ಉಳ್ಳಾಲ: ಇಲ್ಲಿನ ನಿವಾಸಿ ಅಬ್ದುಲ್ ರಹೀಂ ಎಂಬವರ ಪುತ್ರ ಮೊಹಮ್ಮದ್ ಮಾಝೀನ್ (32) ಎಂಬವರ ಸಾವು ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸಿರುವುದಾಗಿ ಆರೋಪಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದ್ದಾರೆ.
ಉಳ್ಳಾಲ ನಿವಾಸಿ ಮೊಹಮ್ಮದ್ ಮಾಝೀನ್ (32) ಎದೆಯಭಾಗದಲ್ಲಿರುವ ಸಣ್ಣ ಗುಳ್ಳೆಯನ್ನು ತೆಗೆಯಲೆಂದು ಕಂಕನಾಡಿಯ ಫೋಂಟ್ ಕಾಸ್ಮೆಟಿಕ್ ಸರ್ಜರಿ ಎಂಬ ಖಾಸಗಿ ಕ್ಲಿನಿಕ್ ನಲ್ಲಿ ತೆರಳಿದ್ದರು. ಅಲ್ಲಿ ಪರೀಕ್ಷಿಸುವ ಸಂದರ್ಭದಲ್ಲಿ ವೈದ್ಯರು ಪ್ರಜ್ಞೆ ತಪ್ಪಿಸಲು ನೀಡಿರುವ ಅನೆಸ್ತೇಷಿಯಾದಿಂದಾಗಿ ಅಕಾಲಿಕ ಮರಣ ಹೊಂದಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪವನ್ನು ಮನೆಮಂದಿ ಮಾಡಿದ್ದಾರೆ. ಅಲ್ಲದೆ ಮೃತ ಯುವಕನ ತಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಪುತ್ರ ಕೂಡಾ ತೀರಿಕೊಂಡಿರುವುದರಿಂದ ದಿಕ್ಕು ತೋಚದಂತಾಗಿದ್ದಾರೆ. ಪ್ರಕರಣ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಮೃತ ಮಾಝೀನ್ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಬೋಳಿಯಾರ್ ಆಗ್ರಹಿಸಿದ್ದಾರೆ.
