Site icon Ullalavani

ನಮ್ಮ ತುಳುನಾಡ್ ಟ್ರಸ್ಟ್ಗೆ ಕರ್ಣಾಟಕ ಬ್ಯಾಂಕ್ ನಿಂದ ಇಕೋ ದೇಣಿಗೆ

ಉಳ್ಳಾಲ:  ನಮ್ಮ ತುಳುನಾಡ್ ಟ್ರಸ್ಟ್ ಇವರ ಕೊಪ್ಪರಿಗೆ  ಯೋಜನೆಗೆ ಕರ್ಣಾಟಕ ಬ್ಯಾಂಕ್ ದೇಣಿಗೆಯಾಗಿ ನೀಡಿದ  ಇಕೋ ಕಾರನ್ನು ತೊಕ್ಕೊಟ್ಟು ಕಾಪಿಕಾಡಿನ ಭಾರತ್ ಅಟೊಮೊಬೈಲ್ಸ್ ಷೋರೂಮಿನಲ್ಲಿ   ಹಸ್ತಾಂತರಿಸಲಾಯಿತು.  

ವಾಹನದ ಕೀಲಿಕೈ ಪಡೆದುಕೊಂಡ ನಮ್ಮ ತುಳುನಾಡು ಟ್ರಸ್ಟ್ ಮಂಗಳೂರು ಇದರ ಗೌರವ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,
ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ ,ಭಾಷಾವಾರು ಪ್ರಾಂತ್ಯ ಆಗುವ ಸಂದರ್ಭ   ಮಾನ್ಯತೆ ಸಿಗದಂತಾಯಿತು. ತಾಯಿ ಭಾಷೆಯನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ. ಇದೇ ಉದ್ದೇಶದಿಂದ ಭಾಷೆಯನ್ನು ಉಳಿಸುವ ಸಲುವಾಗಿ ಆರಂಭಗೊAಡಿರುವ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಮೇಯರ್ ಸುಧೀರ್ ಶೆಟ್ಟಿ ಕಂಪ್ಯೂಟರ್ ನೀಡಿದ್ದರೆ, ಕರ್ನಾಟಕ ಬ್ಯಾಂಕ್ ಕಾರನ್ನು ಕೊಡುಗೆಯಾಗಿ ನೀಡಿದೆ.  ತುಳುವಿಗೆ ಲಿಪಿ ಇದೆ ಅನ್ನುವುದು ಹಲವರಿಗೆ ಗೊತ್ತಿಲ್ಲ. ಮಲಯಾಳಂ, ತಮಿಳು ಎಲ್ಲಾ ಲಿಪಿಗಳು ತುಳು ಲಿಪಿ ನಂತರವೇ ರಚನೆಯಾಗಿರುವುದು ದಾಖಲೆಗಳು ಹೇಳುತ್ತವೆ.  ಉಡುಪಿ ಮಠದ ಸ್ವಾಮಿಗಳು ತುಳು ಲಿಪಿಯಲ್ಲೇ ಸಹಿಗಳನ್ನು ಹಾಕುತ್ತಿದ್ದರು. ಇತ್ತೀಚೆಗೆ ತುಳು ಭಾಷೆ ಮಾತನಾಡುವುದೇ ಕಡಿಮೆಯಾಗುತ್ತಿದೆ. ಮಕ್ಕಳಿಗೆ ತುಳು ಭಾಷೆ ಹಾಗೂ ಅದರ ಹಿನ್ನೆಲೆಯನ್ನು ತಿಳಿಸುವ ಕಾರ್ಯಗಳಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಚಾರ ಕಾರ್ಯಕ್ಕಾಗಿ ತಿರುಗಾಡಲು ವಾಹನದ ವ್ಯವಸ್ಥೆ ಅಗತ್ಯವಿತ್ತು. ಅದನ್ನು ಕರ್ನಾಟಕ ಬ್ಯಾಂಕ್ ಪೂರೈಸಿರುವುದು ಅಭಿನಂದನೀಯ. ಈ ಮೂಲಕ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಬಲವೂ ಸಿಗಲಿದೆ. ಹೋರಾಟದ ಮೂಲಕ ತುಳು ರಾಜ್ಯವನ್ನು ರಚಿಸುವ ಕನಸ್ಸಿನಲ್ಲಿ ಎಲ್ಲರಿದ್ದೇವೆ ಎಂದರು.

ಸ್ಥಾಪಕ ಅಧ್ಯಕ್ಷ ಸುಧಾಕರ್ ಶೆಟ್ಟಿ ಉಳ್ಳಾಲ್ ಮಾತನಾಡಿ,   ತುಳುವರಿಗೆ ಆದಷ್ಟು ಬೇಗ ಶುಭಸುದ್ಧಿ ಬರಲಿದ್ದು, ತುಳು ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗುವ ಪ್ರಕ್ರಿಯೆಗಳು ಕೊನೆಯ ಹಂತದಲ್ಲಿದೆ. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಎಲ್ಲಾ ರೀತಿಯ ಪ್ರಕ್ರಿಯೆಗಳು ವೇಗವನ್ನು ಪಡೆದುಕೊಂಡಿದೆ.  ಸಂವಿಧಾನದ ಪಟ್ಟಿಯಲ್ಲಿ ೧೨೨ ಭಾಷೆಗಳಿದ್ದು, ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಹೋರಾಟಗಳು ಮುಂದುವರಿದಿದೆ. ಸಮಾಜದ ಎಲ್ಲಾ ವರ್ಗಗಳ ಬೆಂಬಲ ಅಗತ್ಯತೆ ಇದೆ.  ಸಂಘಟನೆ ಹಮ್ಮಿಕೊಂಡಿರುವ   ಕೊಪ್ಪರಿಗೆ ಪ್ರಾಜೆಕ್ಟ್ ಗಾಗಿ  ಕಾರನ್ನು ಉಪಯೋಗಿಸಲಿದ್ದೇವೆ.  ಕೊಪ್ಪರಿಗೆ ಯೋಜನೆಯಡಿ  ೧೮ ಕ್ಷೇತ್ರಗಳು ಹಾಗೂ ಅದರ ಒಳಗೆ  ೧೭ ಒಳವಿಭಾಗಗಳು ಇವೆ. ಅಲ್ಲಿ ಹೋಗಿ  ತುಳು ಭಾಷೆಯ ಕುರಿತು ಪ್ರಚಾರಗಳನ್ನು ಕೈಗೊಳ್ಳಲಿದ್ದೇವೆ. ತುಳು ಭಾಷೆಯ ಲಿಪಿ, ಸಂಸ್ಕೃತಿ, ತಾಡೆವಾಲೆಗಳು, ಸಾಹಿತ್ಯಗಳು, ಆಯುರ್ವೇದ, ತಂತ್ರಗಳು, ಜ್ಯೋತಿಷ್ಯಗಳು , ಗ್ರಂಥಗಳು, ಕುಲಕಸುಬುಗಳ ವಿಚಾರಧಾರೆಗಳು ಅನೇಕ ಇವೆ. ಅವೆಲ್ಲವೂ ಹೊರಜಗತ್ತಿಗೆ ಬಾರದೇ ಕೇವಲ ಒಳಗೆಯೇ ಉಳಿದಿವೆ. ಹಲವೆಡೆ ದಸರಾ ಸಂದರ್ಭ ಹೊರತೆಗೆದು ಪೂಜೆ ಮಾಡಿ ಒಳಗೆ ಇರಿಸುವ ಕಾರ್ಯಗಳಷ್ಟೇ ಆಗುತ್ತಿದೆ.   ಈ ಕುರಿತ ಅಧ್ಯಯನ, ಸಂಶೋಧನೆಗಳನ್ನು ನಡೆಸುವ ಉದ್ದೇಶದಿಂದ ಕೊಪ್ಪರಿಗೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ತರಬೇತಿ ಕೇಂದ್ರಗಳು ಆರಂಭವಾಗಬೇಕು ಅನ್ನುವ ಉದ್ದೇಶ ಸಂಘಟನೆಯದ್ದಾಗಿರುತ್ತದೆ. ಉದ್ಯಮಿಗಳು, ದಾನಿಗಳು ಸಹಕರಿಸಿದಲ್ಲಿ ಇನ್ನಷ್ಟು ವೇಗವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದರು.

ಕರ್ಣಾಟಕ ಬ್ಯಾಂಕ್ ತೊಕ್ಕೊಟ್ಟು ಶಾಖಾ ಪ್ರಬಂಧಕ ದೀಪಕ್ ಶೆಣೈ ಮಾತನಾಡಿ, ೧೦೧ ನೇ ವರ್ಷಕ್ಕೆ ಪಾದಾರ್ಪಣೆಗೊಳಿಸಿರುವ ಕರ್ನಾಟಕ ಬ್ಯಾಂಕ್ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸುತ್ತಿದೆ. ಸಿಎಸ್ ಆರ್ ಕಾನೂನು ಬರುವ ಮುನ್ನವೇ ಕರ್ನಾಟಕ ಬ್ಯಾಂಕ್  ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಕೈಜೋಡಿಸಿಯೇ ಮುಂದುವರಿದಿದೆ.  ಕರಾವಳಿಯಲ್ಲಿ ಹುಟ್ಟಿರುವ  ಅನೇಕ ಬ್ಯಾಂಕುಗಳಲ್ಲಿ ಇದೀಗ ಕರ್ನಾಟಕ ಮತ್ತು  ಕೆನರಾ ಬ್ಯಾಂಕ್ ಮಾತ್ರ ಕಾರ್ಯಚಟುವಟಿಕೆಯನ್ನು ನಡೆಸುತ್ತಿವೆ. ಈ ನಿಟ್ಟಿನಲ್ಲಿ ತುಳುನಾಡಿನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ  ಬ್ಯಾಂಕ್ ನಿಂದ ಸಿಗಲಿದೆ ಎಂದರು.
  ಈ ಸಂದರ್ಭ ಅಧ್ಯಕ್ಷ ರೋಹಿತಾಶ್ವ,  ಕಾರ್ಯದರ್ಶಿ ಹಾಗೂ ಟ್ರಸ್ಟೀ ರಾಜೇಶ್ ಉಳ್ಳಾಲ್, ಪ್ರಧಾನ ಕರ‍್ಯದರ್ಶಿ ರೂಪೇಶ್ ರೈ ಉಪಸ್ಥಿತರಿದ್ದರು

Exit mobile version