಿರುತ್ತಾರೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಿದ್ದು, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕೃಷಿ ಸಖಿ- ಹಾಗೂ ಪಶುಸಖಿಯರಿಗಿದ್ದ ಗೊಂದಲ ಸಂದೇಹಗಳಿಗೆ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವಿವರಣೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೆಂಕಟೇಶ್ ಪಿ., ಎನ್ ಆರ್ ಎಲ್ ಎಮ್ ಬ್ಲಾಕ್ ಮ್ಯಾನೇಜರ್ ಗಳಾದ ಪ್ರದೀಪ್ ಕಾಮತ್, ವಿಧೀಶ್ ಉಪಸ್ಥಿತರಿದ್ದರು.
ತಾಂತ್ರಿಕ ಸಂಯೋಜಕಿ ಭವ್ಯ ಎನ್ ವಂದಿಸಿದರು, ನಿಶ್ಮಿತ ಐಇಸಿ ಕಾರ್ಯಕ್ರಮ ನಿರೂಪಿಸಿದರು.
ಕರಪತ್ರ ಸಿದ್ದ : ಈ ಬಾರಿ ಕ್ರಿಯಾಯೋಜನೆಗಾಗಿ ಈಗಾಗಲೇ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಹಾಗೂ ಅರ್ಜಿಯನ್ನೊಳಗೊಂಡ ವಿಶೇಷ ಕರಪತ್ರವನ್ನು ಸಿದ್ಧಪಡಿಸಲಾಗಿದೆ. ಉಳ್ಳಾಲ ತಾಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿನ ಸಿಬ್ಬಂದಿಗಳು ನೇರವಾಗಿ ಮನೆ-ಮನೆ ಭೇಟಿ ನೀಡುವ ಮೂಲಕ ಕಾಮಗಾರಿ ಬೇಡಿಕೆಯನ್ನು ಪಡೆಯಲಾಗುತ್ತದೆ. ಇನ್ನು ಈ ಕರಪತ್ರದಲ್ಲಿ 2 ಪುಟಗಳಿದ್ದು, ಎರಡನೇ ಪುಟದಲ್ಲಿ ಅರ್ಜಿಯನ್ನು ಲಗತ್ತಿಸಲಾಗಿದೆ. ಹಾಗಾಗಿ ಗ್ರಾಮಸ್ಥರು ನೇರವಾಗಿ ಮೊದಲ ಪುಟದಲ್ಲಿನ ಕಾಮಗಾರಿಗಳ ಲಿಸ್ಟ್ ನೋಡಿ ತಮಗೆ ಬೇಕಾದಂತಹ ಕಾಮಗಾರಿಗಳನ್ನು ಈ ಅರ್ಜಿಯಲ್ಲೇ ಟಿಕ್ ಮಾಡಿ ನೀಡುವಂತಹದು. ಹಾಗೂ ಅಗತ್ಯವಿರುವ ದಾಖಲೆಗಳನ್ನು ಪಂಚಾಯತ್ ಸಿಬ್ಬಂದಿಯು ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸುವ ಮೂಲಕ ಸಂಗ್ರಹಿಸುವಂತದ್ದು. ಹೀಗೆ ಮಾಡುವುದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿ ಬೇಡಿಕೆಯನ್ನು ನೀಡುವ ನಿರೀಕ್ಷೆ ಇದೆ.