Site icon Ullalavani

ಭಾರತ ಬಯಲು ಬಹಿರ್ದೆಸೆ ಮುಕ್ತವೆಂದು ಪ್ರಧಾನಿ ಹೇಳಿದರೂ , ಉಳ್ಳಾಲ ತಾಲೂಕು ಪಾವೂರಿನ ಏಳು ಮನೆಗಳಿಗೆ ಈಗಲೂ ಶೌಚಾಲಯಗಳೇ ಇಲ್ಲ !

ಹರೇಕಳ : ದೇಶ ಬಯಲುಶೌಚ ಮುಕ್ತ ಎಂದು ಪ್ರಧಾನಿಯವರು ಹೇಳಿಕೆ ನೀಡಿ ಐದು ವರ್ಷಗಳು ಕಳೆದಿದ್ದರೂ, ಉಳ್ಳಾಲ ತಾಲೂಕು ವ್ಯಾಪ್ತಿಗೆ ಬರುವ ಪಾವೂರು ಗ್ರಾಮದ ಮಂಚವುದಡಿ, ಬಾವಲಿಗುರಿ, ಉಗ್ಗನಬೈಲು, ಇನೋಳಿ ಬಿ ಸೈಟ್ ನ ಏಳು ಮನೆಗಳ ನಿವಾಸಿಗಳು ಈಗಲೂ ಬಹಿರ್ದೆಸೆಗೆ ಹೋಗಬೇಕಾಗಿದೆ. ಆರ್ಥಿಕವಾಗಿ ಹಿಂದುಳಿದ, ಹಿಂದುಳಿದ ವರ್ಗದವರೇ ಇರುವ ಏಳು ಮನೆಗಳಲ್ಲಿ ಈಗಲೂ ಶೌಚಾಲಯಗಳೇ ಇಲ್ಲ.

ಪಾವೂರು ಗ್ರಾಮದಲ್ಲಿ ಹಾಕಲಾಗಿರುವ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ನಾಮಫಲಕ

ಏಳು ಮನೆಗಳ ಪೈಕಿ ಒಂದು ಮನೆಯಲ್ಲಿ ಒಂಟಿ ಮಹಿಳೆಯಿದ್ದು, ಉಳಿದ ಎಲ್ಲಾ ಮನೆಗಳಲ್ಲಿ ಹೆಣ್ಮಕ್ಕಳು ಸೇರಿದಂತೆ ಮಹಿಳೆಯರೇ ಜಾಸ್ತಿಯಿದ್ದಾರೆ. ಅವರೆಲ್ಲರೂ ಈಗಲೂ ಶೌಚಾಲಯ ನಿರ್ಮಿಸಲು ಆರ್ಥಿಕ ಅಡಚಣೆಯಿರುವುದರಿಂದ ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. ಇತ್ತೀಚೆಗೆ ವಿಧಾನಸಭಾ ಚುನಾವಣೆಗೆ ಮತಬೇಟೆಗೆಂದು ತೆರಳಿದ್ದ ಪಕ್ಷದ ಕಾರ್ಯಕರ್ತರನ್ನು ಅಷ್ಟೂ ಮನೆಮಂದಿ ಝಾಡಿಸಿದ್ದಾರೆ. ಆದರೆ ಈ ಪೈಕಿ ನೋವುಂಡ ಕಾರ್ಯಕರ್ತರೊಬ್ಬರು ಗ್ರಾಮ ಪಂಚಾಯಿತಿನ ಕದ ತಟ್ಟಿದ್ದಾರೆ. ಆದರೂ ಅಧಿಕಾರಿಯಿಂದ ಸ್ಪಂಧನೆ ಸಿಗದೇ ಇದ್ದಾಗ ಮೇಲಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ನಡುವೆ ಸಂವಿಧಾನಾತ್ಮಕವಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವ ಒತ್ತಾಯವನ್ನು ಮೇಲಿನ ಅಧಿಕಾರಿಗಳಿಗೆ ಮಾಡಿದಾಗ ಸರಕಾರದಿಂದ ಸಾಮಾನ್ಯ ವರ್ಗದವರಿಗೆ 12,000 ಮತ್ತು ಪರಿಶಿಷ್ಟ ಜಾತಿ/ಪಂಗಡದವರಿಗೆ ರೂ. 20,000 ಅನುದಾನ ಸಿಗುವ ಭರವಸೆ ಸಿಕ್ಕಿದೆ. ಆದರೆ ಸದ್ಯ ಕಟ್ಟಡ ಕಾಮಗಾರಿಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಅಂದಾಜು ರೂ.35,000 ರಷ್ಟು ವೆಚ್ಚ ತಗಲುವ ಲೆಕ್ಕಾಚಾರ ಮಾಡಿದ್ದಾರೆ. ಆದರೆ ಕಾಮಗಾರಿ ನಡೆದ ನಂತರ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುವ ಕಾನೂನು ಸ್ಥಳೀಯ ಅಧಿಕಾರಿಗಳು ನೀಡಿದ್ದಾರೆ. ಇದರಿಂದ ರೋಸಿಹೋದ ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುವ ಮನೆಮಂದಿ ಶೌಚಾಲಯದ ಉಸಾಬಾರಿಯೇ ಬೇಡ ಎಂದು ಬಹಿರ್ದೆಸೆಯನ್ನು ಮುಂದುವರಿಸಿದ್ದಾರೆ. ಸ್ಥಳೀಯರೊಬ್ಬರ ಪ್ರಕಾರ ಇಡೀ ಪ್ರದೇಶ ವಸತಿಗಳಿಂದ ತುಂಬಿದ್ದು, ಇಲ್ಲಿ ಅಷ್ಟೂ ಮನೆಮಂದಿ ಅದೂ ಎಳೆಯ ಹರೆಯದ ಹೆಣ್ಮಕ್ಕಳು ಬಹಿರ್ದೆಸೆಗೆ ಹೋಗುವ ರೀತಿಯನ್ನು ಕಾಣುವಾಗ ಬಹಳಷ್ಟು ಬೇಸರವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಶೌಚಾಲಯ ನಿರ್ಮಾಣಕ್ಕೆ ಟ್ರಸ್ಟ್ ಗಳು, ಸಂಸ್ಥೆಯ ಸಿಎಸ್ ಆರ್ ನಿಧಿಯಿಂದಾದರೂ ತಕ್ಷಣವೇ ಶೌಚಾಲಯ ನಿರ್ಮಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ಸ್ವಾಗತ ಎಂದು ದೊಡ್ಡದಾದ ನಾಮಫಲಕವನ್ನೂ ಅಳವಡಿಸಿದೆ. ಅಲ್ಲದೆ ಬಯಲು ಬಹಿರ್ದೆಸೆಯಿಂದ ಮುಕ್ತವಾದ ದಿನಾಂಕ :೨-೧೦-೨೦೧೬ ಎಂದು ಹೇಳಿಕೊಂಡಿದೆ. ಆದರೆ ಅಷ್ಟೂ ಲೆಕ್ಕಾಚಾರವನ್ನು ಇಲಾಖೆಗಳಿಗೆ ತೋರಿಸಿ ಸರಕಾರ ನೀಡಿದಂತಹ ಅನುದಾನಗಳನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಎಲ್ಲಿಗೆ ನೀಡಿದ್ದಾರೆ. ಅನುದಾನದ ದುರುಪಯೋಗವಾಗಿದೆಯೇ ಅನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಮಾಡಿದ್ದಾರೆ.

Exit mobile version