
ಉಳ್ಳಾಲ: ತಲಪಾಡಿಯ ಕೆ.ಆರ್ ಕನಕದಾಸ್ ಅವರಿಗೆ ಸೇರಿದ ಸ್ತ್ರೀ ಶಕ್ತಿ ಲಾಟರಿ ಏಜೆನ್ಸಿಯಿಂದ ಪಡೆದ ಟಿಕೇಟಿಗೆ ಓಣಂ ಬಂಪರ್ ಡ್ರಾ ಇದರ ಎರಡನೇ ಬಹುಮಾನ ರೂ. 1 ಕೋಟಿ ಒಲಿದಿದೆ. ಲಾಟರಿ ಒಂಟಿ ಮಹಿಳೆಗೆ ಒಲಿದಿರುವುದರಿಂದ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು ಲಾಟರಿ ಅಂಗಡಿ ಮಾಲೀಕ ಕನಕದಾಸ್ ತಿಳಿಸಿದ್ದಾರೆ. ಇದು ಕನಕದಾಸ್ ಅವರ ಅಂಗಡಿಯಿಂದ ಟಿಕೇಟ್ ಪಡೆದ 6 ನೇಯ ಬಂಪರ್ ಪ್ರಶಸ್ತಿಯಾಗಿದೆ.
ಕಳೆದ ೩೦ ವರ್ಷಗಳಲ್ಲಿ ಕನಕದಾಸ್ ಅವರ ಅಂಗಡಿಯಿಂದ ಟಿಕೇಟ್ ಪಡೆದ 6 ಮಂದಿ ಲಾಟರಿ ಗೆಲುವು ಸಾಧಿಸಿದ್ದು, 4 ಮಂದಿಗೆ ರೂ.1 ಕೋಟಿ ಒಲಿದಿದ್ದರೆ, 75 ಲಕ್ಷ ರೂ. ಮತ್ತು 80 ಲಕ್ಷ ರೂ. ಇಬ್ಬರಿಗೆ ಒಲಿದಿದೆ. 2024ರ ಲಾಟರಿ ಪಡೆದ ಮಹಿಳೆ ಸ್ತ್ರೀ ಶಕ್ತಿ ಲಾಟರಿ ಅಂಗಡಿಯ ಸಿಬ್ಬಂದಿ ಗಾಯತ್ರಿ ಎಂಬವರಿಂದ ಟಿಕೇಟನ್ನು ಪಡೆದುಕೊಂಡಿದ್ದರು. ಅದಕ್ಕಾಗಿ ಲಾಟರಿ ಹೊಡೆಯುತ್ತಲೇ ಮಹಿಳೆ ಅಂಗಡಿ ಸಿಬ್ಬಂದಿ ಗಾಯತ್ರಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಹಲವು ವರ್ಷಗಳ ಹಿಂದೆ ಒಂದು ಅಂಗಡಿ, ಒಂದು ಲುಂಗಿಯಲ್ಲಿ ಬಂದವ ಇಂದು ಮೂರು ಅಂಗಡಿಗಳನ್ನು ಸ್ಥಾಪಿಸುವುದರ ಜೊತೆಗೆ 7 ಮಂದಿಗೆ ಕೆಲಸವನ್ನು ನೀಡಿದ್ದಾರೆ. ತಲಪಾಡಿಯ ಸರ್ವಧರ್ಮದ ಜನರ ಬೆಂಬಲ ಮತ್ತು ಸಹಕಾರದಿಂದ ಯಶಸ್ವೀ ಉದ್ಯಮ ಸ್ಥಾಪಿಸಲು ಸಾಧ್ಯವಾಗಿದೆ. ಯಾರೂ ಈವರೆಗೆ ಸಮಸ್ಯೆ ನೀಡದೇ ವ್ಯವಹಾರ ಸುಗಮವಾಗಿ ನಡೆಸಲು ಸಾಧ್ಯವಾಗಿದೆ. ಅದಕ್ಕೆ ತಕ್ಕುದಾಗಿ ಅಂಗಡಿಯಿಂದ ಲಾಟರಿ ಪಡೆದ ಬಹುತೇಕ ಮಂದಿಯ ಹಾರೈಕೆ, ಹಾಗೂ ಅವರಿಗೆ ಒದಗಿಸಿರುವ ಲಾಟರಿಯಿಂದ ಹೆಮ್ಮೆಯಿದೆ. ಲಾಟರಿ ಗಳಿಸಿದ ಪ್ರತಿಯೊಬ್ಬರಿಗೂ ಮಂಜೇಶ್ವರ ಸರ್ವಿಸ್ ಕಾಪರೇಟಿವ್ ಬ್ಯಾಂಕ್ ಮುಖೇನ ವಿಡ್ರಾ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಇದಕ್ಕೆ ಸಹಕರಿಸಿದ ಬ್ಯಾಂಕಿನ ಎಲ್ಲಾ ಸಿಬ್ಬಂದಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಅಂಗಡಿಯ ಹಿಂದಿನ ಕಟ್ಟಡ ಮಾಲೀಕರು ರವೀಂದ್ರ ಶೆಟ್ಟಿ ಹಾಗೂ ಈಗಿನ ಮಾಲೀಕರು ಬಹಳಷ್ಟು ಕಾಳಜಿಯನ್ನು ವಹಿಸಿರುವರು. ಹಿಂದೆ ಬೇರೆ ರಾಜ್ಯದವರಿಗೆ ಲಾಟರಿ ಕೊಡದಂತೆ ಕಾನೂನು ರಚಿಸಲಾಗಿತ್ತು. ಆದರೆ ಉಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ, ಲಾಟರಿ ಎಜೆಂಟರ ಸಭೆಗಳಲ್ಲಿ ಮನವಿ ಹಾಗೂ ಧ್ವನಿ ಎತ್ತಿದ ಪರಿಣಾಮವಾಗಿ ಇದೀಗ ಇತರೆ ರಾಜ್ಯದಲ್ಲಿ ಜನರಿಗೂ ಲಾಟರಿ ಸಿಗುವಂತೆ ಆಗಿದೆ. ಸರಕಾರದ ಕಾನೂನುಗಳನ್ನು ಪಾಲಿಸಿಕೊಂಡು, ಪಾಲಕ್ಕಾಡ್ ಡಿವಿಷನ್ನಿನ ಲಾಟರಿಗಳನ್ನಷ್ಟೇ ಮಾರಾಟ ಮಾಡುತ್ತಿದ್ದೇನೆ ಅನ್ನುತ್ತಾರೆ ಅಂಗಡಿ ಮಾಲೀಕ ಕನಕದಾಸ್.
`ತಾನು ನೀಡಿದ ಟಿಕೇಟಿಗೆ ಕೋಟಿ ಬಂತೆಂದು ಮಹಿಳೆ ಹೇಳಿದಾಗ ಇನ್ನಿಲ್ಲದ ಖುಷಿ ತನಗಾಯಿತು. ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಕೆ.ಆರ್ ಕನಕದಾಸ್ ಅವರ ಅಂಗಡಿಗೆ ಹಲವು ಬಾರಿ ಪ್ರಶಸ್ತಿ ಲಭಿಸಿದೆ. ಅಂಗಡಿ ಮಾಲೀಕರು ತುಂಬಾ ಒಳ್ಳೆಯವರು . ಇತರೆ ಅಂಗಡಿ, ಹೊಟೇಲುಗಳಲ್ಲಿ ಕ್ಯಾಷರ್ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಆದರೆ ಇದೀಗ ಹಲವು ವರ್ಷಗಳಿಂದ ಕನಕದಾಸ್ ಅವರ ಬಳಿಯಿದ್ದೇನೆ.
ಗಾಯತ್ರಿ
ಸಿಬ್ಬಂದಿ
`ವ್ಯವಹಾರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಇದೀಗ ಸಾಮಾಜಕಿವಾಗಿಯೂ ಕನಕ ದಾಸ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಿಕ್ಷಾ ಚಾಲಕರ ಸಮಸ್ಯೆಗೂ ಸ್ಪಂಧಿಸುವ ಅವರು ಎಲ್ಲರಿಗೂ ಅಚ್ಚುಮೆಚ್ಚಿನವರು. ಅವರ ಅಂಗಡಿಯಿಂದ ಪಡದ ಲಾಟರಿಗೆ ಸಣ್ಣ ಬಹುಮಾನವಾದರೂ ಬರುತ್ತದೆ. ಹಿಂದೆ ರೂ.5 ,000 ಬಹುಮಾನ ಸ್ನೇಹಿತರಿಗೆ ಸಿಕ್ಕಿತ್ತು. ಕಳೆದ 30 ವರ್ಷದಿಂದ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ಶ್ರಮಜೀವಿಯಾಗಿದ್ದಾರೆ.’
ಕಮಲಾಕ್ಷ
ರಿಕ್ಷಾ ಚಾಲಕ
`ರಸ್ತೆಯಲ್ಲೇ ಟಿಕೇಟ್ ಮಾರುತ್ತಿದ್ದರು. ಎರಡು ಬಾರಿ ಕೋಟಿ ಬಹುಮಾನ ಬಂದಾಗ ಎರಡು ಅಂಗಡಿಗಳನ್ನು ಹಾಕಿದರು. ಇದರಿಂದಾಗಿ ಸ್ಥಳೀಯ ಹಲವರಿಗೆ ಉದ್ಯೋಗವೂ ದೊರೆತಿರುವುದು ಸಂತೋಷ ತಂದಿದೆ.
ಸತೀಶ್
ರಿಕ್ಷಾ ಚಾಲಕ
`ಎಲ್ಲಾ ಧರ್ಮೀಯರ ಜೊತೆಗೆ ಅನ್ಯೋನ್ಯತೆಯಿಂದ ಬಾಳಿದವರು ಕನಕದಾಸ್. ಎಲ್ಲರಿಗೂ ಸಹಾಯವಾಗುತ್ತಾ ವ್ಯವಹಾರವನ್ನು ನಡೆಸುತ್ತಿರುವುದರಿಂದ ಅದೃಷ್ಟಗಳು ಅವರ ಗ್ರಾಹಕರಿಗೆ ಒಲಿದುಬರುತ್ತಿದೆ. ಹಲವು ರಿಕ್ಷಾ ಚಾಲಕರಿಗೂ ಸಣ್ಣ ಪ್ರಮಾಣದ ಟಿಕೇಟ್ ಒಲಿದಿದೆ. ಹಾಗಾಗಿ ಬಹುತೇಕ ಚಾಲಕರು ಈಗಲೂ ಅವರ ಗ್ರಾಹಕರಾಗಿದ್ದಾರೆ.
ಬಾಷಿತ್
ರಿಕ್ಷಾ ಚಾಲಕ
`ಅವರಲ್ಲಿ ಇರುವುದು ಪಾಲಕ್ಕಾಡ್ ಟಿಕೇಟ್ ಗಳು ಮಾತ್ರ. ಇತರರ ಜೊತೆಗೆ ಇರುವುದು ಕಣ್ಣೂರು ವಿಭಾಗದ್ದು. ಹೆಚ್ಚಾಗಿ ಪಾಲ್ಗಾಟ್ ಟಿಕೇಟುಗಳಿಗೆ ಲಾಟರಿ ಒಲಿಯುತ್ತಿರುವುದರಿಂದ ಕನಕದಾಸ್ ಅವರ ಗ್ರಾಹಕರಿಗೆ ಹೆಚ್ಚಾಗಿ ಲಭಿಸಿದೆ. ಮೊದ ಲು
ಸಣ್ಣ ರೂಮನ್ನು ಪಡೆದು ವ್ಯವಹಾರ ಆರಂಭಿಸಿದರು. ಇದೀಗ ಮೂರು ಅಂಗಡಿಗಳನ್ನು ಸ್ಥಾಪಿಸಿದ್ದಾರೆ. ತಾನು ಪಡೆದ ಟಿಕೇಟ್ ಗಳಲ್ಲೂ ಸಣ್ಣ ಬಹುಮಾನಗಳು ಬರುತ್ತಲಿದೆ. ಮುಂದೊಂದು ದಿನ ಅವರ ಅಂಗಡಿಯಿಂದ ಟಿಕೇಟ್ ಪಡೆದು ಕೋಟಿ ಗಳಿಸುವ ಕನಸ್ಸು ಇದೆ.
ಕುಂಞಲಿಕುಟ್ಟಿ
ಅಂಗಡಿ ಮಾಲೀಕ
ತಲಪಾಡಿ