ಉಳ್ಳಾಲ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ೭ ನೇ ವೇತನ ಆಯೋಗದಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಅನ್ಯಾಯವಾಗಿದೆ. ಜು.೧, ೨೦೨೨ ರಿಂದ ೨೦೨೪ರ ಜು.೩೧ರ ಅವಧಿಯಲ್ಲಿ ನಿವೃತ್ತಿ ಹೊಂದಿದವರಿಗೆ ಲಕ್ಷಾಂತರ ರೂ. ವ್ಯತ್ಯಾಸ ಉಂಟಾಗಿದೆ. ಇದನ್ನು ರಾಜ್ಯ ಸರಕಾರ ಪರಿಷ್ಕರಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿವೃತ್ತ ಅಧಿಕಾರಿ ಹಾಗೂ ಉಳ್ಳಾಲ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ವೇದಿಕೆ ತಾಲೂಕು ಸಂಚಾಲಕಿ ಮಂಜುಳ ಒತ್ತಾಯಿಸಿದ್ದಾರೆ.
ಅವರು ಉಳ್ಳಾಲ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ವೇದಿಕೆ ವತಿಯಿಂದ ತೊಕ್ಕೊಟ್ಟು ಒಳಪೇಟೆ ಸಂತ ಸೆಬಾಸ್ಟಿಯನ್ ಆಡಿಟೋರಿಯಂ ಕಟ್ಟಡದಲ್ಲಿ ನಡೆಸಿದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಒತ್ತಾಯಿಸಿದರು.
೭ನೇ ವೇತನ ಆಯೋಗದ ವರದಿಯಲ್ಲಿ ೨೦೨೨ರ ಜು.೧ ರಿಂದ ೨೦೨೪ರ ಜು.೩೧ರ ಅವಧಿಯಲ್ಲಿ ನಿವೃತ್ತರಾದ ವೇತನ ಶ್ರೇಣಿಯ ನಿಗದಿಯನ್ನು ಕಾಲ್ಪನಿಕವಾಗಿ ನಿಗದಿ ಮಾಡುವಂತೆ ಆದೇಶ ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ಈ ಆರ್ಥಿಕ ಸೌಲಭ್ಯವನ್ನು ೨೦೨೪ ರ ಆ.೧ರಲ್ಲಿ ನೀಡುವಂತೆ ಆದೇಶ ದಲ್ಲಿ ಸೂಚಿಸುತ್ತದೆ. ಇದು ಯಾವ ರೀತಿಯ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ? ಇದಷ್ಟೇ ಅಲ್ಲದೆ ಈ ಮೇಲಿನ ೨೫ ತಿಂಗಳ ಅವಧಿಯಲ್ಲಿ ನಿವೃತ್ತರಾದ/ ಸೇವೆಯಿಂದ ಮುಕ್ತಿ ಹೊಂದಿದವರ ನಿವೃತ್ತಿ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ಯೋಚಿಸಿಯೇ ಇಲ್ಲ . ಆದ್ದರಿಂದ ಇಂತಹ ವೇತನ ಶ್ರೇಣಿಗಳ ಅನುಷ್ಠಾನದಿಂದ ಈ ಮೇಲಿನ ೨೫ ತಿಂಗಳ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿಸಿಆರ್‌ಜಿ, ಕಮ್ಯುಟೇಷನ್, ಇ.ಎಲ್.ಎನ್ಕಾಷ್ ಮೆಂಟ್, ಲೆಕ್ಕಾಚಾರ ಮಾಡದೆ ಹಿಂದಿನ ೬ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಿಕ್ಕಿದೆ. ಇದರಿಂದ ೨೫ ತಿಂಗಳ ಹಿಂದೆ ಕರ್ತವ್ಯ ನಿರ್ವಹಿಸಿ ಸೇವೆ ಯಿಂದ ನಿವೃತ್ತರಾದ ನೌಕರರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ವಿಷಯ ತೀವ್ರ ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಆರ್ಥಿಕ ಸೌಲಭ್ಯ ನಿವೃತ್ತಿ ನೌಕರರಿಗೆ ತುಂಬಾ ನಷ್ಟವಾಗಿದೆ. ಈ ಬಗ್ಗೆ ೨೦೨೨ರ ಜು.೧ ರಿಂದ ೨೦೨೨ರ ಜು.೩೧ರವರೆಗೆ ನಿವೃತ್ತರಾದ ನೌಕರರಿಗೆ ೨೦೨೪ರ ಆ.೧ ರಿಂದ ನಿವೃತ್ತರಾಗುವ ನೌಕರರ ನಿವೃತ್ತಿ ಸೌಲಭ್ಯವನ್ನೇ ನ್ಯಾಯಯುತವಾಗಿ ಸಿಗುವಂತೆ ಸರಕಾರವನ್ನು ಒತ್ತಾಯಿಸುವವರಿದ್ದೇವೆ ಎಂದರು.
ಈ ಸಂದರ್ಭ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಧಾನ ಸಂಚಾಲಕ ಗಣೇಶ್ ಸುವರ್ಣ, ನ್ಯಾಯಾಂಗ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಸಂಚಾಲಕರುಗಳಾದ ನಾರಾಯಣ ತಲಪಾಡಿ, ತೋಟಗಾರಿಕೆ ಇಲಾಖೆಯ ನಿವೃತ್ತ ಸಿಬ್ಬಂದಿ ಸಿರಿಲ್ ರಾಬರ್ಟ್ ಡಿ ಸೋಜ , ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂ ವಿಭಾಗದ ನಿವೃತ್ತ ಎಸ್.ಐ ಮೋಹನ್ ಬಂಗೇರ, ಆರೋಗ್ಯ ಇಲಾಖೆ ನಿವೃತ್ತ ಸಿಬ್ಬಂದಿ, ದ.ಕ ಜಿಲ್ಲಾ ಸರಕಾರಿ ಗ್ರೂಪ್ ಡಿ ನೌಕರರ ಸಂಘ ದ.ಕ ಜಿಲ್ಲೆ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
