ಕುತ್ತಾರು: ಬೈಕ್ , ರಿಕ್ಷಾ ಹಾಗೂ ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಮೆಸ್ಕಾಂ ಎದುರುಗಡೆ ಗುರುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಉಳ್ಳಾಲ ನಿವಾಸಿ ಗುರುಪ್ರಸಾದ್ (25) ಗಾಯಗೊಂಡವರು. ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಯತ್ತ ನಾರಾಯಣ ರಾವ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ, ಹಿಂಬದಿಯಲ್ಲಿದ್ದ ಬೈಕ್ ಅದನ್ನು ಓವರ್ ಟೇಕ್ ಮಾಡುತ್ತಿದ್ದಂತೆ ಎದುರಿನಿಂದ ಬಂದ ಸ್ವಿಫ್ಟ್ ಕಾರು ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಹಿಂಬದಿಯಲ್ಲಿದ್ದ ರಿಕ್ಷಾಗೂ ಢಿಕ್ಕಿ ಹೊಡೆದಿದೆ. ಬೈಕ್ ನ ಎದುರು ಮತ್ತು ಹಿಂಭಾಗ ಎರಡೂ ಕಡೆಗಳಲ್ಲಿ ನುಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
