Site icon Ullalavani

ಕೊಲ್ಯ: ರೇಬಿಸ್ ಶಂಕೆ ದಾಂಧಲೆ ನಡೆಸಿದ ಹಸು ಸಾವು

ಉಳ್ಳಾಲ: ಅನಾರೋಗ್ಯದಿಂದ ಸಾರ್ವಜನಿಕ ವಲಯದಲ್ಲಿ ದಾಂಧಲೆ ನಡೆಸುತ್ತಿದ್ದ ಹಸುವನ್ನು ಸ್ಥಳೀಯರು ಹಗ್ಗದ ಮೂಲಕ ಕಟ್ಟಿ ಹಾಕಿ ನಿಯಂತ್ರಣಕ್ಕೆ ತಂದಿದ್ದು, ಪಶುವೈದ್ಯಾಧಿಕಾರಿಗಳು ಅರಿವಳಿಕೆ ಔಷಧ ನೀಡುತ್ತಿದ್ದಂತೆ ಹಸು ಸಾವನ್ನಪ್ಪಿದೆ.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯದ ಅಡ್ಕ ಸಮೀಪ ಹಸುವೊಂದು ಮನೆಯೊಂದರ ಆವರಣದೊಳಕ್ಕೆ ನುಗ್ಗಿ ದಾಂಧಲೆ ನಡೆಸುವುದರ ಜೊತೆಗೆ ಸ್ಕೂಟರ್, ಮಹಿಳೆ ಸೇರಿದಂತೆ ಅನೇಕರ ಮೇಲೆ ದಾಳಿ ನಡೆಸಿತ್ತು. ಸ್ಥಳೀಯರು ಸೇರಿ ಹಗ್ಗದ ಸಹಾಯದಿಂದ ಹಸುವನ್ನು ಕಟ್ಟುವ ಮೂಲಕ ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಪುರಸಭೆ ಉಪಾಧ್ಯಕ್ಷ ರವಿಶಂಕರ್ ಅವರಿಗೆ ಮಾಹಿತಿ ದೊರೆತಿದ್ದು, ಸ್ಥಳಕ್ಕಾಗಮಿಸಿ ಹಸುವನ್ನು ಕಟ್ಟಿಹಾಕುವಲ್ಲಿ ಅವರು ಕೈಜೋಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ಸ್ಪೀಕರ್ ಯು.ಟಿ.ಖಾದರ್ ಅವರು ಪಶುವೈದ್ಯಾಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಅವರು ತಪಾಸಣೆ ನಡೆಸಿ ಹಸುವಿನ ವರ್ತನೆಯನ್ನು ಗಮನಿಸಿ ರೇಬಿಸ್ ಎಂದು ಶಂಕೆ ವ್ಯಕ್ತಪಡಿಸಿದರು. ನಂತರ ಅರಿವಳಿಕೆ ನೀಡಿದ ಸ್ವಲ್ಪ ಹೊತ್ತಿನಲ್ಲಿ ಹಸು ಮೃತಪಟ್ಟಿದೆ.
ಗಾಯಕ್ಕೆ ಜೊಲ್ಲು ತಗಲಬಾರದು : ಡ| ಗಜೇಂದ್ರ ಎಚ್ಚರಿಕೆ
ಕೋಟೆಕಾರು ಸರಕಾರಿ ಪಶು ಆಸ್ಪತ್ರೆಯ ಪಶು ವೈಧ್ಯಾಧಿಕಾರಿ ಡಾ.ಗಜೇಂದ್ರ ಕುಮಾರ್ ರೇಬಿಸ್ ಶಂಕೆ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಅಧಿಕೃತವಾಗಿ ಧೃಢೀಕರಿಸಲು ಹಸುವಿನ ಮೆದುಳನ್ನು ಪ್ರಯೋಗಾಲಯಕ್ಕೆ ಕಳುಹಿಸ ಬೇಕಾಗುತ್ತದೆ. ಹಸುವಿನ ಮಾಲಕರು ಒಪ್ಪಿಗೆ ನೀಡಬೇಕು. ಹುಚ್ಚು ನಾಯಿಯ ಕಡಿತದಿಂದ ಹಸುವಿಗೆ ರೇಬಿಸ್ ಆವರಿಸಿರಬಹುದು. ರೇಬಿಸ್ ಆವರಿಸಿದರೆ ಹಸುವು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಹಸುವು ಮತ್ತೊಬ್ಬರಿಗೆ ರೇಬಿಸ್ ಹರಡಿಸಲು ಸಾಧ್ಯವಿಲ್ಲ. ಅದರ ಜೊಲ್ಲು ತೆರೆದ ಗಾಯಕ್ಕೆ ತಗುಲಿದರೆ ಮಾತ್ರ ರೇಬಿಸ್ ಹರಡಲು ಸಾಧ್ಯವಿದೆ ಎಂದು ಗಜೇಂದ್ರ ಕುಮಾರ್ ಹೇಳಿದ್ದಾರೆ.

Exit mobile version