Site icon Ullalavani

ಕುಂಪಲಾಷ್ಟಮಿಗೆ ಸ್ಟಾರ್ ಈವೆಂಟ್ ಮೂಲಕ ಠಕ್ಕರ್ ಗೆ ಬ್ರೇಕ್: ಅಪಸ್ವರದ ಬೆನ್ನಲ್ಲೇ ಕುಂಪಲ ಶಾಲೆಯಿಂದ ಕಾರ್ಯಕ್ರಮ ಶಿಫ್ಟ್!

ಉಳ್ಳಾಲ: ಕುಂಪಲದ ಜನಪ್ರಿಯ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲು ಆಯೋಜನೆಯಾಗಿದ್ದ ಕಿರುತೆರೆ ಸ್ಟಾರ್ ಗಳ ಅದ್ದೂರಿ ಕಾರ್ಯಕ್ರಮ ಕೊನೆಗೂ ಶಿಫ್ಟ್ ಆಗಿದೆ. ಭಾರೀ ವಿವಾದದ ಬೆನ್ನಲ್ಲೇ ಕಾರ್ಯಕ್ರಮದ ವಿರುದ್ದ ಕೇಳಿ ಬಂದ ಅಪಸ್ವರದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನ ಕುಂಪಲ ಶಾಲಾ ಮೈದಾನದ ಬದಲಾಗಿ ಕುಂಪಲ ಅದಿಶಕ್ತಿ ದೇವಸ್ಥಾನದ ವಠಾರಕ್ಕೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ತೆರೆಮರೆಯಲ್ಲಿ ನಡೀತಿದ್ದ ಕುಂಪಲಾಷ್ಟಮಿ ಠಕ್ಕರ್ ಕಾರ್ಯಕ್ರಮಕ್ಕೆ ಒಂದು ಹಂತದ ಬ್ರೇಕ್ ಬಿದ್ದಿದೆ.

ಕಾಂಗ್ರೆಸ್-ಬಿಜೆಪಿ ಹೆಸರಿನಲ್ಲಿ ಇಂದು ನಡೆಯಲಿರೋ ಕುಂಪಲಾಷ್ಟಮಿ ಸಂಭ್ರಮಕ್ಕೆ ಠಕ್ಕರ್ ಕೊಡಲು ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಹೆಸರಿನಲ್ಲಿ ಹುಲಿವೇಷ ಸ್ತಬ್ಧ ಚಿತ್ರದ ಊದು ಇಡುವ ಅದ್ದೂರಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಕನ್ನಡದ ಪ್ರಖ್ಯಾತ ಸೀರಿಯಲ್ ಕಲಾವಿದರ ಆಕರ್ಷಣೆಯೊಂದಿಗೆ ಕುಂಪಲಾಷ್ಟಮಿ ಮೊಸರು ಕುಡಿಕೆ ಶೋಭಾಯಾತ್ರೆಯ ದಿನವಾದ ಇಂದು ಸಂಜೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ‌ಕುಂಪಲಾಷ್ಠಮಿಗೆ ಠಕ್ಕರ್ ಕೊಡಲೆಂದೇ ಕುಂಪಲ ಸರ್ಕಾರಿ ಶಾಲಾ ವಠಾರದಲ್ಲೇ ಕಾರ್ಯಕ್ರಮ ನಡೆಯಬೇಕಿತ್ತು. ಅದರಂತೆ ಕುಂಪಲ ಸೇರಿ ಹಲವೆಡೆ ಇದರ ಬ್ಯಾನರ್ ಗಳನ್ನ ಹಾಕಲಾಗಿತ್ತು. ಅದರೆ ಇದೀಗ ಕೊನೆಯ ಕ್ಷಣದಲ್ಲಿ ಈ ಅದ್ದೂರಿ ಕಾರ್ಯಕ್ರಮ ಶಾಲಾ ಮೈದಾನದಿಂದ ಆದಿಶಕ್ತಿ ದೇವಸ್ಥಾನದ ವಠಾರಕ್ಕೆ‌ ಶಿಫ್ಟ್ ಆಗಿದೆ. ಈ ಮೂಲಕ ಕುಂಪಲದ ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್ ಗೆ ಬ್ರೇಕ್ ಬಿದ್ದಿದೆ.

ಸ್ಟಾರ್ ಇವೆಂಟ್ ಶಾಲೆಯಿಂದ ಶಿಫ್ಟ್ ಆಗಿದ್ದೇಕೆ?

ಇನ್ನು ಈ ಅದ್ದೂರಿ ಸ್ಟಾರ್ ಇವೆಂಟ್ ಶಿಫ್ಟ್ ಆಗಲು ಹಲವು ಕಾರಣಗಳಿವೆ. ಕಾಂಗ್ರೆಸ್ ನಾಯಕ ಪ್ರಕಾಶ್ ಕುಂಪಲ ಉಸ್ತುವಾರಿಯ ಈ ಕಾರ್ಯಕ್ರಮ ಬಿಜೆಪಿ ನಾಯಕ ಸತೀಶ್ ಕುಂಪಲ ನೇತೃತ್ವದ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲೆಂದೇ ಆಯೋಜಿಸಲಾಗಿತ್ತು. ಆದರೆ ಕುಂಪಲದ ಮೊಸರು ಕುಡಿಕೆ ದಿನವೇ ಕುಂಪಲದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರ ಬಗ್ಗೆ ಭಾರೀ ಅಪಸ್ವರ ಕೇಳಿ ಬಂದಿತ್ತು. ಸ್ವತಃ ಕುಂಪಲದ ಹಲವು ಸಂಘ ಸಂಸ್ಥೆಗಳಿಂದಲೂ ಇದಕ್ಕೆ ವಿರೋಧ ಇತ್ತು ಎನ್ನಲಾಗಿದೆ. ಅಲ್ಲದೇ ಶಾಲಾ ಮೈದಾನದಲ್ಲಿ ಇವೆಂಟ್ ನಡೆಸೋದೇ ಆದಲ್ಲಿ ಕುಂಪಲಾಷ್ಟಮಿ ಹೆಸರಿನಲ್ಲಿ ನಡೆಸಲು ಬೇರೆ ಅನುಮತಿ ಕೊಡುವಂತೆಯೂ ಕೆಲವರು ಕೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯವರೆಗೂ ವಿಚಾರ ತಲುಪಿದ ಕಾರಣ ಕಡೇ ಕ್ಷಣದಲ್ಲಿ ಸ್ಟಾರ್ ಇವೆಂಟ್ ಜಾಗ ಬದಲಾಗಿದೆ. ಇತ್ತ ಸರ್ಕಾರಿ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಸೋ ವಿಚಾರದಲ್ಲೂ ಪ್ರಸ್ತುತ ಶಿಕ್ಷಣ ಇಲಾಖೆ ಮಾರ್ಗಸೂಚಿ ಇರೋ ಬಗ್ಗೆಯೂ ಉಳ್ಳಾಲವಾಣಿ ವರದಿ ಮಾಡಿತ್ತು. ಇದು ಕೂಡ ಕಾರ್ಯಕ್ರಮದ ಜಾಗ ಬದಲಾವಣೆಗೆ ಕಾರಣ ಎನ್ನಲಾಗ್ತಿದೆ.

ಗ್ರಾಮದ ಹಬ್ಬದಲ್ಲಿ ಇದೆಂಥಾ ವಿಭಜನೆ?

ಸೋಮವಾರ ಕುಂಪಲಾಷ್ಟಮಿ ಸಂಭ್ರಮ. ಪ್ರತೀ ವರ್ಷದಂತೆ ಈ ಬಾರಿಯೂ ಬಾಲಕೃಷ್ಣ ಮಂದಿರದ ಕುಂಪಲಾಷ್ಟಮಿ ಮೊಸರು ಕುಡಿಕೆ ಸಂಭ್ರಮಕ್ಕೆ ಇಡೀ ಕುಂಪಲವೇ ನವವಧುವಿನಂತೆ ಶೃಂಗಾರಗೊಂಡಿದೆ. ಒಂದು ಗ್ರಾಮದ ಉತ್ಸವ ಅಂದ ಮೇಲೆ ಅಲ್ಲೆಲ್ಲಾ ಒಂದಷ್ಟು ಶುಭಾಶಯದ ಬ್ಯಾನರ್ ಗಳು ರಾರಾಜಿಸೋದು ಸಹಜ. ಅದೇ ರೀತಿ ಕುಂಪಲಾಷ್ಟಮಿ ಬ್ಯಾನರ್ ಗಳು ಇಡೀ ಗ್ರಾಮದಲ್ಲಿ ರಾರಾಜಿಸ್ತಿವೆ. ಆದರೆ ಇದರ ಮಧ್ಯೆ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವೆ ಹೆಸರಿನಲ್ಲಿ ಎದ್ದುನಿಂತಿರೋ ಬ್ಯಾನರ್ ಗಳು ಹಲವರ ಅಚ್ಚರಿಕೆ ಕಾರಣವಾಗಿತ್ತು. ಅಸಲಿಗೆ ಈ ಬ್ಯಾನರ್ ನಲ್ಲಿ ಉಲ್ಲೇಖಿಸಿರೋ ಕಾರ್ಯಕ್ರಮದ ಬಗ್ಗೆಯೇ ಹಲವರಿಗೆ ಅಚ್ಚರಿಯಾಗಿತ್ತು. ಸೋಮವಾರ ಕುಂಪಲಾಷ್ಟಮಿ ಪ್ರಯುಕ್ತ ಸಂಜೆ ಇಡೀ ಗ್ರಾಮದಲ್ಲಿ ‌ಮೊಸರು ಕುಡಿಕೆ ಸಂಭ್ರಮ ನಡೆದ್ರೆ ಅದೇ ಕುಂಪಲ ಶಾಲೆಯ ಮೈದಾನದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಪ್ರತ್ಯೇಕ ಕಾರ್ಯಕ್ರಮವೊಂದನ್ನ ಆಯೋಜಿಸಲಾಗಿತ್ತು. ಅತ್ತ ಕುಂಪಲಾಷ್ಟಮಿಯ ಸಂಭ್ರಮದ ಶೋಭಾಯಾತ್ರೆ ನಡುವೆಯೇ ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಹುಲಿವೇಷ ಸ್ತಬ್ಥಚಿತ್ರಕ್ಕಾಗಿ ತಾರಾ ಮೆರುಗಿನ ಊದು ಇಡುವ ಕಾರ್ಯಕ್ರಮ ಕುಂಪಲದ ಶಾಲಾ ಮೈದಾನದಲ್ಲೇ ನಡೆಯಲು ಸಿದ್ದತೆ ನಡೆದಿತ್ತು. ಇಡೀ ಕುಂಪಲವೇ ಕುಂಪಲಾಷ್ಟಮಿ ಮೊಸರು ಕುಡಿಕೆ ಸಂಭ್ರಮಿಸೋ ಹೊತ್ತಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಪ್ರಯುಕ್ತ ಇಂಥದ್ದೊಂದು ಕಾರ್ಯಕ್ರಮವನ್ನ ಕುಂಪಲದಲ್ಲೇ ಆಯೋಜಿಸೋ ಅನಿವಾರ್ಯತೆ ಏನಿತ್ತು ಅಂತ ಜನ ಮಾತನಾಡಿಕೊಳ್ಳುವಂತಾಗಿತ್ತು. ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ನಡೆಯೋ ಸಭಾ ಕಾರ್ಯಕ್ರಮ ಹಾಗೂ ಹುಲಿವೇಷ ಸ್ತಬ್ಧ ಚಿತ್ರಕ್ಕಾಗಿ ಊದು ಇಡೋ ಕಾರ್ಯಕ್ರಮ ಇದಾಗಿದೆ. ಅಸಲಿಗೆ ಈ ಕಾರ್ಯಕ್ರಮದಲ್ಲಿ ಕಿರುತೆರೆ ನಟಿಯರಾದ ಭವ್ಯಗೌಡ, ಮೌನ ಗುಡ್ಡೆಮನೆ, ನಟ ರಿಥ್ವಿಕ್ ಕೃಪಾಕರ್ ಭಾಗಿಯಾಗಲಿದ್ದಾರೆ. ಆದರೆ ಊರ ಹಬ್ಬದ ಮಧ್ಯೆ ಮತ್ತೊಂದು ಪ್ರತ್ಯೇಕ ಕಾರ್ಯಕ್ರಮ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ಇದೀಗ ಜಾಗ ಬದಲಾಗಿದೆ.

ಮೊಸರು ಕುಡಿಕೆ ಉತ್ಸವದಲ್ಲೂ ನಡೀತಿದ್ಯಾ ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್?

ಅಸಲಿಗೆ ಕುಂಪಲಾಷ್ಟಮಿ ದಿನವೇ ಠಕ್ಕರ್ ಕೊಡೋ ರೀತಿಯಲ್ಲಿ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಹೆಸರಲ್ಲಿ ಕುಂಪಲದಲ್ಲಿ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಲಾಗಿದೆ. ‌ಇನ್ನು ಈ ಕಾರ್ಯಕ್ರಮದ ಹಿಂದಿರೋ ಶಕ್ತಿ ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ಕುಂಪಲ. ಕೆಲ ಸಮಯದಿಂದೀಚೆಗೆ ಉಳ್ಳಾಲ ಭಾಗದಲ್ಲಿ ಪ್ರಕಾಶ್ ಕುಂಪಲ ಹೆಸರು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಕೇವಲ ಬ್ಯಾನರ್ ಗಳಲ್ಲಷ್ಟೇ ಅಲ್ಲದೇ ಕುಂಪಲದ ಹಲವು ಕಾರ್ಯಕ್ರಮಗಳಿಗೆ ವಿವಿಐಪಿ, ವಿಐಪಿಗಳನ್ನ ಕರೆಸಿ ಸೆಲೆಬ್ರಿಟಿಗಳ ಜೊತೆಗೆ ಅತ್ಯಂತ ಸಮೀಪದ ನಂಟು ಹೊಂದಿರೋ ವ್ಯಕ್ತಿ ಈ ಪ್ರಕಾಶ್ ಕುಂಪಲ. ಹಲವು ರಾಜಕಾರಣಿಗಳ ಪರಮಾಪ್ತ ವಲಯದಲ್ಲೂ ಇವರ ಹೆಸರು ಚಾಲ್ತಿಯಲಿದೆ. ಹೀಗಾಗಿಯೇ ರಾಜಕೀಯವಾಗಿ ಬೆಳೀತಾ ಇರೋ ಈ ಯುವನಾಯಕ ಈ ಭಾಗದಲ್ಲಿ ಹಲವು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹಾಗೇ ನೋಡಿದರೆ ಕುಂಪಲದ ಮತ್ತೊಂದು ದೊಡ್ಡ ಹೆಸರು ಈಗಿನ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರದ್ದು. ರಾಜಕೀಯದ ಹಿರಿಯ ತಲೆ ಸತೀಶ್ ಕುಂಪಲ ಬಾಲಕೃಷ್ಣ ಮಂದಿರದಲ್ಲಿ ಕಟ್ಟಿದ ಕುಂಪಲಾಷ್ಟಮಿ ಸದ್ಯ ಈ ಭಾಗದ ಅತ್ಯಂತ ಜನಪ್ರಿಯ ಉತ್ಸವಗಳ ಸಾಲಿನಲ್ಲಿ ಬಂದು ನಿಂತಿದೆ. ಅದರಲ್ಲೂ ಸತೀಶ್ ಕುಂಪಲ ಬಿಜೆಪಿ ಜಿಲ್ಲಾಧ್ಯಕ್ಷರಾಗಿರೋ ಈ ಹೊತ್ತಲ್ಲಿ ಈ ಕುಂಪಲಾಷ್ಟಮಿ ಸಂಭ್ರಮ ಮತ್ತಷ್ಟು ಮೇಲೈಸಿದೆ. ಆದರೆ ಈ ಹೊತ್ತಲ್ಲೇ ಕುಂಪಲದ ಮಣ್ಣಲ್ಲಿ ವಿಭಜನೆ ರಾಜಕೀಯ ಭಾರೀ ಚರ್ಚೆ ಹುಟ್ಟು ಹಾಕಿದೆ. ಒಂದು ಗ್ರಾಮದ ಸಂಭ್ರಮದ ಹಬ್ಬದ ಮಧ್ಯೆ ಮತ್ತೊಂದು ಗ್ರಾಮದ ಉತ್ಸವದ ಹೆಸರಿನಲ್ಲಿ ಅದೇ ಊರಲ್ಲಿ ಪ್ರತ್ಯೇಕ ಕಾರ್ಯಕ್ರಮವೊಂದು ಆಯೋಜನೆಯಾಗಿರೋದು ಇಲ್ಲಿನ ರಾಜಕೀಯ ಜಿದ್ದಾಜಿದ್ದಿನ ಕಥೆ ಹೇಳ್ತಿದೆ. ಬಿಜೆಪಿಯ ಪ್ರಭಾವಿ ನಾಯಕ ಸತೀಶ್ ಕುಂಪಲರ ಸಾರಥ್ಯದ ಕುಂಪಲಾಷ್ಟಮಿಗೆ ಠಕ್ಕರ್ ಕೊಡಲೆಂದೇ ಕುಂಪಲ ಶಾಲೆಯ ಮೈದಾನದಲ್ಲಿ ತಾರಾ‌ಮೆರುಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅನ್ನೋ ಮಾತುಗಳು ಕುಂಪಲದ ಹಾದಿ ಬೀದಿಯಲ್ಲಿ ಹರಿದಾಡ್ತಿದೆ. ಕಾಂಗ್ರೆಸ್ ನ ಪ್ರಭಾವಿಗಳ ಆಪ್ತರಾಗಿರೋ ಪ್ರಕಾಶ್ ಕುಂಪಲ, ಬಿಜೆಪಿಯ ಪ್ರಭಾವಿ ನಾಯಕ ಸತೀಶ್ ಕುಂಪಲರ ಪ್ರಭಾವ ಕುಗ್ಗಿಸಲು ಇಂಥದ್ದೊಂದು ಕಾರ್ಯಕ್ರಮವನ್ನ ಕುಂಪಲಾಷ್ಟಮಿ ದಿನವೇ ಕುಂಪಲದ ಮೈದಾನದಲ್ಲೇ ಹಮ್ಮಿಕೊಂಡಿದ್ದಾರಾ ಅನ್ನೋ ಚರ್ಚೆಗಳೂ ಇತ್ತು.

Exit mobile version