ಉಳ್ಳಾಲ: ಸಣ್ಣ ಮಟ್ಟದ ಬದಲಾವಣೆಯೇ ಆಗಲಿ ಆ ಪ್ರಕ್ರಿಯೆಯಲ್ಲಿ ನಾವು ನಮ್ಮನ್ನ ಸಕ್ರಿಯವಾಗಿ ತೊಡಗಿಸಬೇಕು.ಸಮಾಜವು ಒಟ್ಟಾದರೆ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನ ನಡೆಸಬಹುದೆಂಬುದಕ್ಕೆ ಮುನ್ನೂರಿನಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮುಕ್ತಿಧಾಮವೇ ನಿದರ್ಶನವಾಗಿದೆ ಎಂದು ಸಂಸದ ಕ್ಯಾಪ್ಟನ್.ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ಮುನ್ನೂರು ಹಿಂದೂ ಮುಕ್ತಿಧಾಮ ಸಮಿತಿ ಟ್ರಸ್ಟ್ ಮತ್ತು ಮುನ್ನೂರು ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಭಂಡಾರ ಬೈಲಿನಲ್ಲಿ ನಿರ್ಮಿಸಲಾದ ಹಿಂದೂ ಮುಕ್ತಿಧಾಮವನ್ನು ಭಾನುವಾರದಂದು ಲೋಕಾರ್ಪಣೆಗೈದು ಅವರು ಮಾತನಾಡಿದರು.ಸಮಾಜವೇ ಒಟ್ಟು ಸೇರಿ ಮಾಡುವ ಇಂತಹ ಕಾರ್ಯಗಳು ಬಹಳ ಅರ್ಥಪೂರ್ಣವಾಗಿದೆ.ಅಸ್ಪ್ರಶ್ಯತೆಯು ಹೋಗಲಾಡಿದ್ದರೂ ,ಹಿಂದೂ ಸಮಾಜದಲ್ಲಿ ಶೈಕ್ಷಣಿಕ,ಸಾಮಾಜಿಕವಾಗಿ ಈಗಲೂ ಸಮಾನತೆ ಇದೆಯೇ ಎಂದು ಅವಲೋಕಿಸಬೇಕು.ಶೋಷಿತರನ್ನ ಆರ್ಥಿಕವಾಗಿ,ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ನಡೆಸಬೇಕು.ಬಲು ಮುಖ್ಯವಾಗಿ ನಮ್ಮಲ್ಲಿರುವ ಉಚ್ಚ,ನೀಚನೆಂಬ ಮಾನಸಿಕತೆಯನ್ನು ಹೋಗಲಾಡಿಸಬೇಕು.ಹುಟ್ಟಿದ ವ್ಯಕ್ತಿ ಮರಣ ಹೊಂದಲೇ ಬೇಕು.ಮರಣಾ ನಂತರ ಮೃತದೇಹಗಳನ್ನ ಮುನ್ನೂರಿನ ಮುಕ್ತಿಧಾಮದಲ್ಲಿ ಅತ್ಯಂತ ವ್ಯವಸ್ಥಿತವಾಗಿ,ಗೌರವದಿಂದ ಅಂತ್ಯ ಸಂಸ್ಕಾರ ನಡೆಸುವಂತಾಗಲಿ ಎಂದರು.
ಮುಕ್ತಿಧಾಮದ ಆವರಣದಲ್ಲಿ ನಿರ್ಮಿಸಲಾಗಿರುವ ಶಿವನ ಮೂರ್ತಿ,ಸತ್ಯಹರಿಶ್ಚಂದ್ರನ ಮೂರ್ತಿಯನ್ನು ಸಂಸದ ಬ್ರಿಜೇಶ್ ಚೌಟ ಅನಾವರಣಗೊಳಿಸಿದರು.ಮುಕ್ತಿಧಾಮದ ಕಚೇರಿ,ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಅತಿಥಿಗಳು ಉದ್ಘಾಟಿಸಿದರು.
*ಸನ್ಮಾನ,ಅಭಿನಂದನೆ**
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡ ಕ್ಯಾ.ಬ್ರಿಜೇಶ್ ಚೌಟ ಅವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಮುಕ್ತಿಧಾಮ ನಿರ್ಮಾಣಕ್ಕೆ ಶ್ರಮಿಸಿದ ಹಿಂದೂ ಮುಕ್ತಿಧಾಮ ಟ್ರಸ್ಟ್ ನ ಅಧ್ಯಕ್ಷರಾದ ಲೋಕನಾಥ ಮಜಲ್ ತೋಟ,ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್ ಅಡ್ಯಂತಾಯ, ಶಿವನ ಮೂರ್ತಿಯನ್ನು ನೀಡಿದ ಪ್ರದೀಪ್ ಶೆಟ್ಟಿ ಕುತ್ತಾರು ಬೆರಿಕೆ ಮತ್ತು ಕಿರಣ್ ಅಡ್ಯಂತಾಯ, ಸತ್ಯ ಹರಿಶ್ಚಂದ್ರನ ಮೂರ್ತಿ ಒದಗಿಸಿದ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್, ಬಸ್ಸು ತಂಗುದಾನ ನಿರ್ಮಿಸಿಕೊಟ್ಟ ಪಂಜಂದಾಯ,ಬಂಟ,ವೈದ್ಯನಾಥ,ಆದಿ ಕೊರಗ ತನಿಯ ಸೇವಾ ಟ್ರಸ್ಟ್ ನ ಮುಖ್ಯಸ್ಥರನ್ನ ಅಭಿನಂದಿಸಲಾಯಿತು.
ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಪೂಣದ ಉದ್ಯಮಿ ಪದ್ಮನಾಭ ಶೆಟ್ಟಿ,ಅಧ್ಯಕ್ಷರಾದ ಚಂದ್ರಹಾಸ್ ಅಡ್ಯಂತಾಯ ಕುತ್ತಾರಗುತ್ತು, ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ ದೆಬ್ಬೇಲಿ,ಹಿಂದೂ ಮುಕ್ತಿಧಾಮ ಸಮಿತಿ ಟ್ರಸ್ಟ್ ನ ಅಧ್ಯಕ್ಷರಾದ ಲೋಕನಾಥ ಮಜಲ್ ತೋಟ,ಮುಂಬಯಿಯ ವಿಶ್ವಾತ್ ಕೆಮಿಕಲ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ವಿವೇಕ್ ಶೆಟ್ಟಿ ಬೊಲ್ಯಗುತ್ತು,ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿ ಕುತ್ತಾರಗುತ್ತು ,ಶಕುಂತಳಾ ಶೆಟ್ಟಿ ಬೊಲ್ಯಗುತ್ತು, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಶಾಲಾಕ್ಷಿ, ಮುನ್ನೂರು ಗ್ರಾ.ಪಂ.ಸದಸ್ಯರಾದ ಬಾಬು ಶೆಟ್ಟಿ, ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರೇಮ್ ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮುನ್ನೂರು ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ಹರೀಶ್ ಕೊಟ್ಟಾರಿ ಬೊಟ್ಟಿಕಂಡ ಸ್ವಾಗತಿಸಿದರು.ಉಪಾಧ್ಯಕ್ಷರಾದ ತಿರುಮಲ ರಾಜ್ .ಎನ್ ವಂದಿಸಿದರು.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು.
