
ತೊಕ್ಕೊಟ್ಟು: ಕಳೆದ 30 ಕ್ಕೂ ಅಧಿಕ ವರ್ಷಗಳಿಂದ ಸಿಟಿ ಬಸ್ ನಲ್ಲಿ ಚಾಲಕರಾಗಿ ಇದೀಗ ಕೆಲ ವರ್ಷಗಳಿಂದ ಟೂರಿಸ್ಟ್ ಬಸ್ಸಿನಲ್ಲಿ ದುಡಿಯುತ್ತಿದ್ದ ಎಲ್ಲರಿಗೂ ಚಿರಪರಿಚಿತ ನೇರ ಮಾತುಗಳನ್ನಾಡುತ್ತಿದ್ದ ಪ್ರಯಾಣಿಕರ ಅಚ್ಚುಮೆಚ್ಚಿನ , ಸ್ಟೇಟ್ ಬ್ಯಾಂಕ್ -ಕೊಣಾಜೆ ನಡುವೆ ಸಂಚರಿಸುತ್ತಿದ್ದ ಸುಷ್ಮಿತಾ ಟ್ರಾವೆಲ್ಸ್ ಸಿಟಿ ಬಸ್ ನ ಚಾಲಕ ಹೆರಾಲ್ಡ್ ಡಿಸೋಜ (ಹ್ಯಾರಿ ಮಾಮ)(56) ಇಂದು ನಿಧನ ಹೊಂದಿದ್ದಾರೆ.
ಶುಕ್ರವಾರದವರೆಗೂ ಕರ್ತವ್ಯ ನಿರ್ವಹಿಸಿದ್ದ ಹ್ಯಾರಿ ಅವರು ಅಸೌಖ್ಯದಿಂದಾಗಿ ಇಂದು ನಿಧನಹೊಂದಿದ್ದಾರೆ. ಸ್ಟೇಟ್ ಬ್ಯಾಂಕ್ -ಕೊಣಾಜೆ ಚಲಿಸುತ್ತಿದ್ದ 51 ನಂಬರಿನ ನವಭಾರತ್, ಕ್ರಿಸ್ತರಾಜ್, ಫ್ರೀಡಾ ಟ್ರಾವೆಲ್ಸ್ ನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಸುಷ್ಮಿತಾ ಟ್ರಾವೆಲ್ಸ್ ಬಸ್ಸಿನಲ್ಲಿ ಸುದೀರ್ಘವಾಗಿ 20 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಬಸ್ಸಿನಲ್ಲಿ ಬರುವ ಬಹುತೇಕ ಪ್ರಯಾಣಿಕರ ಪರಿಚಯವಿದ್ದ ಅವರು ನೇರ ಮಾತುಗಳಿಂದ ಎಲ್ಲರ ಗಮನಸೆಳೆದಿದ್ದರು. ಸುಷ್ಮಿತಾ ಟ್ರಾವೆಲ್ಸ್ ನಲ್ಲಿ ಚಾಲಕರಾಗಿ ಹೆರಾಲ್ಡ್ ಅವರಿದ್ದರೆ ನಿರ್ವಾಹಕರಾಗಿ ನಾರಾಯಣನ್ನ ನಿರಂತರವಾಗಿರುತ್ತಿದ್ದರು. ಇಬ್ಬರ ಜೋಡಿಯ ಪರಿಚಯವಿಲ್ಲದ ಕೊಣಾಜೆ-ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1995 ರಿಂದ ಕಲಿತ ವಿದ್ಯಾರ್ಥಿಗಳು ಬಹಳ ಕಡಿಮೆ. ಅಲ್ಲದೆ ಕರ್ತವ್ಯದುದ್ದಕ್ಕೂ ಪ್ರಯಾಣಿಕರಿಂದ ಪ್ರೀತಿಯನ್ನೇ ಪಡೆದುಕೊಂಡ ವ್ಯಕ್ತಿಯ ದೂರುಗಳೇ ಕಡಿಮೆಯಿತ್ತು. ಕೊರೊನಾ ನಂತರ ಸಿಟಿ ಬಸ್ ಸೇವೆಯನ್ನು ಮೊಟಕುಗೊಳಿಸಿ ಯೆನೆಪೋಯ ಸಂಸ್ಥೆ ನಂತರ ಟೂರಿಸ್ಟ್ ಬಸ್ಸಿನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳೊಂದಿಗೂ ಅನ್ಯೋನ್ಯತೆಯಿಂದ ಇದ್ದ ಅವರು ತಪ್ಪಿದಾಗ ಬುದ್ಧಿಮಾತುಗಳನ್ನು ಹೇಳಿ ಇತರೆ ಚಾಲಕರಿಗೂ ಮಾದರಿಯಾಗಿದ್ದರು. ತೊಕ್ಕೊಟ್ಟು ರಿಕ್ಷಾ ಪಾರ್ಕ್ ಸೇರಿದಂತೆ ಮಂಗಳೂರಿನ ಬಸ್ ಚಾಲಕರೆಲ್ಲರಿಗೂ ಚಿರಪರಿಚಿತರಾಗಿದ್ದರು. ಅವಿವಾಹಿತರಾಗಿದ್ದ ಹೆರಾಲ್ಡ್, ಅಪಾರ ಬಂಧುಮಿತ್ರರು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.ಮೃತರ ಅಂತಿಮ ಸಂಸ್ಕಾರ ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸೆ.10ರ 11 ಗಂಟೆಗೆ ಜರಗಲಿದೆ.