
ಉಳ್ಳಾಲ: ‘ಉಳ್ಳಾಲವಾಣಿ’ ಕಳೆದ ಸಂಚಿಕೆಯಲ್ಲಿ ಬೆಳಕು ಕಾಣದ ಅಶಕ್ತ ಮಹಿಳೆಯೊಬ್ಬರ ಮನೆಯ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತ್ತು. ವಿದ್ಯುತ್ ಸೌಲಭ್ಯ ಇಲ್ಲದೇ ಬದುಕುತ್ತಿದ್ದ ಆ ತಾಯಿಯ ನೋವಿಗೆ ಉಳ್ಳಾಲವಾಣಿ ಮಿಡಿದಿತ್ತು. ಪರಿಣಾಮ ಕಳೆದ ಸಂಚಿಕೆ ಪ್ರಕಟವಾಗುವ ಹೊತ್ತಿಗೆ ಆ ಮಹಿಳೆಯ ಮನೆಗೆ ಮತ್ತೆ ವಿದ್ಯುತ್ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಮೆಸ್ಕಾಂ ಕೆಲಸ ಆರಂಭಿಸಿತ್ತು. ಇದೀಗ ಎಲ್ಲವೂ ಪೂರ್ಣಗೊಂಡು ಹಲವು ವರ್ಷಗಳ ಬಳಿಕ ದಾಸರಮೂಲೆಯ ವೀಣಾರ ಮನೆಯಲ್ಲಿ ಜ್ಯೋತಿ ಬೆಳಗಿದೆ.
ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದ ದಾಸರಮೂಲೆ ಮನೆಯ ಒಂಟಿ ಮಹಿಳೆ ವೀಣಾರ ಕರುಳು ಹಿಂಡುವ ಕಥೆಯ ಬಗ್ಗೆ ಅರಿತ ಉಳ್ಳಾಲವಾಣಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಅಂದೇ ಆ ಮನೆಗೆ ವಿದ್ಯುತ್ ಕೊಡಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿತ್ತು. ಇದೀಗ ಮೆಸ್ಕಾಂ ಅಧಿಕಾರಿಗಳ ಸಕಾಲಿಕ ಸ್ಪಂದನೆ ಹಾಗೂ ಮಾನವೀಯತೆ ಕಾರ್ಯದ ಮೂಲಕ ವೀಣಾರ ಮನೆ ಬೆಳಗಿದೆ. ಜೊತೆಗೆ ಮೊದಲೇ ಅವರ ಮನೆಯಲ್ಲಿ ವಯರಿಂಗ್ ಇದ್ದರೂ ಹಲವು ವರ್ಷಗಳಿಂದ ಉಪಯೋಗಿಸದ ಕಾರಣ ಸಂಪೂರ್ಣ ಕೆಟ್ಟು ಹೋಗಿದ್ದವು. ಆದರೆ ಮಾನವೀಯತೆ ನೆಲೆಯಲ್ಲಿ ಒಂದಷ್ಟು ಸ್ವಂತ ಖರ್ಚಿನಲ್ಲಿ ಮೆಸ್ಕಾಂ ಎಇಇ ಅವರೇ ತಮ್ಮ ಸಿಬ್ಬಂದಿ ಜೊತೆ ಸೇರಿಕೊಂಡು, ದಾನಿಗಳ ಸಹಾಯ ಪಡೆದು ಮನೆಗೆ ಹೊಸತಾಗಿ ವಯರಿಂಗ್ ಕಲ್ಪಿಸಿ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಈ ಮೂಲಕ ಹಲವು ವರ್ಷಗಳ ಬಳಿಕ ವೀಣಾರ ಮನೆ ವಿದ್ಯುತ್ ಕಂಡಿದೆ.