ಕೊಣಾಜೆ: ಆ ಮಹಿಳೆ ಕೂಡು ಕುಟುಂಬದ ಜೊತೆಗೆ ಬಾಳಿ ಬದುಕಿದ್ದವರು. ಒಂದೇ ಮನೆಯಲ್ಲಿ ಕುಟುಂಬಿಕರ ಜೊತೆ ಸಂತಸದ ಬದುಕು ಕಳೆದವರು. ಆದರೆ ಕ್ರಮೇಣ ಮನೆಯಲ್ಲಿದ್ದವರೆಲ್ಲಾ ದೂರವಾದ ಮೇಲೆ ಅವರು ಒಬ್ಬಂಟಿಯಾದರು. ಒಪ್ಪೊತ್ತಿನ ಊಟಕ್ಕೂ ಏಕಾಂಕಿಯಾಗಿ ಕಷ್ಟ ಪಟ್ಟರು. ಈ ಹೊತ್ತಲ್ಲಿ ಕೈಯ್ಯಲ್ಲಿ ಕಾಸಿಲ್ಲದೇ ವಿದ್ಯುತ್ ಬಿಲ್ ಕೂಡ ಪಾವತಿಸಲು ಸಾಧ್ಯವಾಗದ ಹಂತಕ್ಕೆ ಅವರ ಇಡೀ ಬದುಕೇ ಸಂಕಷ್ಟಕ್ಕೆ ಸಿಲುಕಿತು. ಕೊನೆಗೆ ಮೆಸ್ಕಾಂನವರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಕಾರಣ ಅವರ ಮನೆಯಿಡೀ ಕತ್ತಲು ಆವರಿಸಿತು. ಆದರೀಗ ಹಲವು ವರ್ಷಗಳ ಬಳಿಕ `ಉಳ್ಳಾಲ ವಾಣಿ’ ಮೂಲಕ ಅವರ ಬದುಕಲ್ಲಿ ಗೃಹಜ್ಯೋತಿ ಬೆಳಗಿಸಿದೆ.
ಇದು ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದ ದಾಸರಮೂಲೆ ಮನೆಯ ಒಂಟಿ ಮಹಿಳೆ ವೀಣಾರ ಕರುಳು ಹಿಂಡುವ ಕಥೆ. ಒಂದು ಕಾಲದಲ್ಲಿ ಕೂಡು ಕುಟುಂಬದಲ್ಲಿದ್ದ ವೀಣಾ ಕ್ರಮೇಣ ಎಲ್ಲರನ್ನೂ ಕಳೆದುಕಂಡು ಒಂಟಿಯಾದರು. ಆ ಬಳಿಕ ದಾಸರಮೂಲೆಯ ಮನೆಯಲ್ಲಿ ಬೀಡಿ ಕಟ್ಟಿಕೊಂಡು ಏಕಾಂಗಿಯಾಗಿ ಬದುಕಲು ಆರಂಭಿಸಿದರು. ಈ ಹೊತ್ತಿಗೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿ ಮನೆಯ ವಿದ್ಯುತ್ ಬಿಲ್ ಕೂಡ ಕಟ್ಟಲು ಸಾಧ್ಯವಾಗದೇ ಇದ್ದ ಕಾರಣ ಮೆಸ್ಕಾಂನವರು ಸಂಪರ್ಕ ಕಡಿತಗೊಳಿಸಿದರು. ಬಳಿಕ ಕತ್ತಲಲ್ಲೇ ಬದುಕು ಕಟ್ಟಿಕೊಂಡ ವೀಣಾ ಅವರು ಸಂಕಷ್ಟದ ಬದುಕುನ್ನ ಸಾಗಿಸುವಂತಾಯಿತು.
`ಉಳ್ಳಾಲವಾಣಿ’ ಗಮನಕ್ಕೆ ಬಂದ ವೀಣಾ ಯಾತನೆ!
ಈ ನಡುವೆ ಒಂಟಿ ಮಹಿಳೆ ವೀಣಾರ ಕರುಣಾಜನಕ ಕಥೆಯ ಬಗ್ಗೆ ಅವರ ಗೆಳತಿ ಪವನ ಮನೋಹರ್ ಅವರು ಉಳ್ಳಾಲವಾಣಿ ಪತ್ರಿಕೆಯ ಗಮನಕ್ಕೆ ತಂದಿದ್ದಾರೆ. ವಿಚಾರ ತಿಳಿದು ತಕ್ಷಣ ಕಾರ‍್ಯಪ್ರವೃತ್ತವಾದ ಉಳ್ಳಾಲವಾಣಿ ತಂಡ ವೀಣಾರ ಬದುಕಿನ ವಸ್ತುಸ್ಥಿತಿಯ ಮಾಹಿತಿ ಪಡೆದಿದೆ. ಈ ವೇಳೆ ಸರಿಯಾದ ಶೌಚಾಲಯ ಕೂಡ ಇಲ್ಲದೇ ವೀಣಾ ಬದುಕುತ್ತಿರುವುದು ಪತ್ರಿಕೆಯ ಗಮನಕ್ಕೆ ಬಂದಿದೆ. ಹೀಗಾಗಿ ಮೊದಲಿಗೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಉಳ್ಳಾಲ ವಿಭಾಗದ ಮೆಸ್ಕಾಂ ಎಇಇ ಅವರನ್ನು ಸಂಪರ್ಕಿಸಿ ಈ ಬಗ್ಗೆ ತಿಳಿಸಲಾಯಿತು. ಬಳಿಕ ಅವರ ಮನೆಗೆ ಮತ್ತೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಕೊಣಾಜೆ ಗ್ರಾ.ಪಂನಿಂದ ನಿರಾಕ್ಷೇಪಣಾ ಪತ್ರ ಪಡೆಯುವ ನಿಟ್ಟಿನಲ್ಲಿ ಮೊದಲು ಗಮನ ಹರಿಸಲಾಯಿತು. ಅದರಂತೆ ದಾಸರಮೂಲೆ ಪಂಚಾಯತ್ ಪ್ರತಿನಿಧಿ ಹರೀಶ್ ಶೆಟ್ಟಿಗಾರ್ ಪಂಚಾಯತ್ ನಿರಾಕ್ಷೇಪಣಾ ಪತ್ರ ಕೊಡಿಸುವ ಮಹತ್ತರ ನೆರವು ನೀಡಿದ್ದಾರೆ. ನಿರಾಕ್ಷೇಪಣಾ ಪತ್ರ ಸಿಕ್ಕ ಬೆನ್ನಲ್ಲೇ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕರ‍್ಯಕ್ಕೆ ವೇಗ ಸಿಕ್ಕಿದ್ದು, ಮೆಸ್ಕಾಂ ಎಇಇ ಅವರು ಮೆಸ್ಕಾಂ ಜೆಇ ಅವರಿಗೆ ನಿರ್ದೇಶನ ನೀಡಿ ಸದ್ಯ ಕರ‍್ಯ ಪ್ರಗತಿಯಲ್ಲಿದೆ. ಈ ವಿಚಾರದಲ್ಲಿ ಸ್ಥಳೀಯ ಪಂಚಾಯತ್ ಆಡಳಿತ ಹಾಗೂ ಮೆಸ್ಕಾಂ ಅಧಿಕಾರಿಗಳ ಕರ‍್ಯ ಮೆಚ್ಚುವಂಥದ್ದು. ಅದರಲ್ಲೂ ಮೆಸ್ಕಾಂ ಎಇಇ ಅವರು ಮಾನವೀಯ ದೃಷ್ಟಿಯಿಂದ ಅವರೇ ಫೈಲ್ ರೆಡಿ ಮಾಡಿ ಜೆಇ ಅವರಿಗೆ ನಿರ್ದೇಶನ ನೀಡಿದ್ದಾರೆ. ಸದ್ಯ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕರ‍್ಯಾಲಯ ಶೌಚಾಲಯ ಕಟ್ಟಿ ಕೊಡುವ ಭರವಸೆ ನೀಡಿದೆ.
ಗೃಹಜ್ಯೋತಿಯಿಂದ ಬೆಳಗಲಿದೆ ವೀಣಾರ ಮನೆ!
ಸದ್ಯ ಉಳ್ಳಾಲವಾಣಿ ನೆರವಿನಿಂದ ಗೆಳತಿ ಪವನ ಅವರ ಕಾಳಜಿ ಹಾಗೂ ಅಧಿಕಾರಿಗಳ ಸಕಾಲಿಕ ಸ್ಪಂದನೆಯ ಕಾರಣಕ್ಕೆ ವೀಣಾರ ಮನೆ ಬೆಳಗಲಿದೆ. ಆದರೆ ಬೇರೆ ಸಮಯದಲ್ಲಾದರೆ ಮತ್ತೆ ಅವರು ವಿದ್ಯುತ್ ಬಿಲ್ ಪಾವತಿಸುವ ಅನಿವಾರ್ಯತೆ ಇತ್ತು. ಆದರೆ ಈಗ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರೋ ಕಾರಣ ವೀಣಾರ ಒಂಟಿ ಬದುಕಿಗೆ 200 ಯೂನಿಟ್ ಒಳಗಿನ ವಿದ್ಯುತ್ ಸಾಕು. ಹಾಗಾಗಿ ಗೃಹ ಜ್ಯೋತಿ ಯೋಜನೆ ಪ್ರಕಾರ ಅವರು ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ಯಾವುದೇ ಬಿಲ್ ಪಾವತಿಸದೇ ವೀಣಾರ ಮನೆ ಬೆಳಗಲಿದೆ ಎನ್ನುವುದೇ ಖುಷಿಯ ವಿಚಾರ.
