Site icon Ullalavani

ಸ್ಪೀಕರ್ ಹುದ್ದೆ ತುಳುನಾಡಿನ ಯುವಕನಿಗೆ ಸಾಧಿಸಲು ಸಾಧ್ಯವೇ? ಅನ್ನುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ : ಸ್ಪೀಕರ್ ಯು.ಟಿ.ಖಾದರ್


ಉಳ್ಳಾಲ: ಸ್ಪೀಕರ್ ಹುದ್ದೆಯನ್ನು ತುಳುನಾಡಿನ ಯುವಕ ಸಾಧಿಸಲು ಸಾಧ್ಯವೇ ಅನ್ನುವ ಪ್ರಶ್ನೆಗೆ ಕರಾವಳಿಯ, ತುಳು ಭಾಷಿಗನಾಗಿ ಉತ್ತರವನ್ನು ಕೊಟ್ಟಿದ್ದೇನೆ. ಇಂತಹ ಸ್ಪೀಕರ್ ಹುದ್ದೆಯನ್ನು ಅಲಂಕರಿಸಲು ಅವಕಾಶ ಕಲ್ಪಿಸಿಕೊಟ್ಟ ಎಲ್ಲಾ ಕ್ಷೇತ್ರದ ಬಾಂಧವರಿಗೆ ಅಭಿನಂದನೆಗಳು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಬೀರಿ ಕೋಟೆಕಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ಸಂದರ್ಭ ಕರ್ನಾಟಕ ಮತ್ತು ಕೇರಳದ ಪ್ರಸಿದ್ಧ ಕಲಾವಿದರು ಬೀರಿ ಜಂಕ್ಷನ್ನಿನಲ್ಲಿ ನಡೆಸಿಕೊಟ್ಟ ಸಂಗೀತ ರಸಮಂಜರಿ ಕಾರ್ಯಕ್ರಮ ಬೀರಿ ಮ್ಯೂಸಿಕ್ ಫೆಸ್ಟಿವಲ್ 2024 ರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಕಾರಿ ಮಿತ್ರರು ಬೀರಿ , ಮಿತ್ರತ್ವದ ಸಂದೇಶದೊಂದಿಗೆ ಪ್ರಥಮ ಬಾರಿಗೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಪ್ರತಿ ವರ್ಷವೂ ಭಗವಂತ ಅವರಿಗೆ ಶಕ್ತಿಯನ್ನು ನೀಡಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವ ಶಕ್ತಿಯನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ಹಿಂದೆ ಉಳಿದವರನ್ನು ಕೈಹಿಡಿದು ಮುಂದೆ ಕೊಂಡುಹೋಗುವ ಜವಾಬ್ದಾರಿ ನಿಮ್ಮದಾಗಲಿ ಎಂದು ಹಾರೈಸಿ, ತಾನು ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ಯು.ಟಿ.ಖಾದರ್ ಕ್ಷೇತ್ರಕ್ಕೆ ಶಾಸಕನಾಗಿಯೇ ಉಳಿಯುತ್ತಾನೆ. ಕ್ಷೇತ್ರದ ಜನರಿಗೆ ಕೊಟ್ಟ ವಿಶ್ವಾಸಗಳನ್ನು 100ಕ್ಕೆ 100 ಪಾಲಿಸುವ ವಿಶ್ವಾಸ ಹೊಂದಿದ್ದೇನೆ. ಕರಾವಳಿ ಭಾಗದ ತುಳುನಾಡಿನ ಅದೂ ಉಳ್ಳಾಲದ ಶಾಸಕ ಸ್ಪೀಕರ್ ಹುದ್ದೆ ಅಲಂಕರಿಸುವುದು ಹೌದಾ? ಅನ್ನುವ ಪ್ರಶ್ನೆಗಳಿಗೆ ತನ್ನ ಕೆಲಸದಿಂದ ಉತ್ತರವನ್ನು ಕೊಟ್ಟಿದ್ದೇನೆ. ಇದು ತುಳುನಾಡಿನ ಯುವಕನಿಗೆ ಸಂದ ಗೌರವ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸಹಕಾರಿ ಮಿತ್ರರ ಅಭೂತ ಪೂರ್ವ ಕಾರ್ಯಕ್ರಮ ಇದಾಗಿದ್ದು, ಎಲ್ಲರನ್ನೂ ಒಗ್ಗೂಡಿಸಿ ಗ್ರಾಮದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಶ್ಲಾಘನೀಯ. ತನ್ನನ್ನು ಅಭಿನಂದಿಸುವ ಮೂಲಕ ಸಮಾಜಿಕವಾಗಿ ಜವಾಬ್ದಾರಿಗಳನ್ನು ಹೆಚ್ಚು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ಮಾಸ್ಟರ್ ಶ್ರವಿತ್ ಮತ್ತು ರಾಷ್ಟ್ರಮಟ್ಟದಲ್ಲಿ ಎತ್ತರಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ಫಾತಿಮಾತ್ ಸನಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾರತ್ನ ಎಜ್ಯುಕೇಷನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರನ್ನು ಅಭಿನಂದಿಸಲಾಯಿತು.
ಈ ವೇಳೆ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಪ್ರೈ.ಲಿ ಕರ್ನಾಟಕ ಸರಕಾರದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಅಸ್ತ್ರ ಗ್ರೂಪ್ಸ್ ಸಂಸ್ಥೆಯ ಅಧ್ಯಕ್ಷ ಲಾಂಚು ಲಾಲ್, ಚಂದ್ರಶೇಖರ್ ಉಚ್ಚಿಲ್, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಮುತ್ತಣ್ಣ ಶೆಟ್ಟಿ, ದೇವದಾಸ್ ಕೊಲ್ಯ, ಸೋಮೇಶ್ವರ ಪುರಸಭೆ ಕೌನ್ಸಿಲರ್ ದೀಪಕ್ ಪಿಲಾರ್, ಕಾರ್ಯಕ್ರಮದ ಸಂಘಟಕರುಗಳಾದ ಸಹಕಾರಿ ಮಿತ್ರರುಗಳಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ರಾಘವ್ ಆರ್ ಉಚ್ಚಿಲ್, ಉದಯ್ ಕುಮಾರ್ ಶೆಟ್ಟಿ ಕೊಂಡಾಣಗುತ್ತು, ರಘು ಸಿ.ಉಚ್ಚಿಲ್, ಉಪಸ್ಥಿತರಿದ್ದರು.
ಸಾಹಿತಿ ವಾಣಿ ಲೋಕಯ್ಯ ಹಾಗೂ ತಾ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್ ಸನ್ಮಾನಿತರ ವಿವರ ಓದಿದರು. ಅತ್ಯಾಕರ್ಷಕ ಸ್ತಬ್ಧಚಿತ್ರದ ವಿಜೇತರಾಗಿ ಬ್ಲೂ ಡೈಮಂಡ್ ಬೀರಿ ಪಡೆದುಕೊಂಡರೆ, ತುಳುನಾಡು ಫ್ರೆಂಡ್ಸ್ ಕೋಟೆಕಾರು, ಯಕ್ಷಪ್ರಿಯರು ಕೋಟೆಕಾರು ಹಾಗೂ ವೀರಕೇಸರಿ ಬೀರಿ ಪ್ರಶಸ್ತಿ ಪಡೆದುಕೊಂಡರು.

Exit mobile version