ಮಂಗಳೂರು: ತುಳು ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ನೀಡಿರುವ ವಿಚಾರಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ತುಳು ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ ನೀಡಿರುವ ವಿಚಾರ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಸಂಶೋಧಕಿ ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರು ದಾಖಲೆ ಸಮೇತ ಸಲ್ಲಿಸಿದ ಪ್ರಸ್ತಾವನೆಗೆ ಈ ಅನುಮೋದನೆ ನೀಡಲಾಗಿದೆ ಎಂಬುದನ್ನು ಯುನಿಕೋಡ್ ತನ್ನ ಅಂತರ್ಜಾಲ ಮಾಹಿತಿಯಲ್ಲಿ ಉಲ್ಲೇಖಿಸಿದೆ. ವೈಷ್ಣವಿ ಮೂರ್ತಿ ಹಾಗೂ ವಿನೋದ್ ರಾಜನ್ ಅವರ ಪ್ರಯತ್ನವನ್ನು ಮನಪೂರ್ವಕವಾಗಿ ಅಭಿನಂದಿಸುತ್ತೇನೆ.
ಸುದೀರ್ಘ ಅವಧಿಯಲ್ಲಿ ಸಾಕಷ್ಟು ದಾಖಲೆಗಳನ್ನು ಲಗತ್ತಿಸಿ ಅವರು ಸಲ್ಲಿಸಿದ ಪ್ರಸ್ತಾವನೆಯ ಹಿಂದೆ ದೊಡ್ಡ ಪರಿಶ್ರಮ ಇದೆ. ಇದೇ ಸಂದರ್ಭದಲ್ಲಿ ಯುನಿಕೋಡ್ ನಲ್ಲಿ ತುಳುವನ್ನು ಮಾತ್ರ ಉಲ್ಲೇಖಿಸಿ ಪ್ರತ್ಯೇಕವಾಗಿ ತುಳು ಎಂದಷ್ಟೇ ಉಲ್ಲೇಖಿಸಿ ಅನುಮೋದನೆ ನೀಡಬೇಕೆಂಬ ಪ್ರಸ್ತಾವನೆ, ಬೇಡಿಕೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ಇದೆ ಎಂಬುದನ್ನು ತಿಳಿಸಲು ಇಚ್ಚಿಸುತ್ತೇನೆ.
ತುಳು-ತಿಗಾಳಾರಿ ನಡುವಿನ ಸಾಮ್ಯತೆ, ವ್ಯತ್ಯಾಸದ ಬಗ್ಗೆ ಭಾಷಾ ಪಂಡಿತರು, ಲಿಪಿ ತಜ್ಞರು ಈಗಾಗಲೇ ಸಾಕಷ್ಟು ಬರೆದಿದ್ದಾರೆ,ಅಭಿಪ್ರಾಯವನ್ನು ಮಂಡಿಸಿದ್ದಾರೆ, ಈ ವಿಚಾರಗಳನ್ನು ಈ ಸಂದರ್ಭದಲ್ಲಿ ಗಮನದಲ್ಲಿರಿಸಿಕೊಳ್ಳುವುದು ಸೂಕ್ತವಾಗಿದೆ.
