ಮಂಗಳೂರು: ಹೆಣ್ಣು ಮಗು ಇಲ್ಲವೆಂದು ಎರಡೂವರೆ ವರ್ಷದ ಹೆಣ್ಣು ಮಗು ವನ್ನು ಅಪಹರಣ ಮಾಡಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಅನೀಶ್ ಕುಮಾರ್ (49) ಬಂಧಿತನಾಗಿದ್ದು ಈತ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ.
ದಿನಗಳ ಹಿಂದೆ ಎರಡೂವರೆ ವರ್ಷದ ಹೆಣ್ಣು ಮಗು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರಿಂದ ಹುಡುಕಾಟ ಶುರುವಾಗಿತ್ತು. ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವೃದ್ಧನೋರ್ವ ಮಗುವೊಂದನ್ನು ಕರೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು.
ನಂತರ ರೈಲ್ವೇ ಸ್ಟೇಷನ್ ಸಿಸಿಟಿವಿ ಪ್ರಕಾರ ಕೇರಳ ಕಡೆಗೆ ರೈಲಿನ ಹೋದ ಮಾಹಿತಿ ಕಲೆಹಾಕಿದ ಪೊಲೀಸರು ಕೊನೆಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಮಗುವಿನೊಂದಿಗೆ ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 24 ಗಂಟೆಯೊಳಗೆ ಪ್ರಕರಣ ಭೇದಿಸಿ ಪಿ.ಎಸ್.ಐ.ಶಿವಕುಮಾರ್ ಮತ್ತು ಸಿಬ್ಬಂದಿ ರೈಲ್ವೆ ಪೊಲೀಸರಿಂದ ಅರೋಪಿ ವಶಕ್ಕೆ ಪಡೆದು ಹೆತ್ತವರಿಗೆ ಮಗುವನ್ನು ಒಪ್ಪಿಸಲಾಗಿದೆ.
ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಮಗುವನ್ನು ನೋಡಿ ಅಪಹರಣ ಮಾಡಿದ್ದು ತನಗೂ 3 ಗಂಡು ಮಕ್ಕಳಿದ್ದು, ಹೆಣ್ಣು ಮಗು ಸಾಕಬೇಕೆಂಬ ಉದ್ದೇಶದಿಂದ ಅಪಹರಣ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
